ಪುತ್ತೂರು : ನ 24 : ಪುತ್ತೂರಿನ ಕೊಂಬೆಟ್ಟುವಿನಲ್ಲಿರುವ ಸರಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮಧ್ಯೆ ಇಂದು ( ನ 24) ಮತ್ತೆ ಹೊಡೆದಾಟ ನಡೆದ ಬಗ್ಗೆ ವರದಿಯಾಗಿದೆ. ನಿನ್ನೆ ಮಧ್ಯಾಹ್ನ ವಿದ್ಯಾರ್ಥಿನಿಯರ ವಿಚಾರವಾಗಿ ಭಿನ್ನ ಕೋಮಿಗೆ ಸೇರಿದ ವಿದ್ಯಾರ್ಥಿಗಳ ಎರಡು ತಂಡಗಳು ಕಾಲೇಜ್ ಅವರಣದಲ್ಲಿ ಹೊಡೆದಾಡಿಕೊಂಡಿದ್ದವು.
ಅದರ ಮುಂದುವರಿದ ಭಾಗವಾಗಿ ಇಂದು ಮಧ್ಯಾಹ್ನ ಮತ್ತೆ ಭಿನ್ನ ಕೋಮಿಗೆ ಸೇರಿದ ವಿದ್ಯಾರ್ಥಿಗಳ ಎರಡು ತಂಡಗಳು ಬಡಿದಾಡಿಕೊಂಡಿವೆ. ಇಂದಿನ ಹೊಡೆದಾಟದಲ್ಲಿ ಒಟ್ಟು ಐವರು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ. ಎಲ್ಲರೂ ಪಿಯುಸಿ ವಿದ್ಯಾರ್ಥಿಗಳಾಗಿದ್ದು ಅಪ್ರಾಪ್ತರಾಗಿದ್ದಾರೆ.
ಇಂದಿನ ಹೊಡೆದಾಟ ಹೇಗೆ ಆರಂಭವಾಯಿತು ? ಎನ್ನುವ ಬಗ್ಗೆ ನಿಖರ ಮಾಹಿತಿ ಇನ್ನು ಲಭ್ಯವಾಗಿಲ್ಲ . ಸದ್ಯ ಗಾಯಗೊಂಡ ಎರಡು ತಂಡದವರು ತಮ್ಮ ತಮ್ಮ ಪರವಾದ ವಾದಗಳನ್ನು ಮುಂದಿಡುತ್ತಿದ್ದಾರೆ. ಪೊಲೀಸರು ಈಗಷ್ಟೆ ಪ್ರಕರಣ ದಾಖಲಿಸಿಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಿದ್ದು ಗಾಯಾಳು ವಿದ್ಯಾರ್ಥಿಗಳ ಹೇಳಿಕೆಯನ್ನು ದಾಖಲಿಸುವ ಕಾರ್ಯದಲ್ಲಿ ನಿರತರಾಗಿರುವುದಾಗಿ ತಿಳಿದು ಬಂದಿದೆ.
ಕೊಂಬೆಟ್ಟು ಶಾಲಾ ವಿದ್ಯಾರ್ಥಿಗಳಾದ ಮುಕ್ವೆ ನಿವಾಸಿ ಉಮ್ಮರ್ ಎಂಬವರ ಪುತ್ರ ಸೈಫುದ್ದೀನ್ ಹಾಗೂ ಬನ್ನೂರು ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಪುತ್ರ ಇಮ್ರಾನ್ ಹಾಗೂ ಇನ್ನೂರ್ವ ವಿದ್ಯಾರ್ಥಿ ಗಾಯಗೊಂಡು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿ ವಿದ್ಯಾರ್ಥಿಗಳೂ ನಿನ್ನೆಯ ಹೊಡೆದಾಟ ಖಂಡಿಸಿ ಪುತ್ತೂರು ಠಾಣೆಯ ಬಳಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯ ಬಳಿಕ 30 ಜನರ ಗುಂಪೊಂದು ಈ ಮೂವರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳ ಪರವಾಗಿರುವರು ಆರೋಪಿಸಿದ್ದಾರೆ.

ಇನ್ನೂ, ಇನ್ನೊಂದು ತಂಡದ ಇದೇ ಕಾಲೇಜಿನ ವಿದ್ಯಾರ್ಥಿಗಳಾದ ಪ್ರಜ್ವಲ್ ಮತ್ತು ತೇಜಸ್ ಎಂಬವರು ಗಾಯಾಳುವಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
“ ಕಾಲೇಜಿಗೆ ಹೊರಗಿನವರು ಬಂದು ಹಲ್ಲೆ ನಡೆಸಿದ್ದೂ ಈ ಬಗ್ಗೆ ಕೂಲಂಕುಶವಾಗಿ ತನಿಖೆ ನಡೆಸಬೇಕೆಂದು ಆಗ್ರಹಿಸಿ ಪುತ್ತೂರು ನಗರ ಪೊಲೀಸ್ ಠಾಣೆಗೆ ವಿದ್ಯಾರ್ಥಿ ಸಂಘಟನೆ ಮೂಲಕ ಮನವಿ ನೀಡಿ ಹಿಂದಿರುಗುತ್ತಿದ್ದ ವೇಳೆ ಹಲ್ಲೆ ನಡೆಸಿದ್ದಾರೆ. ಕಾಲೇಜಿಗೆ ಸಂಬಂಧಪಡದ ವ್ಯಕ್ತಿಗಳು ಬಿಳಿ ಬಣ್ಣದ ಕಾರಿನಲ್ಲಿ ಬಂದು ಅವರ ಬಳಗದ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸೇರಿಕೊಂಡು ಕಾಲೇಜು ಬಳಿಯ ಕಾಲು ದಾರಿಯಲ್ಲಿ ಅವಿತು ನಮ್ಮ ಮೇಲೆ ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ ಎಂದು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳು ಆರೋಪಿಸಿದ್ದಾರೆ.

ನಿನ್ನೆ ನಡೆದಾಟದ ಹೊಡೆದಾಟದ ಬಗ್ಗೆ ಎರಡು ತಂಡದ ವಿದ್ಯಾರ್ಥಿಗಳ ಹೇಳಿಕೆಗಳನ್ನು ವಿಡಿಯೋ ರೂಪದಲ್ಲಿ ಪೊಲೀಸರು ದಾಖಲಿಸಿಕೊಂಡು NC ( ಅಸಂಜ್ಣೆಯ ಪ್ರಕರಣ) ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪುತ್ತೂರಿನ ಅತ್ಯಂತ ಪುರಾತನ ಕಾಲೇಜ್ ಹಾಗೂ ಹಲವಾರು ಶ್ರೇಷ್ಟ ವ್ಯಕ್ತಿಗಳನ್ನು ನಾಡಿಗೆ ನೀಡಿದ ಇತಿಹಾಸವಿರುವ ಕಾಲೇಜ್ ಹೊಡೆದಾಟದ ತಾಣವಾಗುತ್ತಿರುವುದು ಪುತ್ತೂರಿನ ಪ್ರಜ್ಣಾವಂತರ ನೋವಿಗೆ ಕಾರಣಾವಾಗಿದೆ. 90ರ ದಶಕದಲ್ಲೂ ಈ ಕಾಲೇಜ್ ಇದೇ ರೀತಿಯ ಹೊಡೆದಾಟಕ್ಕೆ ಕಾರಣವಾಗಿತ್ತು . ಆಗ ಅಲ್ಲಿಗೆ ಪ್ರಾಂಶುಪಾಲರಾಗಿ ಆಗಮಿಸಿದ ನಿವೃತ್ತ ಸೈನಿಕ ಕುಂಜಪ್ಪನವರು ಇಡೀ ಕಾಲೇಜಿನ ಚಿತ್ರಣವನ್ನೆ ಬದಲಾಯಿಸಿದರು. ಇಲ್ಲಿನ ಎರಡು ಪ್ರತಿಷ್ಟಿತ ಖಾಸಗಿ ಕಾಲೇಜುಗಳಿಗೆ ಸಡ್ಡು ಹೊಡೆಯುವ ರೀತಿಯಲ್ಲಿ ಇಲ್ಲಿಯ ವಿದ್ಯಾರ್ಥಿಗಳ ಭವಿಷ್ಯವನ್ನು ಅವರು ರೂಪಿಸಿದರು . ಇದೀಗ ಮತ್ತೊಮ್ಮೆ ಇಲ್ಲಿನ ಶಾಲಾ ಅಡಳಿತ ಮಂಡಳಿ ಈ ರೀತಿಯ ಕಠಿನ ನಿರ್ಧಾರ ತಳೆಯುವ ಅನಿವಾರ್ಯತೆ ಬಂದೂದಗಿದೆ.
