ತನ್ನ ಒಡೆತನದ ಕೃಷಿ ಜಮೀನು ನೋಡಲು ಮೈಸೂರಿನಿಂದ ಪುತ್ತೂರಿಗೆ ಆಗಮಿಸಿದ ವ್ಯಕ್ತಿಯೊಬ್ಬರು ನಿಗೂಢವಾಗಿ ಕಣ್ಮರೆಯಾದ ಪ್ರಕರಣವೂ ಭಾರೀ ತಿರುವು ಪಡೆದಿದ್ದು, ಅವರನ್ನು ಹತ್ಯೆಗೈದು ಅರಣ್ಯ ಇಲಾಖೆಗೆ ಸೇರಿದ ಜಮೀನಿನಲ್ಲಿ ಹುಗಿದಿಟ್ಟಿರುವುದು ಕೃತ್ಯ ನಡೆದ ಐದು ದಿನಗಳ ಬಳಿಕ (ನ.24 ರಂದು) ಪತ್ತೆಯಾಗಿದೆ.
ಮೂಲತ : ಮಂಗಳೂರು ನಗರದ ಹೊರವಲಯ ಕೂಳೂರು ಸಮೀಪದ ಶಿವನಗರ ನಿವಾಸಿ ದಿ. ಶಂಭು ಶೆಟ್ಟಿಯವರ ಪುತ್ರ , ಪ್ರಸ್ತುತ ಮೈಸೂರಿನ ಸುಬ್ರಹ್ಮಣ್ಯ ನಗರ ನಿವಾಸಿ ಜಗದೀಶ್ ಶೆಟ್ಟಿ (58ವ) ಕೊಲೆಯಾದವರು . ವೃತ್ತಿಯಲ್ಲಿ ಪೋಟೋಗ್ರಾಫರ್ ಆಗಿದ್ದ ಇವರು ಪತ್ನಿ ಶರ್ಮಿಳಾ ಹಾಗೂ ಮಗ 9ನೇ ತರಗತಿ ವಿದ್ಯಾರ್ಥಿ ಶಶಾಂಕ್ ಜತೆ ಮೈಸೂರಿನ ಸುಬ್ರಹ್ಮಣ್ಯ ನಗರದಲ್ಲಿ ವಾಸಿಸುತ್ತಿದ್ದರು.
ಮೃತ ಜಗದೀಶರವರ ಸಂಬಂದಿ ( ಮಾವ) ಈಶ್ವರಮಂಗಲ ಸಮೀಪದ ಪುಲಿತ್ತಡಿ ಪಟ್ಲಡ್ಕ ನಿವಾಸಿ ಭಾಲಕೃಷ್ಣ ರೈ ಅಲಿಯಾಸ್ ಸೋಮಪ್ಪ ರೈ ಎಂಬವರು ಪ್ರಕರಣದ ಪ್ರಮುಖ ಆರೋಪಿಯಾಗಿದ್ದು ಅವರ ಮಗ ಪ್ರಶಾಂತ್, ಪತ್ನಿ ಜಯಲಕ್ಮೀ ಹಾಗೂ ಮಗನ ಸ್ನೇಹಿತ, ಮನೆಯ ಸಮೀಪದ ಸುಳ್ಯದಲ್ಲಿ ಪೋಟೋಗ್ರಾಫರ್ ಆಗಿರುವ ಜೀವನ್ ಪ್ರಸಾದ್ ಜತೆ ಸೇರಿ ಈ ಹತ್ಯೆ ಹಾಗೂ ಅದನ್ನು ಮುಚ್ಚಿ ಹಾಕುವ ಕೃತ್ಯ ಎಸಗಿದ್ದಾರೆ ಎಂದು ತನಿಖೆಯಿಂದ ಬಹಿರಂಗವಾಗಿದೆ. ಈ ಪೈಕಿ ಮೂವರನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿದು ಬಂದಿದೆ.

ಕಾವು – ಈಶ್ವರಮಂಗಲ ರಸ್ತೆಯ ನೆಟ್ಟಣಿಗೆ ಮುಡ್ನೂರು ಗ್ರಾಮದ ಪುಳಿತ್ತಡಿ ಗಿಂತ 1.5 ಕಿಮೀ ದೂರದಲ್ಲಿರುವ ಮುಗುಳಿಯ ರಕಿತಾರಣ್ಯದ ಜಮೀನಿನಲ್ಲಿ ಜಗದೀಶ್ ರವರ ಮೃತ ದೇಹವನ್ನು ಹುಗಿದಿಡಲಾಗಿತ್ತು. ಪೊಲೀಸರು ತನಿಖೆ ವೇಳೆ ಸಂಗ್ರಹಿಸಿದ ತಾಂತ್ರಿಕ ಮಾಹಿತಿ, ಸಾಂಧರ್ಭಿಕ ಸುಳಿವುಗಳನ್ನು ಅಧರಿಸಿ ಮೂವರು ಆರೋಪಿಗಳನ್ನು ನ 23 ರಂದು ಸಂಜೆ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದು ಈ ವೇಳೆ ಅವರ ಪೈಕಿ ಓರ್ವ ಕೃತ್ಯದ ಸಂಪೂರ್ಣ ವಿವರವನ್ನು ಬಾಯ್ಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಬಳಿಕ ಆರೋಪಿಗಳ ಜತೆ ಮೃತ ದೇಹ ಹುಗಿದಿಟ್ಟ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಗಳು ತೋರಿಸಿದ ಜಾಗದಲ್ಲಿ ಭೂಮಿಯನ್ನು ಅಗೆದು ಶವವನ್ನು ಹೊರಗೆ ತೆಗೆದಿದ್ದಾರೆ. ಶವವನ್ನು ಪ್ಲಾಸ್ಟಿಕ್ ಟರ್ಪಾಲ್ ನಲ್ಲಿ ಮುಚ್ಚಿ ಸುಮಾರು 4 ಅಡಿ ಆಳದ ಗುಂಡಿ ತೆಗೆದು ಅದರಲ್ಲಿ ಹಾಕಲಾಗಿತ್ತು. ಬಳಿಕ ಶವವನ್ನು ಮಣ್ಣಿನಿಂದ ಮುಚ್ಚಲಾಗಿತ್ತು. ಹೊರ ತೆಗೆದ ಶವವೂ ಸಂಪೂರ್ಣವಾಗಿ ಬಾತುಕೊಂಡು ದುರ್ವಾಸನೆ ಬೀರುತಿತ್ತು.

ಮೂಲಗಳ ಪ್ರಕಾರ ಕೊಲೆಯಾದ ಜಗದೀಶ್ ಶೆಟ್ಟಿಯವರು ಪುತ್ತೂರು ತಾಲೂಕಿನ ಅರ್ಯಾಪು ಗ್ರಾಮದ ಕುಂಜೂರು ಪಂಜ ಎಂಬಲ್ಲಿ ಹಾಗೂ ಈಶ್ವರಮಂಗಲ ಸಮೀಪದ ಪುಳಿತ್ತಡಿ ಎಂಬಲ್ಲಿ ಒಟ್ಟು ಎರಡು ಕೃಷಿ ಜಮೀನು ಹಲವು ಸಮಯಗಳ ಹಿಂದೆ ಖರೀದಿಸಿದ್ದರು ಎನ್ನಲಾಗುತ್ತಿದೆ, ಜಾಗದ ಬಹುಪಾಲು ಹಣವನ್ನು ನೀಡಿದ ಬಳಿಕವೂ ಜಾಗದ ಕಾಗದ ಪತ್ರಗಳನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡಿರಲಿಲ್ಲ ಎಂದು ಹೇಳಲಾಗುತ್ತಿದೆ. ಜಗದೀಶ್ ರವರು ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿರುವ ಈ ಎರಡು ಜಮೀನಿನ ಕೃಷಿ ಸಂಬಂದಿ ಚಟುವಟಿಕೆಗಳನ್ನು ಪ್ರಮುಖ ಆರೋಪಿ ಭಾಲಕೃಷ್ಣ ರೈಯವರೆ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಜಗದೀಶರವರ ಚಿಕ್ಕಮ್ಮನ ಮಗನನ್ನು ಭಾಲಕೃಷ್ಣ ರೈವರ ಮಗಳಿಗೆ ತಂದುಕೊಂಡ ಬಳಿಕ ಅವರ ನಡುವೆ ನೆಂಟಸ್ತಿಕೆ ಬೆಳೆದಿತ್ತು. ಇದೇ ವಿಶ್ವಾಸದಲ್ಲಿ ತನ್ನ ಜಮೀನಿನ ಹಾಗೂಹೊಗುಗಳ ಸಂಪೂರ್ಣ ಜವಬ್ದಾರಿಯನ್ನು ಜಗದೀಶ್ ರವರು ರಾಧಾಕೃಷ್ಣ ರೈ ಕೈಗೆ ಒಪ್ಪಿಸಿದ್ದರು ಎಂದು ಹೇಳಲಾಗಿದೆ
ಜಗದೀಶ್ ರವರು ಖರೀದಿಸಿದ್ದಾರೆ ಎನ್ನಲಾಗುತ್ತಿರುವ ಈ ಎರಡು ಜಮೀನಿನ ಪೈಕಿ ಪುಲಿತ್ತಡಿಯ ಜಮೀನು ಭಾಲಕೃಷ್ಣ ರೈ ಯವರ ಹತ್ತಿರದ ಸಂಬಂಧಿಯೊಬ್ಬರಿಗೆ ಸೇರಿದಾಗಿತ್ತು. ಸುಮಾರು 40 ಲಕ್ಷದಷ್ಟು ಬೆಳೆ ಬಾಳುವ ಈ ಜಮೀನನ್ನು ಜಗದೀಶ್ ರವರು ಖರೀದಿಸುವರೇ ದುಡ್ಡು ಕೊಟ್ಟು ಹಲವು ಸಮಯ ಕಳೆದಿತ್ತು, ಆದರೇ ಈ ಬಗೆಗಿನ ಕ್ರಯಪತ್ರ ಮಾಡಿಸಿಕೊಂಡಿರಲಿಲ್ಲ ಎನ್ನುವುದು ಈ ಹತ್ಯೆ ನಡೆಯಲು ಮೂಲಧಾತು ಎನ್ನಲಾಗುತ್ತಿದೆ.

ಕೊಲೆ ಯಾಕೆ ?
ನ . 18 ರಂದು ಬೆಳಿಗ್ಗೆ ತನ್ನ ಕೃಷಿ ಜಮೀನುಗಳನ್ನು ನೋಡಲು ಮೈಸೂರಿನಿಂದ ಪುತ್ತೂರಿಗೆ ಆಗಮಿಸಿದ ಜಗದೀಶ್ ಆರ್ಯಾಪು ಗ್ರಾಮದ ಕುಂಜೂರು ಪಂಜದಲ್ಲಿರುವ ತನ್ನ ಎರಡು ಎಕ್ರೆ ಕೃಷಿ ಭೂಮಿಗೆ ಮೊದಲು ಭೇಟಿ ನೀಡಿದ್ದರು. ಬಳಿಕ ಅವರು ಪುಲಿತ್ತಡಿಯ ಜಮೀನು ವೀಕ್ಷಣೆಗೆಂದು ತೆರಳಿದ್ದು ಈ ವೇಳೆ ಅವರಿಗೆ ಅಚ್ಚರಿಯೊಂದು ಕಾದಿತ್ತು. ಇವರು ಖರೀದಿಸಿದ್ದಾರೆ ಎನ್ನಲಾಗುತ್ತಿರುವ ಜಮೀನನ್ನು ಪ್ರಮುಖ ಆರೋಪಿಯೂ ಬೇರೊಬ್ಬರಿಗೆ 30ರಿಂದ 35 ಲಕ್ಷ ರೂಪಾಯಿ ಹಣಕ್ಕೆ ಮಾರಾಟ ಮಾಡಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ. ಈ ವಿಚಾರವಾಗಿ ಪ್ರಮುಖ ಆರೋಪಿ ಹಾಗೂ ಜಗದೀಶ್ ಮಧ್ಯೆ ವಾಗ್ವಾದ ನಡೆದಿದೆ ಎನ್ನಲಾಗಿದೆ . ಈ ಹಂತದಲ್ಲಿ ಜಗದೀಶ್ ಅವರನ್ನು ಉಪಾಯವಾಗಿ ಕಾರಿನಲ್ಲಿ ಕೂರಿಸಿದ ಆರೋಪಿಗಳು ಬಳಿಕ ಸುತ್ತಿಗೆಯಿಂದ ತಲೆಗೆ ಬಡಿದು ಹತ್ಯೆಗೈದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಟ್ಟುಕಥೆ:
ನ .19 ರಂದು ನಸುಕಿನ ಜಾವ ಜಗದೀಶ್ ರವರ ಪತ್ನಿ ಶರ್ಮಿಳಾರವರು ಪತಿಯ ಮೊಬೈಲ್ ಗೆ ಕರೆ ಮಾಡಿದ್ದು ಅದು ಸ್ವಿಚ್ಡ್ ಅಫ್ ಬರುತಿತ್ತು. ಇದರಿಂದ ಆತಂಕಿತರಾದ ಅವರು ಪತಿಯ ಅಣ್ಣ ಶಶಿಧರ ಎಂಬವರಲ್ಲಿ ತಿಳಿಸಿದ್ದು, ಅವರು ಭಾಲಕೃಷ್ಣ ರೈಯವರಲ್ಲಿ ಈ ಬಗ್ಗೆ ವಿಚಾರಿಸಿದ್ದಾರೆ. ನ 18 ರಂದು ಸಂಜೆ ಪುಲಿತ್ತಡಿಗೆ ಆಗಮಿಸಿದ ಜಗದೀಶ್ ರವರು ಬಳಿಕ ಮೈಸೂರಿಗೆ ತೆರಳಿದ್ದಾರೆ ಎಂದು ಭಾಲಕೃಷ್ಣ ರೈ ಯವರು ಈ ವೇಳೆ ಉತ್ತರಿಸಿದ್ದಾರೆ. ಕಾವು ಬಳಿ ಜಗದೀಶರವರು ಪುತ್ತೂರು – ಸುಳ್ಯ ಮಾರ್ಗವಾಗಿ ತೆರಳುತ್ತಿದ್ದ ಒಮ್ನಿಯೊದಕ್ಕೆ ಕೈ ಹಿಡಿದಿದ್ದು, ಈ ವೇಳೆ ಒಮ್ನಿಯವ ನಿಲ್ಲಿಸಿದ್ದು ಅದರಲ್ಲಿ ಜಗದೀಶ್ ಸುಳ್ಯದವರೆಗೆ ಲಿಪ್ಟ್ ಪಡಕೊಂಡು ಹೋಗಿದ್ದಾರೆ . ಕಾವುನಲ್ಲಿ ಒಮ್ನಿ ಹತ್ತುವ ವೇಳೆ ತಾನೂ ಅವರ ಜತೆಯಿದ್ದು, ಸುಳ್ಯದಿಂದ ಮೈಸೂರಿಗೆ ಬಸ್ಸಿನಲ್ಲಿ ತೆರಳುವುದಾಗಿ ಜಗದೀಶ್ ನನ್ನಲ್ಲಿ ತಿಳಿಸಿದ್ದಾರೆ ಎನ್ನುವ ವಿಚಾರವನ್ನು ಶಶಿಧರ್ ಬಳಿ ಬಾಲಕೃಷ್ಣ ರೈಯವರು ಹೇಳಿಕೊಂಡಿದ್ದರು. (ಪೊಲೀಸ್ ತನಿಖೆಯ ವೇಳೆ ಹಾಗೂ ಕಾವು ಬಳಿಯ ಸಿಸಿಟಿವಿ ಪರಿಶೀಲನೆ ವೇಳೆ ಇದೊಂದು ಕಟ್ಟುಕಥೆ ಎಂದು ತಿಳಿದು ಬಂದಿತ್ತು ಎನ್ನಲಾಗಿದೆ)
ಹೀಗಾಗಿ ಶಶಿಧರ್ ಶೆಟ್ಟಿಯವರು ತನ್ನ ತಮ್ಮ ನಾಪತ್ತೆಯಾಗಿರುವ ಬಗ್ಗೆ ಸಂಪ್ಯ ಠಾಣೆಗೆ ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಿಸಿ ಕೊಂಡ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು
ಪೊಲೀಸ್ ತನಿಖೆ ಹೇಗೆ – ಸಿಕ್ಕ ಸುಳಿವುಗಳೇನು ?
ಜಗದೀಶರವರ ಮೊಬೈಲ್ ಪೋನನ್ನು ಕೇಂದ್ರಿಕರಿಸಿ ಪೊಲೀಸರು ತನಿಖೆ ಆರಂಭಿಸಿದ್ದು ನ .19 ರ ಬೆಳಿಗ್ಗೆ 2.30ರ ಬಳಿಕ ಅದು ಸ್ವಿಚ್ಚಫ್ ಆಗಿತ್ತು. ಬಳಿಕ ಈ ಮೊಬೈಲ್ ನ. 22 ರ ಮಧ್ಯಾಹ್ನದ ಬಳಿಕ ಮೈಸೂರು ಸಮೀಪದ ಹುಡಗಲಿ ಬಳಿ ಇನಕಲ್ ಎಂಬಲ್ಲಿ ಬೇರೊಂದು ಸಿಮ್ ಕಾರ್ಡ್ ಜತೆ ಅಕ್ಟಿವೇಟ್ ಆಗಿತ್ತು ಎನ್ನಲಾಗಿದೆ. ಅಲ್ಲಿ ಹೋಗಿ ಪೊಲೀಸರು ಪರಿಶೀಲಿಸಿದಾಗ ಜಗದೀಶರವರ ಮೊಬೈಲ್ ಪೋನ್ ಒಬ್ಬ ಕುರಿಗಾಹಿ ಬಳಿ ಪತ್ತೆಯಾಗಿತ್ತು. ಆತನನ್ನು ಪೊಲೀಸರು ವಿಚಾರಣೆ ನಡೆಸಿದ್ದು ಅದು ಇನ್ನಕಲ್ ಎಂಬಲ್ಲಿ ಬಿದ್ದು ಸಿಕ್ಕಿರುವುದಾಗಿ ಆತ ತಿಳಿಸಿದ್ದ. ಆ ಕುರಿಗಾಹಿ ತೋರಿಸಿದ ಜಾಗದ ಸಮೀಪ ಅಳವಡಿಸಿದ ಸಿಸಿಟಿವಿಯನ್ನು ಪೊಲೀಸರು ಪರಿಶೀಲನೆ ನಡೆಸಿದ್ದು ಅಲ್ಲಿ ಮೊಬೈಲ್ ಬಿಸಾಡಿದವರ ಬಗ್ಗೆ ಪೊಲೀಸರಿಗೆ ಮಹತ್ವದ ಸುಳಿವು ಲಭಿಸಿತ್ತು ಎಂದು ಹೇಳಲಾಗುತ್ತಿದೆ .
ಹತ್ಯೆ ನಡೆದ ದಿನ ಕೊಲೆ ಕೃತ್ಯ ನಡೆದ ಸ್ಥಳದ ಮೊಬೈಲ್ ಲೊಕೇಷನ್, ಕೃತ್ಯ ಎಸಗಿದ ಮೂವರು ಆರೋಪಿಗಳ ಕಾಲ್ ರೆಕಾರ್ಡ್ಸ್ ಹಾಗೂ ಮೊಬೈಲ್ ಬಿಸಾಡಿದ ಜಾಗದಲ್ಲಿ ಸಿಕ್ಕ ಸಿಸಿಟಿವಿ ಪೊಟೇಜ್ ಇತ್ಯಾದಿಗಳ ಮಾಹಿತಿ ಸಂಗ್ರಹಿಸಿ, ಎಲ್ಲ ಮಾಹಿತಿಗಳನ್ನು ಒಟ್ಟು ಸೇರಿಸಿ ತಾಂತ್ರಿಕ ವಿಧಾನದ ಮೂಲಕ ತನಿಖೆ ನಡೆಸಿದ ಪೊಲೀಸರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಕೊಲೆ ಹೇಗೆ?
ನ 18 ರಂದು ಸಂಜೆ ಆರೋಪಿಗಳು ಜಗದೀಶ್ ರವರನ್ನು ತಮ್ಮ ಕಾರಿನಲ್ಲಿ ಕೂರಿಸಿದ ಬಳಿಕ ಪ್ರಮುಖ ಆರೋಪಿ ಭಾಲಕೃಷ್ಣ ರೈ ಯೂ ಹೊಡೆಯಲು ಸುತ್ತಿಗೆ ಎತ್ತಿದ್ದು ಈ ವೇಳೆ ಜಗದೀಶ್ ರವರು ಪ್ರಾಣ ಭಯದಿಂದ ಜಾಗವೂ ಬೇಡ ಹಣವೂ ಬೇಡ ನನ್ನನ್ನೂ ಬದುಕಲು ಬಿಡಿ ಎಂದು ಅಂಗಲಾಚಿದ್ದು , ಈ ವೇಳೆ ಸುತ್ತಿಗೆಯಿಂದ ಹೊಡೆದ ಆರೋಪಿಯೂ ಹೊಡೆದಾಯಿತು ಇನ್ನೆನ್ನೂ ಮಾಡುವುದು ಎಂದು ಯಾವುದೇ ಪಶ್ಚತಾಪ ಭಾವವಿಲ್ಲದೇ ಪ್ರಶ್ನಿಸಿರುವುದನ್ನು ಪೊಲೀಸ್ ತನಿಖೆಯ ವೇಳೆ ಬಾಯ್ಬಿಟ್ಟಿರುವುದಾಗಿ ಹೇಳಲಾಗುತ್ತಿದೆ.
ಶವ ಬಚ್ಚಿಟ್ಟ ಬಗೆ :
ಹತ್ಯೆಗೈದ ಬಳಿಕ ಒಂದಿಡಿ ರಾತ್ರಿ ಶವವನ್ನು ಕಾರಿನಲ್ಲಿಯೇ ಇರಿಸಿದ ಆರೋಪಿಗಳು ಮರುದಿನ ಅದನ್ನು ಜನ ಸಂಚಾರ ವಿರಳವಾಗಿರುವ ನೆಟ್ಟಣಿಗೆ ಮುಡ್ನೂರು ಗ್ರಾಮದ ಪುಲಿತ್ತಡಿ ಸಮೀಪದ ಮುಗುಳಿಯಲ್ಲಿ ರಕ್ಷಿತಾರಣ್ಯದಲ್ಲಿ ಹೂತು ಹಾಕಿದ್ದಾರೆ ಎನ್ನಲಾಗಿದೆ. ಹೂತು ಹಾಕಿದ ಸ್ಥಳದಿಂದ 600 ಮೀ ದೂರದವರೆಗೆ ಮಾತ್ರ ವಾಹನ ಸಂಚರಿಸುವ ಮಾರ್ಗವಿದ್ದು ಅಲ್ಲಿಯವರೆಗೆ ಕಾರಿನಲ್ಲಿ ಶವವನ್ನು ತಂದಿದ್ದಾರೆ. ಬಳಿಕ ಅಲ್ಲಿಂದ ಅದನ್ನು ಮೂವರು ಆರೋಪಿಗಳು ಸುಮಾರು 600 ಮೀ ದೂರದವರೆಗೆ ಹೊತ್ತು ಸಾಗಿಸಿದ್ದು ಬಳಿಕ ಅಲ್ಲಿ ಗುಂಡಿ ತೆಗೆದು ಮುಚ್ಚಿದ್ದಾರೆ ಎಂದು ತನಿಖೆಯ ವೇಳೆ ಆರೋಪಿಗಳು ಬಾಯ್ಬಿಟ್ಟಿರುವ ಬಗ್ಗೆ ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಸ್.ಪಿ, ಪುತ್ತೂರು ತಹಶೀಲ್ದಾರ್, ಡಿ.ವೈ.ಎಸ್ಸ್.ಪಿ, ಸರ್ಕಲ್ ಇನ್ಸ್‌ಪೆಕ್ಟರ್,ಸರ್ಕಲ್ ಇನ್ಸ್ಪೆಕ್ಟರ್ ಮತ್ತು ಬೆರಳಚ್ಚು ತಜ್ಞರು ತೆರಳಿ ಸ್ಥಳ ಮಹಜರು ನಡೆಸಿ ಮೃತದೇಹವನ್ನು ಮೃತದೇಹವನ್ನು ಮೃತರ ಮಂಗಳೂರಿನಲ್ಲಿರುವ ಮೂಲ ಮನೆಗೆ ಕೊಂಡೊಯ್ಯಲಾಗಿದೆ.