ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಎಕ್ಸಿಕ್ಯೂಟಿವ್ ಎಂಜಿನಿಯರ್ ಗೆ ಇಂದು ಬೆಳ್ಳಂಬೆಳ್ಳಿಗೆ ಎಸಿಬಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಸ್ಮಾರ್ಟ್ ಸಿಟಿ ಲಿಮಿಟೆಡ್ ನ ಇಇ ಕೆ.ಎಸ್.ಲಿಂಗೇ ಗೌಡ ನಿವಾಸಕ್ಕೆ ಬುಧವಾರ ( ನ. 24) ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಚಾಮರಾಜನಗರ, ಹಾಸನ, ಮೈಸೂರಿನ ಎ.ಸಿ.ಬಿ ಅಧಿಕಾರಿಗಳ ತಂಡದಿಂದ ದಾಳಿ ನಡೆದಿದೆ ಎಂದು ವರದಿಯಾಗಿದೆ. ಇಬ್ಬರು ಡಿ.ವೈ.ಎಸ್ಪಿ ಗಳ ನೇತ್ರತ್ವದಲ್ಲಿ 25ಕ್ಕೂ ಅಧಿಕ ಅಧಿಕಾರಿಗಳು ಕೆ.ಎಸ್.ಲಿಂಗೇ ಗೌಡರವರ ನಿವಾಸದಲ್ಲಿ ಶೋಧ ಕಾರ್ಯ ಹಾಗೂ ದಾಖಲೆ ಪರಿಶೀಲನೆಯಲ್ಲಿ ನಿರತರಾಗಿದ್ದಾರೆ.
ಕೆ.ಎಸ್.ಲಿಂಗೇ ಗೌಡ ರವರು ಕಾರ್ಯ ನಿರ್ವಹಿಸುವ ಮಹಾನಗರ ಪಾಲಿಕೆಯಲ್ಲಿನ ಕಚೇರಿ ಹಾಗೂ ಉರ್ವಾದಲ್ಲಿನ ಅವರ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಲಿಂಗೇಗೌಡರವರು ಕಳೆದ 30 ವರ್ಷಗಳಿಂದ ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಪಾಲಿಕೆಯ ಜೂನಿಯರ್ ಇಂಜಿನಿಯರ್ ಆಗಿ ಅವರು ಇಲ್ಲಿ ಕಾರ್ಯಾರಂಭಿಸಿದ್ದರು. 15 ವರ್ಷಗಳ ಹಿಂದೆ ಅವರ ಮೇಲೆ ಲೋಕಾಯುಕ್ತ ದಾಳಿ ಕೂಡ ನಡೆದಿತ್ತು ಎನ್ನಲಾಗಿದೆ.

ಏಕಕಾಲದಲ್ಲಿ ರಾಜ್ಯದ 15 ಕಡೆಗಳಲ್ಲಿ ಅಧಿಕಾರಿಗಳ ಮನೆ ಮತ್ತು ಕಚೇರಿಗಳಿಗೆ ಎಸಿಬಿ ಅಧಿಕಾರಿಗಳು ಇಂದು ಬೆಳಿಗ್ಗೆ ದಾಳಿ ಮಾಡಿದ್ದಾರೆ. ಈ ಅಧಿಕಾರಿಗಳ ವಿರುದ್ದ ಆದಾಯಕ್ಕಿಂತ ಅಧಿಕ ಮೌಲ್ಯದ ಆಸ್ತಿ ಸಂಪಾದಿಸಿದ್ದಾರೆ ಎನ್ನುವ ದೂರು ಬಂದ ಹಿನ್ನಲೆಯಲ್ಲಿ ಅವರ ಮನೆ ಹಾಗು ಕಚೇರಿ ಗಳ ಮೇಲೆ ನಡೆಸಲಾಗಿದೆ ಎಂದು ಮೂಲಗಳು ಖಚಿತ ಪಡಿಸಿವೆ.

ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಎಕ್ಸಿಕ್ಯೂಟಿವ್ ಎಂಜಿನಿಯರ್ ಕೆ.ಎಸ್ ಲಿಂಗೇಗೌಡ, ಮಂಡ್ಯ ಹೆಚ್.ಎಲ್.ಬಿ.ಸಿ ಎಕ್ಸಿಕ್ಯೂಟಿವ್ ಎಂಜಿನಿಯರ್ ಶ್ರೀನಿವಾಸ್ ಕೆ, ದೊಡ್ಡಬಳ್ಳಾಪುರ ರೆವಿನ್ಯೂ ಇನ್ಸ್’ಪೆಕ್ಟರ್ ಲಕ್ಷ್ಮಿಕಾಂತಯ್ಯ, ವಾಸುದೇವ್ (ಪ್ರಾಜೆಕ್ಟ್ ಮ್ಯಾನೇಜರ್ ನಿರ್ಮಿತಿ ಕೇಂದ್ರ ಬೆಂಗಳೂರು) ಬಿ.ಕೃಷ್ಣಾರೆಡ್ಡಿ (ಜನರಲ್ ಮ್ಯಾನೇಜರ್ ನಂದಿನಿ ಡೈರಿ ಬೆಂಗಳೂರು), ಟಿ.ಎಸ್.ರುದ್ರೇಶಪ್ಪ, (ಜಾಯಿಂಟ್ ಡೈರೆಕ್ಟರ್ ಅಗ್ರಿಕಲ್ಚರ್ ಡಿಪಾರ್ಟ್‌ಮೆಂಟ್ ಗದಗ), ಎ.ಕೆ.ಮಸ್ತಿ (ಕೋ ಆಪರೇಟಿವ್ ಡೆವಲಪ್ಮೆಂಟ್ ಆಫೀಸರ್, ಸವದತ್ತಿ ಡೆಪ್ಯೂಟೇಷನ್, ಬೈಲಹೊಂಗಲ), ಸದಾಶಿವ ಮರಲಿಂಗಣ್ಣನವರ್ (ಸೀನಿಯರ್ ಮೋಟಾರ್ ಇನ್ಸ್’ಪೆಕ್ಟರ್ ಗೋಕಾಕ್) ನಾತಾಜೀ ಹೀರಾಜಿ (ಪಾಟೀಲ್ ಗ್ರೂಪ್ ಸಿ ಬೆಳಗಾಂ ಹೆಸ್ಕಾಂ), ಕೆ.ಎಸ್.ಶಿವಾನಂದ (ರಿಟೈರ್ಡ್ ಸಬ್ ರಿಜಿಸ್ಟರ್ ಬಳ್ಳಾರಿ), ರಾಜಶೇಖರ್, (ಫಿಜಿಯೋಥೆರಪಿಸ್ಟ್ ಯಲಹಂಕ ಸರ್ಕಾರಿ ಆಸ್ಪತ್ರೆ), ಮಾಯಣ್ಣ ಎಂ.(ಎಫ್.ಡಿ.ಸಿ ಬಿಬಿಎಂಪಿ ಬೆಂಗಳೂರು, ರೋಡ್ಸ್ & ಇನ್ಸ್ಫಾಸ್ಟ್ರಕ್ಚರ್), ಎಲ್.ಸಿ.ನಾಗರಾಜ್, (ಸಕಾಲ, ಅಡ್ಮಿನಿಸ್ಟೇಷನ್ ಆಫೀಸರ್, ಬೆಂಗಳೂರು) ಜಿ.ವಿ.ಗಿರಿ, (ಡಿ ಗ್ರೂಪ್ ಸಿಬ್ಬಂದಿ ಬಿಬಿಎಂಪಿ ಯಶವಂತಪುರ), ಎಸ್.ಎಂ.ಬಿರಾದಾರ್ (ಜಾಯಿಂಟ್ ಎಂಜಿನಿಯರ್ ಲೋಕೋಪಯೋಗಿ ಇಲಾಖೆ ಜೇವರ್ಗಿ) ರವರ ಮನೆಗಳು ಮತ್ತು ಅವರು ಹೊಂದಿರುವ ಆಸ್ತಿ, ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.



