ಬೆಳ್ತಂಗಡಿ : ನ 24 : ಸಹೋದರರಿಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೆಯ್ಯಲು ಯತ್ನಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೋವಿಂದೂರು ಶಾಲೆಯ ಬಳಿ ನ .23ರ ತಡ ರಾತ್ರಿ ನಡೆದಿದೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಬೆಳ್ತಂಗಡಿ ಠಾಣೆ ಪೊಲೀಸರು ನಿನ್ನೆ ರಾತ್ರಿಯೇ ಕೃತ್ಯ ಎಸಗಿದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ನೆಲ್ಲಿಗುಡ್ಡೆ ನಿವಾಸಿಗಳಾದ ಆಟೋ ಚಾಲಕ ಹೈದರ್ ಯಾನೆ ಜಾಕ್ ಹೈದರ್ ಮತ್ತು ಅವರ ಅಣ್ಣ ರಫೀಕ್ ಹಲ್ಲೆಗೊಳಗಾದವರು. ವಿಶ್ವನಾಥ ಪೂಜಾರಿಯವರ ಮಗನಾದ ಅಶುತೋಷ್ ಮತ್ತು ಇತರ ಮೂರು ಮಂದಿ ಕಾರು ಮತ್ತು ಬೈಕ್ ಗಳೊಂದಿಗೆ ಆಗಮಿಸಿ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ನಿನ್ನೆ ರಾತ್ರಿ 11:45ರ ಸುಮಾರಿಗೆ ಹೈದರ್ ಮತ್ತು ರಫೀಕ್ ಆಟೋದಲ್ಲಿ ಬಾಡಿಗೆ ಹೋಗಿ ವಾಪಾಸ್ಸು ಮನೆಯ ಕಡೆಗೆ ತೆರಳುತ್ತಿದ್ದ ವೇಳೆ ಕಳಿಯ ಗ್ರಾಮದ ಗೋವಿಂದೂರು ಶಾಲೆಯ ಬಳಿಯಲ್ಲಿ ಅಶುತೋಷ್ ಮತ್ತು ಇತರ ಮೂರು ಮಂದಿ ಕಾರು ಮತ್ತು ಬೈಕ್ ಗಳೊಂದಿಗೆ ಅಟೋ ರಿಕ್ಷಾವನ್ನು ಅಡ್ಡಕಟ್ಟಿ ಕಣ್ಣಿಗೆ ಮೆಣಸಿನ ಹುಡಿ ಎರಚಿ ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.
ಹಲ್ಲೆಯಿಂದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು , ಇಬ್ಬರ ಪೈಕಿ ಹೈದರ್ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ .ಹಲ್ಲೆಯ ಸಂದರ್ಭ ಗಾಯಾಳುಗಳು ಜೋರಾಗಿ ಕಿರುಚಾಡಿದ್ದು ಬೊಬ್ಬೆ ಕೇಳಿ ಸ್ಥಳೀಯ ನಿವಾಸಿಗಳು ಓಡಿ ಬಂದಿದ್ದಾರೆ . ಈ ವೇಳೆ ಅರೋಪಿಗಳು ನಿಮ್ಮನ್ನು ಮುಂದಕ್ಕೆ ಕೊಲ್ಲದೇ ಬಿಡುವುದಿಲ್ಲ ಎ೦ದು ಬೆದರಿಕೆ ಒಡ್ಡಿ ಪರಾರಿಯಾಗಿರುತ್ತಾರೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.
ಗಾಯಾಳುಗಳನ್ನು ಸ್ಥಳೀಯರು ಆಟೋ ರಿಕ್ಷಾದಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ. ಹೈದರ್ ಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕ್ಷಿಪ್ರ ಕಾರ್ಯಾಚರಣೆ :
ಮಾಹಿತಿ ಪಡೆದು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಬೆಳ್ತಂಗಡಿ ಠಾಣೆ ಪೊಲೀಸರು ಕೃತ್ಯ ನಡೆದ ಎರಡು ಗಂಟೆಯ ಒಳಗಡೆ ಗೇರುಕಟ್ಟೆ ಜನತಾ ಕಾಲೋನಿಯ ಹತ್ತಿರ ಬಂಧಿಸಿದ್ದಾರೆ
ಕಾರ್ಯಾಚರಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ನಂದಕುಮಾರ್ ನೇತತ್ವದ ತಂಡದ ಹೆಡ್ ಕಾನ್ಸ್ಟೇಬಲ್ ಗಳಾದ ವೆಂಕಪ್ಪ, ಇಬ್ರಾಹಿಂ ಗರ್ಡಾಡಿ, ಕಾನ್ಸ್ಟೇಬಲ್ ಗಳಾದ ಬಸವರಾಜ್, ಲತೀಫ್ ಮತ್ತಿತರರು ಭಾಗವಹಿಸಿದ್ದರು.