ಬೆಳ್ತಂಗಡಿ: ತೆರವುಗೊಳಿಸಲು ಉದ್ದೇಶಿಸಲಾಗಿದ್ದ ವೇಣೂರು ಸನಿಹದ ಕರಿಮಣೇಲುವಿನಲ್ಲಿದ್ದ ಬಹುಅಪರೂಪದ ಶ್ರೀತಾಳೆ ಮರವನ್ನು ಧಾರ್ಮಿಕ ವಿಧಿವಿಧಾನ ನೆರವೇರಿಸಿ ಸಂರಕ್ಷಿಸಲಾಗಿದೆ.
ಶ್ರೀತಾಳೆ ಮರ ಹೂ ಬಿಟ್ಟರೆ ಊರಿಗೆ ಅಥವಾ ಮನೆ ಯಜಮಾನನಿಗೆ ಅನಿಷ್ಟ ಎಂಬ ನಂಬಿಕೆಯಿಂದ ವಿಧಿವಿಧಾನಗಳೊಂದಿಗೆ ಕಡಿಯಲು ಮುಹೂರ್ತ ನಿಗದಿಯಾಗಿತ್ತು.
ಇದಕ್ಕೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿತು. ಇದು ಚರ್ಚೆಗೆ ಗ್ರಾಸವಾಗಿತು.
ಉಡುಪಿ ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಎಸ್.ಎ.ಕೃಷ್ಣಯ್ಯ ಮೂಡುಬಿದಿರೆ ಜೈನ ಮಠದ ಸ್ವಾಮೀಜಿಯವರನ್ನು ಭೇಟಿಯಾಗಿ ಜನರಲ್ಲಿ ಅರಿವು ಮೂಡಿಸುವ ಮೂಲಕ ಈ ಮರವನ್ನು ಸಂರಕ್ಷಿಸಬೇಕು ಎಂದು ಆಗ್ರಹಿಸಿದ್ದರು.
ಕರಿಮಣೇಲು ಜಾಗದ ಮಾಲೀಕರ ಜತೆಯೂ ದೂರವಾಣಿಯಲ್ಲಿ ಮಾತನಾಡಿದ್ದ ಅವರು ಮರ ಕಡಿಯದಂತೆ ವಿನಂತಿಸಿದ್ದರು.