ಪುತ್ತೂರು, ನ 23 : ಮೂವರು ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡಿಕೊಂಡ ಘಟನೆ ಪುತ್ತೂರಿನ ಸರ್ಕಾರಿ ಕಾಲೇಜಿನಲ್ಲಿ ನ.23 ರಂದು ಸಂಜೆ ನಡೆದ ಬಗ್ಗೆ ವರದಿಯಾಗಿದೆ.
ಒಂದು ಕೋಮಿಗೆ ಸೇರಿದ ವಿದ್ಯಾರ್ಥಿ ಇನ್ನೊಂದು ಕೋಮಿಗೆ ಸೇರಿದ ಅದೇ ಕಾಲೇಜಿನ ವಿದ್ಯಾರ್ಥಿನಿಯ ಜತೆ ಆತ್ಮೀಯನಾಗಿದ್ದಾನೆ ಎಂಬ ವಿಚಾರವಾಗಿ ಈ ಸಂಘರ್ಷ ನಡೆದಿದೆ ಎಂದು ಹೇಳಲಾಗುತ್ತಿದೆ
ಕೊಡಿಪ್ಪಾಡಿಯ ಆದಿಲ್ , ಪ್ರಣಾಮ್ ಹಾಗೂ ಕರ್ಮಲದ ಆದಿತ್ಯ ಬಡಿದಾಡಿಕೊಂಡ ವಿದ್ಯಾರ್ಥಿಗಳು. ಹೊಡೆದಾಟದ ಬಳಿಕ ಮೂವರು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದಿಲ್ ಸರ್ಕಾರಿ ಆಸ್ಪತ್ರೆಗೆ ದಾಖಲಾದರೆ ಆದಿತ್ಯ ಹಾಗೂ ಪ್ರಣಾಮ್ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆದಿಲ್ ಆರೋಪವೇನು ?
ನಾನು ವಿದ್ಯಾರ್ಥಿನಿಯೊಬ್ಬಳ ಜತೆ ಮಾತನಾಡುತ್ತಿರುವುದನ್ನು ಗಮನಿಸಿ ಕೆಲ ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದಾರೆ. ಅದಲ್ಲದೆ ಅವಳ ಜೊತೆ ಮತ್ತೆ ಕಾಣಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ ಎಂದು ಆಸ್ಪತ್ರೆಯಲ್ಲಿ ದಾಖಲಾಗಿರುವ ವಿದ್ಯಾರ್ಥಿ ಆದಿಲ್ ಆರೋಪಿಸಿದ್ದಾನೆ.

ಪ್ರಣಾಮ್ ಹಾಗೂ ಆದಿತ್ಯ ಆರೋಪವೇನು ?
ಆದಿಲ್ ಕಾಲೇಜಿನಲ್ಲಿರುವ ಹಿಂದೂ ವಿದ್ಯಾರ್ಥಿನಿಯರಿಗೆ ಕೀಟಲೆ ಮಾಡುತ್ತಿದ್ದ. ಇದನ್ನು ಪ್ರಶ್ನಿಸಿದ ನಮ್ಮ ಮೇಲೆ ಹಲ್ಲೆ ಮಾಡಿ, ಪ್ರಾಣ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಹೊರಗಡೆಯಿಂದ ಹುಡುಗರನ್ನು ಕರೆಸಿ ಬೆದರಿಕೆ ಹಾಕಿಸಿದ್ದಾರೆ ಎಂದು ಆದರ್ಶ ಆಸ್ಪತ್ರೆಯಲ್ಲಿ ದಾಖಲಾದ ವಿದ್ಯಾರ್ಥಿಗಳಾದ ಪ್ರಣಾಮ್ ಹಾಗೂ ಆದಿತ್ಯ ಆರೋಪಿಸಿದ್ದಾರೆ.
ಮೂಲಗಳ ಪ್ರಕಾರ ಕಾಲೇಜಿನ ಕೆಲ ವಿದ್ಯಾರ್ಥಿಗಳ ಮಧ್ಯೆ ಕಳೆದ ಕೆಲ ದಿನಗಳಿಂದ ವಾಗ್ವಾದ ಸಂಘರ್ಷಗಳು ನಡೆಯುತ್ತಿದ್ದೂ , ಇಂದು ಅದು ಹೊಡೆದಾಟದ ಹಂತಕ್ಕೆ ತಲುಪಿದೆ. ಕೆಲವೊಂದು ಬಾಹ್ಯ ಶಕ್ತಿಗಳು ವಿದ್ಯಾರ್ಥಿಗಳ ಮಧ್ಯೆ ಸಂಘರ್ಷ ಸೃಷ್ಟಿಸಲು ಪ್ರಯತ್ನಿಸುತ್ತಿದ್ದು ಅದರ ಭಾಗವೇ ಈ ಗಲಾಟೆ ಎನ್ನಲಾಗುತ್ತಿದೆ. ಇಂದು ಹೊಡೆದಾಟ ನಡೆದ ಸಂದರ್ಭವೂ ಹೊರಗಡೆಯಿಂದ ಕೆಲವು ಯುವಕರು ಆಗಮಿಸಿದ್ದರು ಹಾಗೂ ಗಲಾಟೆಗೆ ಪ್ರಚೋಧಿಸಿದ್ದರು ಎಂದು ಮೂಲಗಳು ತಿಳಿಸಿವೆ
ಹೊಡೆದಾಟದ ಮಾಹಿತಿ ಪಡೆದ ಪುತ್ತೂರು ನಗರ ಠಾಣೆ ಪೊಲೀಸರು ಕಾಲೆಜಿಗೆ ಆಗಮಿಸಿ ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ಇವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.
ಕ್ಯಾಂಪಸ್ ಫ್ರಂಟ್ʼನಿಂದ ಪ್ರತಿಭಟನೆ
ಘಟನೆಯನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಸದಸ್ಯರು ಪುತ್ತೂರಿನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ದ ಬಳಿಯಿರುವ ಗಾಂಧಿ ಕಟ್ಟೆಯ ಎದುರು ಯಾವುದೇ ಪೂರ್ವ ಸೂಚನೆಯಿಲ್ಲದೆ ಪ್ರತಿಭಟನೆ ನಡೆಸಿದ್ದಾರೆ. ಆದಿಲ್ ಎಂಬ ವಿದ್ಯಾರ್ಥಿ ಹಿಂದೂ ವಿದ್ಯಾರ್ಥಿನಿಯ ಬಳಿ ಮಾತನಾಡಿದ ಎಂಬ ಕಾರಣಕ್ಕೆ ಎಬಿವಿಪಿ ಯ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ತಕ್ಷಣ ಆರೋಪಿಗಳನ್ನು ಬಂಧಿಸಬೇಕೆಂದು ಅವರು ಅಗ್ರಹಿಸಿದರು.
ಏಕಾಏಕಿ ಪ್ರತಿಭಟನೆ ನಡೆಯುತ್ತಿರುವ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ನೆರೆದಿದ್ದ ಪ್ರತಿಭಟನಾಕಾರರನ್ನು ಚದುರಿಸಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು.