ಮಡಿಕೇರಿ: ಮಡಿಕೇರಿಯ ಸೋಮವಾರಪೇಟೆ ತಾಲೂಕಿನಲ್ಲಿ ಬುರ್ಖಾ ವಿಚಾರವಾಗಿ ಗಲಾಟೆ ನಡೆದು ಇಬ್ಬರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಸಂಘಟನೆಯೊಂದಕ್ಕೆ ಸೇರಿದ 40ಕ್ಕೂ ಹೆಚ್ಚು ಮಂದಿ ಅನ್ಯಕೋಮಿಗೆ ಸೇರಿದ ಇಬ್ಬರು ಯುವತಿಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು.
ನವೆಂಬರ್ 18 ರ ಗುರುವಾರ ಸಂಜೆ ಶನಿವಾರಸಂತೆಯ ಕೆಆರ್ಸಿ ವೃತ್ತದಲ್ಲಿ, ಈ ಘಟನೆ ನಡೆದಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿಗಳ ವಿರುದ್ದ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದರು.
ಬಂಧನಕ್ಕೊಳಗಾದ ಹಿಂದೂ ಸಂಘಟನೆಯ ಯುವಕನ ಮನೆಗೆ ಹಿಂದೂ ಮುಖಂಡರು ಭೇಟಿ ನೀಡಿ ಧೈರ್ಯ ತುಂಬಿದ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. “ ನಿಮ್ಮ ಕುಟುಂಬದೊಂದಿಗೆ ನಾವೀದ್ದೇವೆ ,ನಿಮ್ಮ ಮಗನದು ದೇಶಸೇವೆಯ ಕೆಲಸ” ಎಂದು ಹೇಳಿದ ದೃಶ್ಯಗಳು ವಿಡಿಯೋ ತುಣುಕಿನಲ್ಲಿದ್ದು ಅದೀಗ ಬಾರಿ ಶೇರ್ ಆಗ್ತಿದೆ.
ವೈರಲ್ ವಿಡಿಯೋ:
” ನ.18ರ ಸಂಜೆ 4.15ರ ಸುಮಾರಿಗೆ ಶನಿವಾರ ಸಂತೆ ಸೇಕ್ರೆಡ್ ಹಾರ್ಟ್ ಶಾಲೆಯ ಪ್ರಥಮ ಪಿಯು ವಿದ್ಯಾರ್ಥಿಗಳ ಮೇಲೆ ಸಂಘಟನೆಯೊಂದಕ್ಕೆ ಸೇರಿದ 40ಕ್ಕೂ ಹೆಚ್ಚು ಮಂದಿಯ ತಂಡ ದಾಳಿ ನಡೆಸಿತ್ತು. ನನ್ನ ಮಗಳು ಹಾಗೂ ಆಕೆಯ ಸ್ನೇಹಿತೆಯ ಮೇಲೆ ಸಂಘಪರಿವಾರಕ್ಕೆ ಸೇರಿದ ಕೆಲ ಹುಡುಗರು ಹಲ್ಲೆ ನಡೆಸಿದ್ದಾರೆ. ನನ್ನ ಮಗಳು ಗುರುವಾರ ಬೆಳಗ್ಗೆ ತನ್ನ ಕಾಲೇಜಿನ ತರಗತಿಗಳಿಗೆ ಹಾಜರಾಗಿದ್ದಳು. ತರಗತಿಗಳಿಗೆ ಹಾಜರಾಗುವ ಮೊದಲು ಆಕೆ ಬುರ್ಖಾವನ್ನು ತೆಗೆಯಬೇಕಿದ್ದು, ನನ್ನ ಮಗಳು ತನ್ನ ಬುರ್ಖಾವನ್ನು ತೆಗೆದು ಅದೇ ಕಾಲೇಜಿನ ಕ್ರಿಶ್ಚಿಯನ್ ಹುಡುಗಿಗೆ ಹಸ್ತಾಂತರಿಸಿದ್ದಳು ಎಂದು ಸಂತ್ರಸ್ತ ಯುವತಿಯ ತಂದೆ ಆರೋಪಿಸಿದ್ದಾರೆ
“ ಆ ದಿನ ಕ್ರಿಶ್ಚಿಯನ್ ಹುಡುಗಿ ಕಾಲೇಜಿಗೆ ಹಾಜರಾಗಿರಲಿಲ್ಲ. ಹಾಗಾಗಿ ಆಕೆಯ ಸ್ನೇಹಿತೆ ಸಂಜೆ ಕಾಲೇಜಿನ ಬಳಿ ಬುರ್ಖಾ ವಾಪಸ್ ಕೊಡಲು ಕಾಯುತ್ತಿದ್ದಳು. ಆದರೆ ಬುರ್ಖಾ ವಾಪಸ್ ಕೊಡುವಾಗ 40ಕ್ಕೂ ಹೆಚ್ಚು ಗೂಂಡಾಗಳು ನನ್ನ ಮಗಳು ಹಾಗೂ ಆಕೆಯ ಸ್ನೇಹಿತೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಹೆಣ್ಣು ಮಕ್ಕಳಿಗೆ ಬೀಗ ಜಡಿದು ಥಳಿಸಿ ದೌರ್ಜನ್ಯ ಎಸಗಿದ್ದಾರೆ” ಎಂದು ಸಂತ್ರಸ್ತೆಯ ತಂದೆ ಆರೋಪಿಸಿದ್ದಾರೆ.
ಬಾಲಕಿಯರನ್ನು ಕೊಡ್ಲಿಪೇಟೆಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಆ ಘಟನೆಯ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಬಾಲಕಿಯರ ಕುಟುಂಬಸ್ಥರು ನೀಡಿದ ದೂರಿನಂತೆ ಶನಿವಾರಸಂತೆ ಠಾಣೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಎಫ್ಐಆರ್ ದಾಖಲಿಸಿದ್ದಾರೆ.
“ಶನಿವಾರಸಂತೆಯ ಪ್ರಜ್ವಲ್ ಮತ್ತು ಕೌಶಿಕ್ ಎಂಬವರನ್ನು ಬಂಧಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿ ಹೆಚ್ಚಿನವರನ್ನು ಬಂಧಿಸಲಾಗುವುದು” ಎಂದು ಶನಿವಾರಸಂತೆ ಎಸ್ಐ ಪರಶಿವ ಮೂರ್ತಿ ತಿಳಿಸಿದ್ದಾರೆ.