ಪುತ್ತೂರು: ನ 23 : ಇತ್ತೀಚಿನ ದಿನಗಳಲ್ಲಿ ಪತ್ರಕರ್ತರ, ಮಾಧ್ಯಮ ಪ್ರತಿನಿಧಿಗಳ ಮೇಲೆ ಗಂಬೀರ ಸ್ವರೂಪದ ಹಲ್ಲೆ ಪ್ರಕರಣ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಪತ್ರಕರ್ತರ, ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆದರೆ ಪತ್ರಕರ್ತರು ತಕ್ಕ ಪ್ರತ್ಯುತ್ತರ ನೀಡಬೇಕಾಗುತ್ತದೆ . ಆನಂತರದ ಬೆಳವಣಿಗೆಗೆ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳ ಹೇಳಿದರು.
ಪಬ್ಲಿಕ್ ಟಿವಿ ಮಂಗಳೂರು ಜಿಲ್ಲಾ ವರದಿಗಾರರ ಮೇಲೆ ಸೋಮವಾರ ನಡೆದ ಮಾರಾಣಾಂತಿಕ ಹಲ್ಲೆ ಬಗ್ಗೆ ತನಿಖೆ ನಡೆಸುವಂತೆ ಹಾಗು ಪತ್ರಕರ್ತರಿಗೆ ಸೂಕ್ತ ರಕ್ಷಣೆ ಹಾಗೂ ಭದ್ರತೆ ಒದಗಿಸುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಪುತ್ತೂರು ಸಹಾಯಕ ಆಯುಕ್ತ ಡಾ. ಯತೀಶ್ ಉಳ್ಳಾಲ್ ಮೂಲಕ ಮನವಿ ಸಲ್ಲಿಸಿ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸುವವರಿಗೆ ಎಚ್ಚರಿಕೆ ನೀಡಿದರು.
ಜಿಲ್ಲೆಯ ಹಲವು ಪತ್ರಕರ್ತರ ಮೇಲೆ ಈ ಹಿಂದೆ ದಾಳಿ, ಹಲ್ಲೆ ನಡೆದಿದೆ. ಮುಂದೆ ದಾಳಿ ನಡೆಸಲು ಯೋಜನೆಯೂ ರೂಪುಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ಪತ್ರಕರ್ತರಿಗೆ ಸೂಕ್ತ ಭದ್ರತೆಯ ಕಾನೂನು ಜಾರಿಗೊಳಿಸಬೇಕು. ಇದು ಸರ್ಕಾರದಿಂದ ಸಾಧ್ಯವಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಪತ್ರಕರ್ತರ ಮೇಲೆ ಹಲ್ಲೆ, ದಾಳಿಯಾದರೆ ಪತ್ರಕರ್ತರೇ ತಕ್ಕ ಪ್ರತ್ಯುತ್ತರ ನೀಡುತ್ತಾರೆ ದಾಳೀಯಾದಾಗ ಸುಮ್ಮನಿರಲು ಪತ್ರಕರ್ತರೇನು ಶಾಂತಿದೂತರೆಂದು ತಿಳಿದುಕೊಂಡರೆ ಅದು ನಿಮ್ಮ ಕನಸು. ಲೇಖನಿ ಮೂಲಕ ಶಾಯಿ ಹರಿಸಿದವರಿಗೆ ರಕ್ತ ಹರಿಸಲು ಯತ್ನಿಸಿದವರಿಗೆ ತಕ್ಕ ಪಾಠ ಕಲಿಸುವುದೇನು ಮಹಾ! ಎಂದು ಅವರು ಗುಡುಗಿದ್ದಾರೆ.
ಹಾಗಾಗಿ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸುವವರಿಗೆ ಕಠಿಣ ಶಿಕ್ಷ ವಿಧಿಸಬೇಕು, ಪತ್ರಕರ್ತರಿಗೆ ವೃತ್ತಿ ಹಾಗೂ ವೈಯಕ್ತಿಕ ಭದ್ರತೆಗೆ ಸೂಕ್ತ ಕಾನೂನು ಜಾರಿಗೊಳಿಸಬೇಕು ಎಂದು ಪುತ್ತೂರು ತಾಲೂಕು ಪತ್ರಕರ್ತರ ಸಂಘ ಸರ್ಕಾರವನ್ನು ಆಗ್ರಹಿಸಿದೆ.

ಮುಖ್ಯಮಂತ್ರಿಗಳಿಗೆ ಮನವಿ
ಪಬ್ಲಿಕ್ ಟಿವಿ ಮಂಗಳೂರು ಜಿಲ್ಲಾ ವರದಿಗಾರರ ಮೇಲೆ ಸೋಮವಾರ ನಡೆದ ಮಾರಾಣಾಂತಿಕ ದಾಳಿ ಬಗ್ಗೆ ತನಿಖೆ ನಡೆಸುವಂತೆ ಹಾಗು ಪತ್ರಕರ್ತರಿಗೆ ಸೂಕ್ತ ರಕ್ಷಣೆ ಹಾಗೂ ಭದ್ರತೆ ಒದಗಿಸುವಂತೆ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ಪುತ್ತೂರು ಸಹಾಯಕ ಆಯುಕ್ತ ಡಾ. ಯತೀಶ್ ಉಳ್ಳಾಲ್ ಮೂಲಕ ಮನವಿ ಸಲ್ಲಿಸಲಾಯಿತು. ಈ ವೇಳೆ ಈಟಿವಿ ಭಾರತ್ ವರದಿಗಾರ ಅನೀಶ್ ಮರಿಲ್, ಪತ್ರಕರ್ತ ಮಾಧವ ನಾಯಕ್, ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಕೋಶಾಧಿಕಾರಿ ಪ್ರಸಾದ್ ಬಲ್ನಾಡ್, ವಾರ್ತಾಭಾರತಿ ವರದಿಗಾರ ಸಂಶುದ್ದೀನ್ ಸಂಪ್ಯ, ಪ್ರಜಾವಾಣಿ ವರದಿಗಾರ ಶಶಿಧರ್ ರೈ ಕುತ್ಯಾಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ : ಮಂಗಳೂರು : ರಾಜ್ಯದ ಪ್ರತಿಷ್ಟಿತ ಟಿವಿ ವಾಹಿನಿ ವರದಿಗಾರನ ಮೇಲೆ ಮಾರಣಾಂತಿಕ ಹಲ್ಲೆ – ಓರ್ವನ ಬಂಧನ