ಮಂಗಳೂರು ತಾಲೂಕಿನ ಉಳಾಯಿಬೆಟ್ಟು ಸಮೀಪದ ಪರಾರಿ ಎಂಬಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ ಟೈಲ್ಸ್ ಫ್ಯಾಕ್ಟರಿಯ ಆವರಣದ ಮೋರಿಯಲ್ಲಿ 8 ವರ್ಷದ ಬಾಲಕಿಯ ಮೃತದೇಹ ಭಾನುವಾರ ಸಂಜೆ ಪತ್ತೆಯಾಗಿದೆ. ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ನಡೆಸಿ ಕೊಲೆ ಮಾಡಿ ಚರಂಡಿಗೆ ಎಸೆದಿರುವಂತೆ ಮೆಲ್ನೋಟಕ್ಕೆ ಕಂಡುಬಂದಿದ್ದು ಟೈಲ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ದುಷ್ಕರ್ಮಿಗಳ ಕೃತ್ಯ ಎಂಬ ಶಂಕೆ ವ್ಯಕ್ತವಾಗಿದೆ.
ಟೈಲ್ಸ್ ಫ್ಯಾಕ್ಟರಿಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಅಸ್ಸಾಂ ಮೂಲದ ದಂಪತಿಯ ಹಿರಿಯ ಪುತ್ರಿ ಮೃತ ಬಾಲಕಿ. ಈ ನತದೃಷ್ಟ ಕುಟುಂಬ ಟೈಲ್ಸ್ ಫ್ಯಾಕ್ಟರಿಯಲ್ಲಿ ದುಡಿಯುತ್ತಿರುವ ಹಿನ್ನೆಲೆಯಲ್ಲಿ ಅಲ್ಲೇ ವಾಸಿಸುತ್ತಿದ್ದರು.
ಗುರುಪುರ ಸೇತುವೆಯ ಪರಾರಿ ಕ್ರಾಸ್ ನಲ್ಲಿ ರಾಜ್ ಟೈಲ್ಸ್ ಕಾರ್ಖಾನೆ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ಕರ್ನಾಟಕದ 10 ಜನ ಹಾಗೂ ಉತ್ತರ ಭಾರತ ಮೂಲದ ಹಲವು ಯುವಕರು , ನಾಲಕೈದು ಮಹಿಳೆಯರ ಸಹಿತ 30ಕ್ಕೂ ಅಧಿಕ ಮಂದಿ ಕೆಲಸ ಮಾಡುತ್ತಿದ್ದಾರೆ.
ನ. 21 ರಂದು ಭಾನುವಾರವಾದ ಕಾರಣ ಫ್ಯಾಕ್ಟರಿಗೆ ರಜೆ ಇತ್ತು. ಹಾಗಾಗಿ ಕಾರ್ಮಿಕರೆಲ್ಲರು ವಿರಾಮದಲ್ಲಿದ್ದರು. ಈ ಸಂದರ್ಭ ಸಂಜೆ 4 ಗಂಟೆ ಸುಮಾರಿಗೆ ಬಾಲಕಿ ವಾಸ್ತವ್ಯ ಸ್ಥಳದಿಂದ ನಾಪತ್ತೆಯಾಗಿರುವುದನ್ನು ಗಮನಿಸಿದ ಪೋಷಕರು ಆಕೆಯನ್ನು ಹುಡುಕಲು ಶುರು ಮಾಡಿದ್ದರು.
ಬಾಲಕಿ ಸುಳಿವು ಸಿಗದೇ ಇದ್ದಾಗ ಬಾಲಕಿಯ ಪೋಷಕರು ಅಲ್ಲೇ ಆವರಣದಲ್ಲಿ ಕ್ರಿಕೆಟ್ ಆಡುತ್ತಿದ್ದ ಹುಡುಗರ ಗಮನಕ್ಕೆ ತಂದರು. ಬಳಿಕ ಪೋಷಕರು ಅವರೊಂದಿಗೆ ಪರಿಸರದಲ್ಲೆಲ್ಲ ಹುಡುಕಾಡಲು ಆರಂಭಿಸಿದರು. ೨ ಗಂಟೆಯ ನಿರಂತರ ಶೋಧದ ಬಳಿಕ ಸಂಜೆ 6 ಗಂಟೆ ಸುಮಾರಿಗೆ ಟೈಲ್ಸ್ ಫ್ಯಾಕ್ಟರಿಯ ಕೊಳಚೆ ನೀರು ಹರಿಯುವ ಚರಂಡಿಯಲ್ಲಿ ಬಾಲಕಿಯ ಮೃತದೇಹ ಬಿದ್ದಿರುವುದು ಕಂಡು ಬಂದಿತ್ತು.
ತಕ್ಷಣ ಸ್ಥಳೀಯರ ನೆರವಿನಿಂದ ಈ ವಿಷಯವನ್ನು ಪೋಲೀಸರ ಗಮನಕ್ಕೆ ತರಲಾಯಿತು. ಮಂಗಳೂರು ಗ್ರಾಮಾಂತರ ಠಾಣೆ ಪೋಲೀಸರು ಸ್ಥಳಕ್ಕೆ ತೆರಳಿ ಪ್ರಾಥಮಿಕ ತನಿಖೆ ನಡೆಸಿ ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವೆನ್‍ಲಾಕ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಭಾನುವಾರ ರಜಾ ಆದ ಕಾರಣ ಕಾರ್ಮಿಕ ವಲಯದಲ್ಲೇ ಯಾರೋ ಅಮಲು ಪದಾರ್ಥ ಸೇವಿಸಿ ಈ ಕೃತ್ಯ ಎಸಗಿರಬೇಕು ಎಂದು ಶಂಕಿಸಲಾಗಿದೆ. ಟೈಲ್ಸ್ ಫ್ಯಾಕ್ಟರಿಯ ಒಳಗಡೆಯೇ ಈ ಘಟನೆ ನಡೆದಿರುವುದರಿಂದ ಇಲ್ಲಿ ವಾಸವಿದ್ದವರದೇ ಕೃತ್ಯ ಇದಾಗಿರುವ ಸಾಧ್ಯತೆ ದೆ ಎಂದು ಪೋಲೀಸರು ಶಂಕಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪೋಲೀಸರು ಈಗಾಗಲೇ ಅಲ್ಲಿ ವಾಸವಿದ್ದ ಸುಮಾರು 15 ಮಂದಿ ಪುರುಷರನ್ನು ವಿಚಾರಣೆಗೆ ಕರೆದೊಯ್ದಿದ್ದಾರೆ. ಯಾವಾಗ ಈ ಕೃತ್ಯ ನಡೆದಿದೆ, ಮತ್ತು ಇದರಲ್ಲಿ ಒಬ್ಬನೇ ಅಥವಾ ತಂಡ ಈ ಕೃತ್ಯ ನಡೆಸಿದೆಯೇ ಎಂಬ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಕೆಲಸಗಾರರ ಪೈಕಿ ಮೂವರು ಪರಾರಿಯಾಗಿದ್ದು ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಾಕ್ಷ್ಯ ನಾಶಕ್ಕೆ ಯತ್ನ:
ಬಾಲಕಿಯನ್ನು ಕೊಲೆ ಮಾಡಿ ವ್ಯಕ್ತಿ ಅಥವಾ ತಂಡ ಪ್ರಕರಣ ಯಾರ ಗಮನಕ್ಕೂ ಬರಬಾರದು ಎಂಬ ಉದ್ದೇಶದಿಂದ ಮೃತದೇಹವನ್ನು ಕೊಳಚೆ ನೀರು ಹರಿಯುವ ಚರಂಡಿಗೆ ಎಸೆದು ಹೋಗಿದ್ದಾರೆ. ಅಲ್ಲದೆ ಚರಂಡಿಯಲ್ಲಿರುವ ಬೃಹತ್ ಪೈಪ್‍ನ ಒಳಗಡೆ ಮೃತದೇಹವನ್ನು ತುರುಕಿಸಿ ಯಾರ ಗಮನಕ್ಕೂ ಬಾರದಂತೆ ಮಾಡುವ ವಿಕೃತಿ ಮೆರೆದಿರುವುದು ಗಮನಕ್ಕೆ ಬಂದಿದೆ.
ಮೃತಪಟ್ಟ ಕುಟುಂಬದ ದಂಪತಿಗೆ ಮೂವರು ಮಕ್ಕಳಿದ್ದು, ಈಗ ಕೊಲೆಯಾದ ಬಾಲಕಿ ಹಿರಿಯ ಪುತ್ರಿಯಾಗಿದ್ದಾಳೆ. ಮಂಗಳೂರು ದಕ್ಷಿಣ ವಿಭಾಗದ ಎಸಿಪಿ ನೇತೃತ್ವದಲ್ಲಿ ಗ್ರಾಮಾಂತರ ಠಾಣೆ ಇನ್‍ಸ್ಪೆಕ್ಟರ್ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ತನಿಖೆ ನಡೆಸುತ್ತಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ವಿವರಣೆ :
“ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಪರಾರಿ ಎಂಬಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಖಾನೆ ಆವರಣದಲ್ಲಿ ಈ ಘಟನೆ ನಡೆದಿದ್ದು, ಯಾರೋ ಎಂಟು ವರ್ಷದ ಬಾಲಕಿಯನ್ನು ಕೊಲೆ ಮಾಡಿ ಎಸೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಪೊಷಕರು ಕೂಡಾ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲೇ ಕೆಲಸ ಮಾಡುತ್ತಿದ್ದ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಶೀಘ್ರದಲ್ಲಿ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಲಿದ್ದೇವೆ.”
-ಎನ್.ಶಶಿಕುಮಾರ್, ಮಂಗಳೂರು ಪೊಲೀಸ್ ಆಯುಕ್ತ.