ಪುತ್ತೂರು : ಯುವಕನೊಬ್ಬ ಅನ್ಯ ಧರ್ಮದ ಮಹಿಳೆಯ ದೇಹ ಸ್ಪರ್ಷಿಸಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ತಂಡವೊಂದು ಯುವಕನನ್ನು ಧಳಿಸಿದ ಹಾಗೂ ಸಂತ್ರಸ್ತ ಮಹಿಳೆ ಯುವಕನ ವಿರುದ್ದ ಠಾಣೆಗೆ ದೂರು ನೀಡಿದ ಘಟನೆ ಪುತ್ತೂರು ನಗರದ ಹೊರವಲಯ ಮರೀಲ್ ನಲ್ಲಿ ನ.18ರಂದು ನಡೆದಿದೆ.
ಪುತ್ತೂರು ತಾಲೂಕು ರಾಮಕುಂಜ ಗ್ರಾಮದ ಹಳೆನೇರೆಂಕಿ ನಿವಾಸಿ ಪ್ರಕಾಶ್ (32ವ.) ಕಿರುಕುಳ ನೀಡಿರುವ ಬಗ್ಗೆ ಸಂತ್ರಸ್ತ ಮಹಿಳೆ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದು ಅದರಂತೆ ಪ್ರಕರಣ ದಾಖಲಾಗಿದೆ. ಪ್ರಕಾಶ್ ಪಾನಮತ್ತನಾಗಿದ್ದ ಎಂಬ ಆರೋಪಗಳು ಕೇಳಿ ಬಂದಿವೆ
ಸಂತ್ರಸ್ತ ಮಹಿಳೆ, ಆರೋಪಿ ಯುವಕ ಹಾಗೂ ಮಕ್ಕಳು ಆಟೋ ರಿಕ್ಷಾವೊಂದರಲ್ಲಿ ಪುತ್ತೂರಿನಿಂದ ಬೆದ್ರಾಳಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಮರೀಲ್ ಎಂಬಲ್ಲಿ ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದೆ . ಆಟೋ ರಿಕ್ಷಾ ಮರೀಲ್ ಸಮೀಪಿಸುತ್ತಿದ್ದಂತೆ ಯುವಕ ಮಹಿಳೆಯ ದೇಹವನ್ನು ಕೈ ಯಿಂದ ಉದ್ದೇಶಪೂರ್ವಕವಾಗಿ ಅಸಭ್ಯವಾಗಿ ಸ್ಪರ್ಷಿಸಿದ್ದಾಗಿ ಹೇಳಲಾಗುತ್ತಿದೆ. ಆಗ ಮಹಿಳೆಯೂ , ಯುವಕ ತನಗೆ ಕಿರುಕುಳ ನೀಡುತ್ತಿರುವುದಾಗಿ ಆಟೋ ರಿಕ್ಷಾಚಾಲಕನಲ್ಲಿ ತಿಳಿಸಿದ್ದು , ಹೀಗಾಗಿ ಚಾಲಕ ರಿಕ್ಷಾ ನಿಲ್ಲಿಸಿದ್ದಾನೆ ಎಂದು ತಿಳಿದು ಬಂದಿದೆ.

ರಿಕ್ಷಾ ನಿಂತ ಕೂಡಲೇ ಆರೋಪಿಯು ರಿಕ್ಷಾದಿಂದ ಇಳಿದು ಓಡಿ ಹೋಗಲು ಪ್ರಯತ್ನಿಸಿದ್ದಾನೆ. ಈ ವೇಳೆ ಹಿಂದೂ ಯುವಕ ಅನ್ಯ ಧರ್ಮೀಯ ಮಹಿಳೆಗೆ ಕಿರುಕುಳ ಕೊಟ್ಟಿದ್ದಾನೆ ಎಂಬ ಸುದ್ದಿ ಹಬ್ಬಿದೆ. ಹೀಗಾಗಿ ತಕ್ಷಣ ಗುಂಪು ಸೇರಿದ ನಿರ್ದೀಷ್ಟ ತಂಡವೊಂದು ಓಡಿ ಹೋಗುತ್ತಿದ್ದ ಯುವಕನನ್ನು ಬೆನ್ನಟ್ಟಿ ಹಿಡಿದು ಥಳಿಸಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಬಳಿಕ ಸಾರ್ವಜನಿಕರು ಪ್ರಕಾಶ್ ನನ್ನು ಆಟೋ ರಿಕ್ಷಾದಲ್ಲಿ ನಗರ ಠಾಣೆಗೆ ಕರೆ ತಂದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮಹಿಳೆ ನೀಡಿದ ದೂರಿನಂತೆ ನಗರ ಠಾಣೆಯಲ್ಲಿ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ.