ನವದೆಹಲಿ: ಸಂಸತ್ತಿನಲ್ಲಿ 3 ಕೃಷಿ ಮಸೂದೆ ರದ್ದಾಗುವವರೆಗೂ ನಮ್ಮ ಪ್ರತಿಭಟನೆ ಮುಂದುವರೆಯಲಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಅವರು ಶುಕ್ರವಾರ ಹೇಳಿದ್ದಾರೆ.
ಇಂದು ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿ ಅವರು, ನೂತನವಾಗಿ ಜಾರಿಗೆ ತರಲಾಗಿರುವ ಮೂರು ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವುದಾಗಿ ಘೋಷಿಸಿದ್ದಾರೆ.
ಕೇಂದ್ರ ಸರ್ಕಾರ ಈ ನಿರ್ಧಾರ ಬೆನ್ನಲ್ಲೇ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ರಾಕೇಶ್ ಟಿಕಾಯತ್ ಅವರು, ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ.ಸಂಸತ್ತಿನಲ್ಲಿ ಕೃಷಿ ಕಾನೂನುಗಳನ್ನು ರದ್ದುಪಡಿಸುವ ದಿನಕ್ಕಾಗಿ ನಾವು ಕಾಯುತ್ತೇವೆ. ಎಂಎಸ್’ಪಿ ಜೊತೆಗೆ ರೈತರ ಇತರೆ ಸಮಸ್ಯೆಗಳ ಬಗ್ಗೆಯೂ ಸರ್ಕಾರ ಮಾತನಾಡಬೇಕು ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ವಿವಾದಿತ ಕಾನೂನನ್ನು ಹಿಂದಕ್ಕೆ ತೆಗೆದುಕೊಂಡಿದೆ, ಇದೀಗ ಸಂಸತ್ತಿನಲ್ಲಿ ಈ ಕಾಯ್ದೆಗಳು ರದ್ದುಕೊಳ್ಳಬೇಕು. ಇಂದು ಸಂಯುಕ್ತ ಮೋರ್ಚಾ ಸಭೆ ನಡೆಯಲಿದೆ. ಎಲ್ಲಾ ವಿಚಾರಗಳ ಕುರಿತು ಸಭೆಯಲ್ಲಿ ನಿರ್ಧರಿಸಲಾಗುತ್ತದೆ. ಎಂಎಸ್‌ಪಿ ಕೂಡ ಒಂದು ಸಮಸ್ಯೆಯಾಗಿದೆ. ಇತರ ವಿಷಯಗಳ ಬಗ್ಗೆ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಸಮಿತಿಯನ್ನು ರಚಿಸಲಾಗುತ್ತದೆ.
ಈಗಲೇ ನಮ್ಮ ಪ್ರತಿಭಟನೆ ಅಂತ್ಯಗೊಳ್ಳುವುದಿಲ್ಲ. ಸಂಯುಕ್ತ ಮೋರ್ಚಾದ 9 ಮಂದಿಯ ಸಮಿತಿಯು ಇಂದು ಸಭೆ ನಡೆಸಿ ಕಾನೂನು ಬದ್ಧವಾಗಿ ಕಾರ್ಯನಿರ್ವಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ.