
ಬೆಳ್ತಂಗಡಿ: ನ : 18 : ಕಾನೂನು ಬಾಹಿರವಾಗಿ ಭೂಮಿ ಅತಿಕ್ರಮಿಸಿಕೊಂಡವರಿಗೆ ಬೆಳ್ತಂಗಡಿ ತಹಸೀಲ್ದಾರ್ ಮಹೇಶ್ ಜೆ. ಅವರು ಭರ್ಜರಿ ಕಾರ್ಯಾಚರಣೆ ನಡೆಸಿ ಬಿಸಿಮುಟ್ಟಿಸಿದ್ದಾರೆ. ಈ ಮೂಲಕ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಕಂದಾಯ ಇಲಾಖೆಯ ಭೂಮಿಯನ್ನು ಮತ್ತೆ ಇಲಾಖೆಯ ಸುಪರ್ದಿಗೆ ಪಡೆದಿದ್ದಾರೆ.
ಹಲವು ವರ್ಷಗಳಿಂದ ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಭಾಗಗಳು ಭೂ ಕಳ್ಳರ ಸ್ವರ್ಗವಾಗಿತ್ತು. ತಮ್ಮ ಸುತ್ತಮುತ್ತ ಆಳುಗಳನ್ನು ಇರಿಸಿ ಗ್ರಾಮ ಮಟ್ಟದಲ್ಲಿ ಅಧಿಕಾರಿಗಳನ್ನು ತಮ್ಮ ಕೈ ಕೆಳಗಿರಿಸಿ ಸರ್ಕಾರಿ ಭೂಮಿಯನ್ನು ಅತಿಕ್ರಮಿಸುವ ಜಾಲ ಬೆಳ್ತಂಗಡಿಯಾಧ್ಯಂತ ನಡೆಯುತ್ತಿತ್ತು. ಬಹುತೇಕ ಕಡೆಗಳಲ್ಲಿ ಅಧಿಕಾರಿಗಳು ತಮ್ಮತ್ತ ಬರದಂತೆ ಕೋರ್ಟ್ ಸ್ಟೇ ತರಲಾಗಿತ್ತು. ಈ ಎಲ್ಲಾ ವಿಚಾರಗಳನ್ನು ತಿಳಿದ ಬೆಳ್ತಂಗಡಿಯ ತಹಸೀಲ್ದಾರ್ ಮಹೇಶ್ ಜೆ. ಆರಂಭದಲ್ಲಿ ಅತಿಕ್ರಮಣದಾರರಿಗೆ ನೋಟಿಸ್ ನೀಡಿದರು. ಅದಕ್ಕೆ ಸಕಾರತ್ಮಕ ಸ್ಪಂದನೆ ದೊರಕದಿದ್ದಾಗ , ಅತಿಕ್ರಮಿತ ಜಮೀನು ವಶ ಪಡಿಸಿಕೊಳ್ಳಲು ಮಹತ್ತರ ಯೋಜನೆ ರೂಪಿಸಿದರು. ತಮ್ಮ ನಂಬುಗೆಯ ಕಂದಾಯ ಅಧಿಕಾರಿಗಳ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ ಅವರು ಒಂದೋಂದಾಗಿ ಅತಿಕ್ರಮಣವನ್ನು ತೆರವುಗೊಳಿಸಿದರು.
ಬೆಳ್ತಂಗಡಿ ತಹಸೀಲ್ದಾರ್ ನೇತೃತ್ವದ ಈ ಕಾರ್ಯಾರಚರಣೆಯಲ್ಲಿ ಕೆಲವೇ ದಿನದೊಳಗೆ 37.2 ಎಕರೆ ಜಮೀನು ತೆರವುಗೊಳಿಸಲಾಗಿದೆ. ಜಿಲ್ಲೆಯ ಇತಿಹಾಸದಲ್ಲೇ ತಹಸೀಲ್ದಾರರೊಬ್ಬ ಕಡಿಮೆ ಕಾಲಾವಧಿಯಲ್ಲಿ ಅತಿಕ್ರಮಣಗೊಂಡ ಅತಿ ಹೆಚ್ಚು ಭೂಮಿಯನ್ನು ಸರ್ಕಾರದ ಸುಪರ್ದಿಗೆ ಒಪ್ಪಿಸಿದ ಹೆಗ್ಗಳಿಕೆಗೆ ಮಹೇಶ್ ಪಾತ್ರರಾಗಿದ್ದಾರೆ.

10 ವರ್ಷಗಳಿಂದ ಅತಿಕ್ರಮಣ
ಶಾಲಾ ಆಟದ ಮೈದಾನ, ವಿವಿಧ ಅಭಿವೃದ್ಧಿ ಕಾಮಗಾರಿಗೆ ಮೀಸಲಿರಿಸಿದ ಭೂಮಿ ಕಳೆದ 10 ವರ್ಷಗಳಿಂದ ಅತಿಕ್ರಮಣಗೊಂಡಿರುವ ಬಗ್ಗೆ ಕಂದಾಯ ಇಲಾಖೆಗೆ ಈ ಹಿಂದೆ ದೂರುಗಳು ಬಂದಿದ್ದರೂ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಲು ಹಿಂದೇಟು ಹಾಕುತ್ತಿದ್ದರು. ಇತ್ತೀಚೆಗೆ ಬೆಳ್ತಂಗಡಿ ತಹಸೀಲ್ದಾರ್ ಆಗಿ ಅಧಿಕಾರ ವಹಿಸಿಕೊಂಡ ಮೈಸೂರು ಮೂಲದ ಅಧಿಕಾರಿ ಮಹೇಶ್ ಜೆ. ಅವರು ತಾಲೂಕಿನ ಮೂಲೆ ಮೂಲೆಗಳಲ್ಲಿರುವ ಕಂದಾಯ ಭೂಮಿಯ ಪರಿಶೀಲನೆ ನಡೆಸಿದ್ದರು. ಈ ವೇಳೆ ಹಲವು ಅತಿಕ್ರಮಣಕಾರರಿಗೆ ನೋಟಿಸ್ ನೀಡಿ ಜಾಗ ತೆರವುಗೊಳಿಸುವಂತೆ ಸೂಚಿಸಿದ್ದರು. ಆದರೆ ಬಹುತೇಕ ಅತಿಕ್ರಮಣಕಾರರು ನೋಟಿಸ್, ಮನವಿಗೆ ಕ್ಯಾರೇ ಮಾಡದ ಹಿನ್ನೆಲೆಯಲ್ಲಿ ಕಂದಾಯ ಅಧಿಕಾರಿಗಳ ಜತೆಗೂಡಿ ತೆರವು ಕಾರ್ಯಾಚರಣೆ ಕೈಗೊಂಡಿದ್ದರು.
ಶಾಲಾ ಆಟದ ಮೈದಾನ 23 ಕುಟುಂಬಗಳಿಂದ ಕಬಳಿಕೆ
ಈೀಗಾಗಲೇ ಅಭಿವೃದ್ದಿ ಕಾಮಗಾರಿಗಳಿಗೆ, ಮೈದಾನ, ಸಂಘ ಸಂಸ್ಥೆಗಳ ಕಾರ್ಯಚಟುವಟಿಕೆಗಳಿಗೆ ಮೀಸಲಾಗಿರಿಸಿದ ಭೂಮಿಯೂ ಅತಿಕ್ರಮಣಗೊಂಡ ದೂರು ಇದೆ. ಇತ್ತೀಚೆಗೆ ವೇಣೂರು ವಿಭಾಗದ ಕಂದಾಯ ಅಧಿಕಾರಿ ಎಂ.ಎನ್ ರವಿ ಅವರ ವ್ಯಾಪ್ತಿಯಲ್ಲಿ ಶಾಲಾ ಆಟದ ಮೈದಾನವನ್ನು 23 ಕುಟುಂಬಗಳು ಕಾನೂನು ಬಾಹಿರವಾಗಿ ಅತಿಕ್ರಮಿಸಿರುವ ಬಗ್ಗೆ ತಹಸಿಲ್ದಾರ್ ಅವರಿಗೆ ವರದಿಯನ್ನೂ ಸಲ್ಲಿಸಿದ್ದರು. ಈ ವರದಿಯ ಆಧಾರದಲ್ಲೂ ತೆರವು ಕಾರ್ಯಾಚರಣೆ ನಡೆಸಿದ ತಹಸೀಲ್ದಾರ್ ಮಹೇಶ್ ಅವರು 2.30 ಎಕರೆ ಭೂಮಿಯನ್ನು ಶಾಲೆಯ ಸುಪರ್ಧಿಗೆ ನೀಡಲಾಗಿದೆ.

ಬೆಳ್ತಂಗಡಿ ಇತಿಹಾಸದಲ್ಲೇ ಅತೀ ದೊಡ್ಡ ಕಾರ್ಯಾಚರಣೆ
ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದ ಸರ್ವೆ ನಂ. 113/1ರಲ್ಲಿ 10 ಎಕರೆ, ಪುತ್ತಿಲ ಗ್ರಾಮದ ಸರ್ವೆ ನಂ. 47/1ರಲ್ಲಿ 3.5 ಎಕರೆ, ಕಳಂಜ ಗ್ರಾಮದ ಸರ್ವೆ ನಂ. 29/2ರಲ್ಲಿ 1.1 ಎಕರೆ ಹಾಗೂ ಸರ್ವೆ ನಂ. 30ರಲ್ಲಿ 4.75 ಎಕರೆ, ಮಚ್ಚಿನ ಗ್ರಾಮದ ಸರ್ವೆ ನಂ. 188/2ರಲ್ಲಿ 2.77 ಎಕರೆ ಹಾಗೂ ಸರ್ವೆ ನಂ. 199/1ರಲ್ಲಿ 2 ಎಕರೆ, ಸವಣಾಲು ಗ್ರಾಮದ ಸರ್ವೆ ನಂ. 31 ಹಾಗೂ 81ರಲ್ಲಿ ಒಟ್ಟು 5 ಎಕರೆ, ಕರಿಮಣೇಲು ಗ್ರಾಮದ ಸರ್ವೆ ನಂ. 114/2ರಲ್ಲಿ 2.30 ಎಕರೆ ಭೂಮಿ ಅತಿಕ್ರಮಣಗೊಂಡಿತ್ತು. ಒಟ್ಟು 37.2 ಎಕರೆ ಕಂದಾಯ ಭೂಮಿಯನ್ನು ತೆರವುಗೊಳಿಸಿರುವುದು ಬೆಳ್ತಂಗಡಿ ಇತಿಹಾಸದಲ್ಲೇ ಅತೀ ದೊಡ್ಡ ಕಾರ್ಯಾಚರಣೆ ಎನಿಸಿದೆ.

ಕಂದಾಯ ಭೂಮಿ ಸೇರಿದಂತೆ ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿ ಕಟ್ಟಡ ನಿರ್ಮಿಸುವುದು ಸೇರಿದಂತೆ ಇನ್ನಿತರ ಚಟುವಟಿಕೆ ನಡೆಸುವುದು ಕಾನೂನು ಬಾಹಿರ. ಈಗಾಗಲೇ ಅತಿಕ್ರಮಣಕಾರರಿಗೆ ನೋಟಿಸ್ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಡೆಗಳಲ್ಲಿ ಅತಿಕ್ರಮಣ ಪತ್ತೆ ಹಚ್ಚಿ ತೆರವು ಕಾರ್ಯಾಚರಣೆ ನಡೆಸಲಾಗಿವುದು ಎಂದು ಬೆಳ್ತಂಗಡಿ ತಹಸೀಲ್ದಾರ್ ಮಹೇಶ್ ಜೆ. ಅತಿಕ್ರಮಣಗಾರರಿಗೆ ಎಚ್ಚರಿಕೆ ನೀಡಿದ್ದಾರೆ.