ಮಂಗಳೂರು : ನ 17 : ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ಘೋಷಣೆಯಾಗಿ ವಾರ ಕಳೆದರೂ ಅವಿಭಜಿತ ದ.ಕ ಜಿಲ್ಲೆಯ ಕಾಂಗ್ರೇಸ್ ಪಾಳಯದಲ್ಲಿ ನಿರೀಕ್ಷಿತ ಉತ್ಸಾಹ ಕಂಡು ಬರುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಜಿಲ್ಲೆಯ ಪ್ರಭಲ ಸಹಕಾರಿ ದುರೀಣ ಎಸ್.ಸಿ.ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದು.
ಮೊದಲೇ ಕಾಂಗ್ರೇಸ್ ಪಕ್ಷದ ಬಳಿ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವಷ್ಟು ಮತಗಳಿಲ್ಲ. ಇನ್ನೊಂದೆಡೆ ಪಕ್ಷದಲ್ಲಿ 11 ಮಂದಿ ಈ ಸ್ಥಾನಕ್ಕಾಗಿ ಅಕಾಂಕ್ಷಿಗಳಾಗಿದ್ದುಕೊಂಡು ಪ್ರಭಲವಾಗಿ ಲಾಭಿಗೆ ತೊಡಗಿರುವುದು. ಇವೆರೆಡರ ಮಧ್ಯೆ ಕಾಂಗ್ರೇಸ್ ಹಿತಚಿಂತಕ ವಲಯದಲ್ಲಿರುವ ಡಾ.ರಾಜೇಂದ್ರ ಕುಮಾರ್ ಸ್ಪರ್ಧಾ ಕಣಕ್ಕೆ ಇಳಿದಿರುವುದು ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ .
ಈ ವಿಧಾನ ಪರಿಷತ್ತಿನ ಬಹುತೇಕ ಮತದಾರರು ಸ್ಥಳೀಯಾಡಳಿತ ಸಂಸ್ಥೆಯ ಜನಪ್ರತಿನಿಧಿಗಳಾಗಿರುವುದು, ಇದರಲ್ಲಿ ಬಹುಪಾಲು ಮಂದಿ ಸಹಕಾರಿ ಕ್ಷೇತ್ರದಿಂದ ಬಂದವರು ಆಗಿರುವುದು ರಾಜಕೀಯ ಪಕ್ಷಗಳ ತಲೆ ನೋವಿಗೆ ಕಾರಣವಾಗಿದೆ. ಸ್ವತಂತ್ರ ಅಭ್ಯರ್ಥಿ ಡಾ.ರಾಜೇಂದ್ರ ಕುಮಾರ್ ರವರು ಕಳೆದ 25 ವರ್ಷಗಳಿಂದ ಜಿಲ್ಲೆಯ ಸಹಕಾರಿ ಕ್ಷೇತ್ರದ ಅನಭಿಷಕ್ತ ದೊರೆಯ ರೂಪದಲ್ಲಿ ಕಂಗೊಳಿಸಿರುವುದು ಹಾಗೂ ಸಹಕಾರಿ ಕ್ಷೇತ್ರದಿಂದ ಬಂದ ಮತದಾರರ ಮೇಲೆ ದಟ್ಟ ಪ್ರಭಾವ ಹೊಂದಿರುವುದು ಕಾಂಗ್ರೇಸ್ ಆಸೆಗಳಿಗೆ ನೀರೆರೆಯುತ್ತಿದೆ.

ಚುನಾವಣಾ ಮತ ಲೆಕ್ಕಚಾರ ಹೀಗಿದೆ
ಅವಿಭಜಿತ ದ.ಕ. ಜಿಲ್ಲೆಯಲ್ಲಿ ಈ ದ್ವಿಸದಸ್ಯ ವಿಧಾನ ಪರಿಷತ್ ಚುಣಾವಣೆಯಲ್ಲಿ ಒಟ್ಟು 5914 ಮಂದಿ ಮತ ಚಲಾಯಿಸುವ ಅರ್ಹತೆ ಪಡೆದಿದ್ದಾರೆ. ಇದರಲ್ಲಿ 3,608 ಬಿಜೆಪಿ 1̧909 ಕಾಂಗ್ರೆಸ್, ಎಸ್ಡಿಪಿಐ 172, ಇತರೆ 219, ಜೆಡಿಎಸ್ 6 ಬೆಂಬಲಿತರ ಅಥಾವ ತನ್ನ ಪಕ್ಷದ ಚಿಹ್ನೆಯಲ್ಲಿ ಗೆದ್ದ ಜನಪ್ರತಿನಿಧಿಗಳ ಮತಗಳನ್ನು ಹೊಂದಿದೆ ಎನ್ನಲಾಗಿದೆ.
ಕನಿಷ್ಟ 1975 ರಷ್ಟು ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆದರೆ ಈ ಚುನಾವಣೆ ಗೆಲ್ಲಲು ಸಾಕಾಗುತ್ತದೆ ಎಂದು ಅಂದಾಜಿಸಲಾಗುತ್ತಿದೆ. ಈ ಲೆಕ್ಕಚಾರದ ಪ್ರಕಾರ ಬಿಜೆಪಿ ಬಳಿ ಮೊದಲ ಅಭ್ಯರ್ಥಿಗೆ ಮತ ಚಲಾಯಿಸಿದ ಬಳಿಕವೂ ಮತ್ತೂ 1600 ಮತಗಳು ಹೆಚ್ಚುವರಿಯಾಗಿ ಉಳಿಯಲಿದೆ ಹಾಗೂ ಕಾಂಗ್ರೇಸ್ ಗೆ ತನ್ನ ಅಭ್ಯರ್ಥಿಯ ಗೆಲುವಿಗೆ ಅಂದಾಜು 100 ಮತಗಳಷ್ಟು ಕೊರತೆ ಬೀಳಲಿದೆ.
ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಈಗಾಗಲೇ ಕಾಂಗ್ರೆಸ್ ಬೆಂಬಲಿಗ ಮಂಜುನಾಥ ಭಂಡಾರಿ, ದ.ಕ. ಕಾಂಗ್ರೆಸ್‌ನಿಂದ ಶಶಿಧರ ಹೆಗ್ಡೆ, ಕೃಪಾ ಅಳ್ವ ಸೇರಿದಂತೆ ಒಟ್ಟು 11 ಮಂದಿ ತಲಾ 1 ಲಕ್ಷ ರೂ ಶುಲ್ಕ ನೀಡಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಕೆಲ ಪ್ರಭಾವಿಗಳು ದೊಡ್ಡ ಮಟ್ಟದ ಲಾಬಿಯಲ್ಲಿ ಕೂಡ ತೊಡಗಿದ್ದಾರೆ.

ರಾಜೇಂದ್ರ ಕುಮಾರ್ ಗೆ ಬೆಂಬಲ ?
ಪಕ್ಷದ ಬಳಿ ಅಗತ್ಯ ಮತಗಳು ಇಲ್ಲದಿರುವ ಹಿನ್ನಲೆಯಲ್ಲಿ ಹಾಗೂ ಪಕ್ಷದ ಹಿತ ಚಿಂತಕರಾಗಿರುವರೇ ಸ್ವತಂತ್ರ ಅಭ್ಯರ್ಥಿಯಾಗಿ ನಿಂತಿರುವುದರಿಂದ ಈ ಬಾರಿಯ ಚುಣಾವಣೆಯಲ್ಲಿ ಕಾಂಗ್ರೇಸ್ ಸ್ಪರ್ಧೆ ಮಾಡದೆ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಬೇಕು ಎಂದು ಕಾಂಗ್ರೇಸ್ ನ ಒಂದು ಬಣ ವಾದಿಸುತ್ತಿದೆ .ಇನ್ನೂ ಕೆಲವರು ರಾಜೇಂದ್ರ ಕುಮಾರ್ ಅವರನ್ನು ಕಾಂಗ್ರೇಸ್ ಟಿಕೆಟ್ ಅಡಿಯಲ್ಲಿ ಸ್ಪರ್ಧಿಸುವಂತೆ ಮನವೊಲಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಅದರೆ ಈ ಪ್ರಪೋಸಲ್ ಗೆ ರಾಜೇಂದ್ರ ಕುಮಾರ್ ಅವರು ಒಪ್ಪುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ
ಹೀಗಾಗಿ ಟಿಕೆಟ್ ಹಂಚಿಕೆಯ ಬಗ್ಗೆ ಬುಧವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರವರು ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ವೇಳೆ ಪಕ್ಷೇತರ ಅಭ್ಯರ್ಥಿ ಡಾ.ರಾಜೇಂದ್ರ ಕುಮಾರ್ ಅವರ ಜೊತೆ ಮಾತುಕತೆ ನಡೆಸುವ ಸಾಧ್ಯತೆ ಇದೆ. ಸಂದರ್ಭ ಕಾಂಗ್ರೆಸ್ ಸ್ಪರ್ಧಿಸುವುದೇ ಅಥವಾ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡುವುದೇ ಎಂಬುದು ನಿರ್ಧಾರವಾಗಲಿದೆ. ಆದರೆ ಯಾವುದೇ ಕಾರಣಕ್ಕೂ ತಾನು ಸ್ಪರ್ಧಾ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ರಾಜೇಂದ್ರ ಕುಮಾರ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ಡಿಕೆಶಿ ಆಪ್ತ ಯುಬಿ ಶೆಟ್ಟಿ ಹೆಸರು ಮುನ್ನಲೆಗೆ :

ಇನ್ನೂ ಡಿ.ಕೆ ಶಿವಕುಮಾರ್ ರವರು ತಮ್ಮ ಆಪ್ತ ಹಾಗೂ ಗುತ್ತಿಗೆದಾರ ಯು.ಬಿ ಶೆಟ್ಟಿಯವರನ್ನು ಕಣಕ್ಕಿಲಿಸಲು ಮನ: ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೇ ಅವರು ಉಳಿದ 11 ಮಂದಿ ಅಕಾಂಕ್ಷಿಗಳ ಹಾಗೇ 1 ಲ.ರೂ ಡೆಪಾಸಿಟ್ ಪಾವತಿಸಿ ಅರ್ಜಿ ಗುಜರಾಯಿಸಿಲ್ಲ. ಟಿಕೆಟ್ ಆಕಾಂಕ್ಷಿಗಳಿಗೆ ತಾನೇ ಮಾಡಿದ ನೀಯಮವನ್ನು ಪಕ್ಷದ ಹೈಕಮಾಂಡ್ ಸೂಪರ್ ಸೀಡ್ ಮಾಡಿ ಯು.ಬಿ ಶೆಟ್ಟಿಯವರಿಗೆ ಟಿಕೆಟ್ ನೀಡುವುದೆ ಎನ್ನುವುದು ಸದ್ಯದ ಕುತೂಹಲ.
ಈ ಕ್ಷೇತ್ರ ಹಿಂದೆ ಹಲವು ಬಾರಿ ಕಾಂಗ್ರೇಸ್ ಪಕ್ಷದ ಕೈ ಹಿಡಿದ ಕ್ಷೇತ್ರ. ಕುಂದಾಪುರದ ಹಿರಿಯ ಕೈ ಮುಖಂಡ ಪ್ರತಾಪ್ ಚಂದ್ರ ಶೆಟ್ಟಿಯವರು ಕಳೆದ ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ದ.ಕ. ವಿಧಾನ ಪರಿಷತ್ ಚುನಾವಣಾ ಇತಿಹಾಸದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೆ ಇದ್ದ ಉದಾಹರಣೆ ಇಲ್ಲ. ಹಾಗಾಗಿ ಸದ್ಯ ಈ ಕ್ಷೇತ್ರ ಕೌತುಕದ ಕಣವಾಗಿದೆ.