ಪುತ್ತೂರು: ಪುತ್ತೂರಿನ ಕೊಡಿಪ್ಪಾಡಿಯಲ್ಲಿ ನಡೆದ ಗೋಕಳ್ಳತನದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕೆಂದು ಆಗ್ರಹಿಸಿ ಹಾಗೂ ಇನ್ನು ಮುಂದೆ ಈ ರೀತಿಯ ಘಟನೆಗಳು ನಡೆಯದಿರುವುಂತೆ ಮುನ್ನೆಚ್ಚರಿಕೆ ವಹಿಸಲು ಒತ್ತಾಯಿಸಿ ವಿಶ್ವ ಹಿಂದು ಪರಿಷದ್ ಬಜರಂಗದಳ ಪುತ್ತೂರು ಪ್ರಖಂಡದ ವತಿಯಿಂದ ಪುತ್ತೂರು ನಗರ ಠಾಣಾ ಉಪನಿರೀಕ್ಷಕರಿಗೆ ಮನವಿ ಸಲ್ಲಿಸಲಾಯಿತು
ಈ ಸಂದರ್ಭ ವಿಶ್ವ ಹಿಂದೂ ಪರಿಷದ್ ಪುತ್ತೂರು ಪ್ರಖಂಡ ಸಹ ಕಾರ್ಯದರ್ಶಿ ವಿಶಾಖ್ ಸಸಿಹಿತ್ಲು, ವಿಶ್ವ ಹಿಂದು ಪರಿಷದ್ ಪುತ್ತೂರು ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖ್ ಶ್ರೀಧರ್ ತೆಂಕಿಲ, ಬಜರಂಗದಳ ಪುತ್ತೂರು ಪ್ರಖಂಡ ಸಹ ಸಂಚಾಲಕ ಜಯಂತ ಕುಂಜೂರುಪಂಜ, ಸಂಜಯ್ ಉಪಸ್ಥಿತರಿದ್ದರು.
ಘಟನೆಯ ಹಿನ್ನಲೆ: ಕೊಡಿಪ್ಪಾಡಿ ಶ್ರೀ ಜನಾರ್ದನ ದೇವಸ್ಥಾನದ ಬಳಿಯ ಲಕ್ಷ್ಮಣ ಗೌಡರವರ ಮನೆಯ ಒಂದು ದನ ಮತ್ತು ಎರಡು ಕರುವನ್ನು ಅಲ್ಲಿಯೇ ಪಕ್ಕದ ಗುಡ್ಡೆಯಲ್ಲಿ ಮೇಯಲು ಬಿಡಲಾಗಿತ್ತು. ದನ ಹಾಗೂ ಕರುಗಳು ವಾಪಸ್ ಬಾರದೇ ಇದ್ದ ಹಿನ್ನೆಲೆಯಲ್ಲಿ ಹಲವೆಡೆ ಹುಡುಕಾಟ ನಡೆಸಲಾಗಿತ್ತು. ಆದರೂ ಪತ್ತೆಯಾಗದ ನಿಟ್ಟಿನಲ್ಲಿ ಲಕ್ಷ್ಮಣ ಗೌಡರವರ ಪುತ್ರಿ ರಕ್ಷಿತಾರವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ನಂತರ ಕೊಡಿಪ್ಪಾಡಿ ಶ್ರೀ ಜನಾರ್ದನ ದೇವಸ್ಥಾನದ ಸಿ.ಸಿ.ಟಿ.ವಿ.ಯನ್ನು ಸ್ಥಳೀಯರು ಪರಿಶೀಲಿಸಿದಾಗ ದನ ಮತ್ತು ಕರುಗಳನ್ನು ಕಾರೊಂದರಲ್ಲಿ ತುಂಬಿಸಿ ಅಪಹರಿಸಿರುವ ದೃಶ್ಯ ಪತ್ತೆಯಾಗಿದೆ.