ಎಡಮಂಗಲ: ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕ್ ಗೆ ನಾಯಿಯೊಂದು ಅಡ್ಡ ಬಂದ ಹಿನ್ನಲೆಯಲ್ಲಿ ಬೈಕ್ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಸಹ ಸವಾರ ಗಂಭೀರವಾಗಿ ಗಾಯಗೊಂಡು ಮೃತ ಪಟ್ಟ ಘಟನೆ ಕಡಬ ತಾಲೂಕಿನ ಎಡಮಂಗಲದಲ್ಲಿ ನಡೆದಿದೆ.
ಕೇರಳ ಮೂಲದ ಪ್ರಸ್ತುತ ಎಡಮಂಗಲದಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡಿಕೊಂಡಿದ್ದ ಸುರೇಶ ( 53 ವರ್ಷ) ಮೃತಪಟ್ಟವರು. ಅಪಘಾತ ಸೋಮವಾರ ರಾತ್ರಿ 7 ಗಂಟೆ ಸುಮಾರಿಗೆ ನಡೆದಿದೆ ಎಂದು ತಿಳಿದು ಬಂದಿದೆ
ಸೋಮವಾರ ಸಂಜೆ ಎಡಮಂಗಲ-ಚಾರ್ವಕ ರಸ್ತೆಯಲ್ಲಿ ಎಡಮಂಗಲ ಪೇಟೆಯಿಂದ ಕೊಳಂಬೆ ಎಂಬಲ್ಲಿಗೆ ರಬ್ಬರ್ ಟ್ಯಾಪಿಂಗ್ ಮಾಡಲು ಸುರೇಶ್ ಹಾಗೂ ಅವರ ಅಣ್ಣ ಸಂತೋಷ್ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಸಂತೋಷ್ ರವರು ಬೈಕ್ ಚಲಾಯಿಸುತ್ತಿದ್ದು, ರಸ್ತೆಯಲ್ಲಿ ಇದ್ದಕ್ಕಿದಂತೆ ನಾಯಿ ಅಡ್ಡ ಬಂದಾಗ ಗಲಿಬಿಲಿಗೆ ಒಳಗಾದ ಅವರು ಸಡನ್ನಾಗಿ ಬ್ರೇಕ್ ಹಿಡಿದಿದ್ದು ಈ ವೇಳೆ ಸವಾರನ ನಿಯಂತ್ರಣ ತಪ್ಪಿದ ಬೈಕ್ ಡಾಂಬರು ರಸ್ತೆ ಬಿಟ್ಟು ಪಕ್ಕಕ್ಕೆ ಇಳಿದು ಉರುಳಿ ಬಿದ್ದಿದೆ ಎನ್ನಲಾಗಿದೆ.

ಇದರ ಪರಿಣಾಮ ಸಹ ಸವಾರ ಸುರೇಶ್ ಎಂಬವರ ತಲೆಗೆ ಗಂಭೀರ ಗಾಯವಾಗಿತ್ತು. ಗಾಯಾಳುವನ್ನು ಚಿಕಿತ್ಸೆಗಾಗಿ ಅಂಬುಲೆನ್ಸ್ ಮೂಲಕ ಕಡಬ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.