ಉಪ್ಪಿನಂಗಡಿ: ಬಂಟ್ವಾಳ ತಾಲೂಕು ರಾಮಲ್ ಕಟ್ಟೆ ಎಂಬಲ್ಲಿ ಭಾನುವಾರ ಸಂಭವಿಸಿದ ಪಿಕಪ್ ಅಪಘಾತ ಮೃತಪಟ್ಟಿದ್ದ ಪ್ರಾಣಸ್ನೇಹಿತರಾಗಿದ್ದ ಆಶಿಕ್ (21) ಹಾಗೂ ಚೇತನ್(21) ಅಂತ್ಯಸಂಸ್ಕಾರ ನ.15ರಂದು ಉಪ್ಪಿನಂಗಡಿಯಲ್ಲಿ ಜತೆಯಾಗಿಯೇ ನೆರವೇರಿತು.
ಉಪ್ಪಿನಂಗಡಿಯ ಮಮತಾ ಶೆಟ್ಟಿ ಎಂಬುವರ ಪುತ್ರ ಆಶಿಕ್ ಮೃತದೇಹವನ್ನು ನಟ್ಟಿಬೈಲಿನ ಮನೆಯಿಂದ ಅಂತ್ಯಸಂಸ್ಕಾರಕ್ಕೆ ಉಪ್ಪಿನಂಗಡಿ ಸ್ಮಶಾನಕ್ಕೆ ತರಲಾಯಿತು.
ಇನ್ನೊಂದೆಡೆ ಬಾರ್ಯ ಗ್ರಾಮದ ಪಿಲಿಗೂಡು ನಿವಾಸಿ ದಿ. ಧರ್ಣಪ್ಪ ಪೂಜಾರಿ ಅವರ ಪುತ್ರ ಚೇತನ್ ಮೃತದೇಹವನ್ನೂ ಉಪ್ಪಿನಂಗಡಿ ಸ್ಮಶಾನಕ್ಕೆ ತರಲಾಯಿತು.
ಬಾಲ್ಯ ಸ್ನೇಹಿತರಾದ ಚೇತನ್ ಮತ್ತು ಆಶಿಕ್ ಮೃತದೇಹಗಳ ಅಂತ್ಯಕ್ರಿಯೆ ಒಟ್ಟಿಗೇ ಏಕಕಾಲದಲ್ಲಿ ನಡೆಸಲಾಯಿತು.
ನ.14ರಂದು ಮಂಗಳೂರಿನ ಕಾರ್ಯಕ್ರಮಕ್ಕೆ ಕ್ಯಾಟರಿಂಗ್ ಆಹಾರವನ್ನು ಸಾಗಿಸಿ ಕಾರ್ಯಕ್ರಮ ಮುಗಿಸಿ ಹಿಂದಿರುಗುತಿದ್ದಾಗ ಬಂಟ್ವಾಳದಲ್ಲಿ ಪಿಕಪ್ ವಾಹನ ಮರಕ್ಕೆ ಡಿಕ್ಕಿಯಾಗಿದೆ. ಸ್ಥಳದಲ್ಲೇ ಇಬ್ಬರು ಮೃತಪಟ್ಟರೇ ಇನ್ನಿಬ್ಬರು ಗಂಭೀರ ಗಾಯಗೊಂಡಿದ್ದರು.
ಚಲಿಸುತಿದ್ದ ಪಿಕಪ್ ನ ವ್ಹೀಲ್ ರಾಡ್ ತುಂಡಾಗಿ ವಾಹನವು ಎರಡು ಸುತ್ತು ತಿರುಗಿತು. ಆಗ ಪಿಕಪ್ ನ ಹಿಂಬದಿಯಲ್ಲಿ ಕೂತಿದ್ದ ನಾಲ್ವರು ರಸ್ತೆಗೆ ಎಸೆಯಲ್ಪಟ್ಟರು. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದರು.
ಕೂಡಲೇ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಇಬ್ಬರೂ ಬದುಕುಳಿಯಲಿಲ್ಲ.
ಮೃತಪಟ್ಟ ಇಬ್ಬರೂ ಬಾಲ್ಯ ಸ್ನೇಹಿತರಾಗಿದ್ದರು. ಇವರ ಮೃತದೇಹ ಉಪ್ಪಿನಂಗಡಿ ತಲುಪಿದಾಗ ಜನಸಮೂಹವೇ ಸೇರಿತ್ತು.