ಬಿಹಾರ: ಕಳೆದ ವರ್ಷದ ಜೂನ್ ತಿಂಗಳಿನಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವನ್ನಪ್ಪಿದರು. ಸುಶಾಂತ್ ಸಿಂಗ್ ನಿಗೂಢ ಸಾವಿನ ಕುರಿತು ಅಭಿಮಾನಿಗಳಿಗೆ ಹಲವು ಅನುಮಾನಗಳಿವೆ. ಸುಶಾಂತ್ ಸಿಂಗ್‌ರದ್ದು ಆತ್ಮಹತ್ಯೆಯಲ್ಲ ಕೊಲೆ ಅಂತ ಈಗಲೂ ವಾದಿಸುವ ಅಭಿಮಾನಿಗಳಿದ್ದಾರೆ. ಸುಶಾಂತ್ ಸಿಂಗ್ ಅವರ ಸಾವಿನ ಕುರಿತು ವಿವಿಧ ಆಯಾಮಗಳಲ್ಲಿ ಸಿಬಿಐ, ಎನ್‌ಸಿಬಿ ಮತ್ತು ಇಡಿ ತನಿಖೆ ನಡೆಸುತ್ತಿದೆ. ಹೀಗಿರುವಾಗಲೇ, ಸುಶಾಂತ್ ಸಿಂಗ್ ರಜಪೂತ್ ಅವರ ಕುಟುಂಬದ ಐವರು ಮಂದಿ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಫ್ಯಾಮಿಲಿಯ ಐವರು ಮಂದಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದ ಲಖಿಸರಾಯ್ ಜಿಲ್ಲೆಯ ಪಿಪ್ರಾ ಗ್ರಾಮದ ಶೇಖ್‌ಪುರ-ಸಿಕಂದ್ರ ರಸ್ತೆಯಲ್ಲಿ ಇಂದು (ನವೆಂಬರ್ 16) ಬೆಳಗ್ಗೆ 6.10ರ ಸುಮಾರಿಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಟ್ರಕ್‌ಗೆ ಟಾಟಾ ಸುಮೋ ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಸಾವನ್ನಪ್ಪಿದ್ದು, ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದವರನ್ನ ಕೂಡಲೆ ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ. ಅಪಘಾತದಲ್ಲಿ ಲಾಲ್‌ಜೀತ್ ಸಿಂಗ್, ನೇಮಾನಿ ಸಿಂಗ್, ರಾಮ್‌ಚಂದ್ರ ಸಿಂಗ್, ಬೇಬಿ ದೇವಿ, ಅನಿತಾ ದೇವಿ ಮತ್ತು ಪ್ರೀತಂ ಕುಮಾರ್ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಸುಶಾಂತ್ ಸಿಂಗ್ ಕುಟುಂಬಸ್ಥರೆಲ್ಲಾ ಪಾಟ್ನಾಗೆ ತೆರಳಿದ್ದರು. ಅಲ್ಲಿ ಗೀತಾ ದೇವಿ (ಓ.ಪಿ.ಸಿಂಗ್ ಅವರ ಸಹೋದರಿ) ಅವರ ಅಂತ್ಯಸಂಸ್ಕಾರ ಮುಗಿಸಿ ವಾಪಸ್ ಮರಳುತ್ತಿದ್ದರು. ಟಾಟಾ ಸುಮೋದಲ್ಲಿ ವಾಪಸ್ ಬರುವಾಗ ಟ್ರಕ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಸುಶಾಂತ್ ಸಿಂಗ್ ಕುಟುಂಬದ ಐವರು ಮೃತಪಟ್ಟಿದ್ದಾರೆ. ಅಂದ್ಹಾಗೆ, ಸುಶಾಂತ್ ಸಿಂಗ್ ಅವರ ಹಿರಿಯ ಸಹೋದರಿಯ ಪತಿಯೇ ಓ.ಪಿ.ಸಿಂಗ್.
‘’ಪಾಟ್ನಾದಿಂದ ಹತ್ತು ಮಂದಿ ಟಾಟಾ ಸುಮೋದಲ್ಲಿ ವಾಪಸ್ ಬರುತ್ತಿದ್ದರು. ಟ್ರಕ್ ಹಾಗೂ ಟಾಟಾ ಸುಮೋ ಡಿಕ್ಕಿಯಾದ ಪರಿಣಾಮ ಟಾಟಾ ಸುಮೋದ ಚಾಲಕ ಸೇರಿದಂತೆ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ’’ ಎಂದು ಲಖಿಸರಾಯ್ ಎಸ್‌ಪಿ ಸುಶೀಲ್ ಕುಮಾರ್ ತಿಳಿಸಿದ್ದಾರೆ.