ಮಂಗಳೂರು, ನ.16: ಗುಂಪೊಂದು ಬೈಕ್ ನಲ್ಲಿ ಜತೆಯಾಗಿ ತೆರಳುತ್ತಿದ್ದ ಯುವಕ ಮತ್ತು ಯುವತಿಯನ್ನು ತಡೆದು ಹಲ್ಲೆ ನಡೆಸಿದ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಸೋಮವಾರ ತಡ ರಾತ್ರಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 6 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು , ಇವರೆಲ್ಲರೂ ಹಿಂದೂ ಪರ ಸಂಘಟನೆ ಜತೆ ಗುರುತಿಸಿಕೊಂಡವರು ಎನ್ನಲಾಗಿದೆ.
ಪ್ರಹ್ಲಾದ್, ಪ್ರಶಾಂತ್, ಗುರುಪ್ರಸಾದ್ , ಪ್ರತೀಶ್, ಭರತ್, ಸುಕೇಶ್ ಬಂಧಿತರು. ಇವರ ವಿರುದ್ದ
IPC 1860 , U/s-341,143,147,148,323,504,506,153A,354,354(D),149 ಸೆಕ್ಷನ್ ಗಳಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಮುಕ್ಕದ ಶ್ರೀನಿವಾಸ್ ಕಾಲೇಜಿನ ವಿದ್ಯಾರ್ಥಿ ಮೊಹಮ್ಮದ್ ಯಾಸೀನ್ ಮತ್ತು ಆತನ ಸ್ನೇಹಿತೆ ಅದೇ ಕಾಲೇಜಿನ ವಿದ್ಯಾರ್ಥಿನಿ ಆನ್ಸಿ ವಿನ್ನಿ ಡಯಾಸ್ಹ್ ಹಲ್ಲೆಗೊಳಗಾದವರು.
ಯಾಸೀನ್ ತನ್ನ ಗೆಳತಿಯನ್ನು ಬೈಕಿನಲ್ಲಿ ಆಕೆಯ ಅಪಾರ್ಟ್ಮೆಂಟ್ ಗೆ ಬಿಡಲು ಕರೆದುಕೊಂಡು ಹೋಗುತ್ತಿದ್ದಾಗ ಆರು ಜನರ ತಂಡ ಅಡ್ಡಗಟ್ಟಿ ಇಬ್ಬರಿಗೂ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.
ಯಾಸೀನ್ ಹಾಗೂ ಅನ್ಸಿ
ಸಂಜೆಯ ವಿಹಾರ ಮುಗಿಸಿ ರಾತ್ರಿ ಹತ್ತು ಗಂಟೆ ವೇಳೆಗೆ ಇಬ್ಬರು ಬೈಕಿನಲ್ಲಿ ಇಡ್ಯಾದ ಕಲ್ಯಾಣಿ ಪರ್ಲ್ ಅಪಾರ್ಟ್ ಮೆಂಟಿಗೆ ಆಗಮಿಸಿದ್ದರು
ಬೈಕ್ ಅಪಾರ್ಟ್ಮೆಂಟ್ ತಲುಪುತ್ತಿದ್ದಂತೆ ತಂಡವೊಂದು ತಡೆದು ನಿಲ್ಲಿಸಿದೆ. ಬಳಿಕ ಯುವಕನ ಹೆಸರನ್ನು ವಿಚಾರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ.
ಯುವತಿಯನ್ನು ಕೈಯಲ್ಲಿ ಹಿಡಿದು ನೆಲಕ್ಕೆ ದೂಡಿ ಹಾಕಿದ್ದು ನಿನಗೆ ಬ್ಯಾರಿಯೇ ಆಗಬೇಕಾ ಎಂದು ಪ್ರಶ್ನಿಸಿ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ದೂರು ದಾಖಲಿಸಿ ತನಿಖೆ ನಡೆಸಿದ ಸುರತ್ಕಲ್ ಠಾಣೆ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.

ಮುಸ್ಲಿಂ ಹುಡುಗನ ಜತೆಗಿದ್ದ ಯುವತಿ ಹಿಂದು ಎಂದು ಭಾವಿಸಿ ಸಂಘಟನೆಗೆ ಸೇರಿದ ಯುವಕರ ತಂಡ ನೈತಿಕ ಪೊಲೀಸ್ ಗಿರಿ ನಡೆಸಿದೆ ಎಂದು ಹೇಳಲಾಗುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ಜಿಲ್ಲೆಯಲ್ಲಿ ಎರಡು ಕೋಮಿಗೆ ಸೇರಿದ ಯುವಕರಿಂದ ಅವ್ಯಾಹತವಾಗಿ ಈ ರೀತಿಯ ಚಟುವಟಿಕೆಗಳು ಕಂಡು ಬಂದಿದೆ.
ಹಿಂದಿನಿಂದಲೂ ದ.ಕ ಜಿಲ್ಲೆಯಲ್ಲಿ ಈ ರೀತಿಯ ಚಟುವಟಿಕೆಗಳು ಪದೇ ಪದೆ ವರದಿಯಾಗುತಿತ್ತು. ಆದರೇ ಕೆಲ ತಿಂಗಳುಗಳಿಂದ ಈ ರೀತಿಯ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗಿರುವುದನ್ನು ಕಾಣಬಹುದಾಗಿದೆ.
ಪೊಲೀಸ್ ಇಲಾಖೆಗೂ ಇದೊಂದು ದೊಡ್ಡ ಸವಲಾಗಿದ್ದು , ಇದಕ್ಕೆ ಕಡಿವಾಣ ಹಾಕದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಜಲ್ಲೆಯ ಕಾನೂನು ಸುವ್ಯವಸ್ಥೆಗೆ ಇದು ಕೆಡುಕಾಗಿ ಪರಿಣಮಿಸುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ.
ತಿಂಗಳ ಹಿಂದೆ ಜಿಲ್ಲೆಗೆ ಭೇಟಿ ನೀಡಿದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೈತಿಕ ಪೊಲೀಸ್ ಗಿರಿಯನ್ನು ಕ್ರಿಯೆಗೆ ಪ್ರತಿಕ್ರಿಯೆ ಎನ್ನುವ ರೀತಿ ಸಮರ್ಥಿಸಿಕೊಂಡಿದ್ದರು. ಇದು ಸಾರ್ವಜನಿಕ ವಲಯದಲ್ಲಿ ಪರ – ವಿರೋಧದ ಚರ್ಚೆ ಹುಟ್ಟು ಹಾಕಿತ್ತು.