ಬೆಂಗಳೂರು: ನಮ್ಮ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಸುವಿನಂಥ ಮನುಷ್ಯ. ಅವರಿಗೆ ಭ್ರಷ್ಟಾಚಾರದ ಕಲ್ಪನೆಯೇ ಇಲ್ಲ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ಸೋಮವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಟೀಲ್ ಅವರದ್ದು ಸೌಮ್ಯ ಸ್ವಭಾವ. ಅವರು ಸಂಘಟನೆಯಲ್ಲೇ ತಮ್ಮನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ಬಲವಾಗಿ ಎಂ.ಪಿ.ರೇಣುಕಾಚಾರ್ಯ ಪ್ರತಿಪಾದಿಸಿದರು.
ಶ್ರೀಕಿ ತಂದೆಯಿಂದ ಕಾನೂನು ಹೋರಾಟ- ಹೊಟ್ಟೆ ತೊಳೆಸಿದ ಪೊಲೀಸರು
ಬಿಟ್‌ಕಾಯಿನ್ ಹಗರಣದ ಆರೋಪಿ ಶ್ರೀಕಿ (ಶ್ರೀಕೃಷ್ಣ)ಯನ್ನು ಪೊಲೀಸರು ಅಕ್ರಮವಾಗಿ ವಶದಲ್ಲಿಟ್ಟುಕೊಂಡಿದ್ದರು. ಆ ವೇಳೆ ಆತನಿಗೆ ಪೊಲೀಸರು ಡ್ರಗ್ಸ್ ನೀಡಿದ್ದಾರೆ ಎಂದು ಶ್ರೀಕಿ ತಂದೆ ಕೋರ್ಟಿಗೆ ರಿರ್ಟ್ ಅರ್ಜಿ ಸಲ್ಲಿಸಿದ್ದಾರೆ. ಪೊಲೀಸ್ ವಶದಲ್ಲಿ ಡ್ರಗ್ಸ್ ಸೇವಿಸಿದ್ದಾಗಿ ಶ್ರೀಕಿ ಜಡ್ಜ್ ಮುಂದೆಯೇ ಹೇಳಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ.
ಮಾದಕ ವಸ್ತು ಸೇವನೆ ಖಚಿತಪಡಿಸಿಕೊಳ್ಳಲು ಮೂತ್ರ ಮತ್ತು ರಕ್ಷ ಪರೀಕ್ಷೆ ನಡೆಸುವಂತೆ ನ್ಯಾಯಾಲಯ ಸೂಚಿಸಿದ್ದರೂ ಪೊಲೀಸರು ಶ್ರೀಕಿ ಹೊಟ್ಟೆ ತೊಳೆಸಿದ್ದಾರೆ. ಇದನ್ನೆಲ್ಲಾ ನೋಡಿದರೆ ಪೊಲೀಸರೇ ಆರೋಪಿಗೆ ಡ್ರಗ್ಸ್ ನೀಡಿ ಬಿಟ್ ಕಾಯಿನ್ ಲಪಟಾಯಿಸಿದರಾ ಎಂಬ ಅನುಮಾನ ಮೂಡುತ್ತದೆ ಎಂದು ಆರೋಪಿಸಿದ್ದಾರೆ.
ಆರೋಪಿಯ ಹೊಟ್ಟೆ ತೊಳೆಸಿದ್ದು ಏಕೆ? ಎಂದು ಪ್ರಶ್ನಿಸಿದರು. ಪೊಲೀಸರು ಅಂತಿಮವಾಗಿ ರಕ್ತ ಹಾಗೂ ಮೂತ್ರ ಪರೀಕ್ಷೆ ಮಾಡಿಸುವುದೇ ಇಲ್ಲ. ಇದೆಲ್ಲವನ್ನೂ ನೋಡಿದರೆ ಪೊಲೀಸರು ತಮ್ಮ ವಶದಲ್ಲಿದ್ದಾಗ ಡ್ರಗ್‌ಸ್ ನೀಡಿ ಬಿಟ್‌ಕಾಯಿನ್ ಹ್ಯಾಕ್ ಮಾಡಿಸಿದರಾ? ಎಂಬ ಅನುಮಾನ ಮೂಡುತ್ತದೆ.
ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಸರ್ಕಾರವೇ ಒದಗಿಸಬೇಕು ಎಂದು ಆಗ್ರಹಿಸಿದರು. ಇನ್ನು ಫೆ.12ರಂದು ಶ್ರೀಕಿ ತಂದೆ ಮತ್ತೊಂದು ರಿಟ್ ಸಲ್ಲಿಸಿ, ರಾಜ್ಯ ಸರ್ಕಾರದ ಸಂಸ್ಥೆಗಳ ಬಗ್ಗೆ ನಂಬಿಕೆ ಇಲ್ಲ ಎಂದಿದ್ದರು ಎಂದರು.
ಅಧಿಕಾರಿಗಳಿಂದಲೇ ನಮಗೆ ದಾಖಲೆ ಸಿಗುತ್ತವೆ : ಬಿಟ್ ಕಾಯಿನ್ ಪ್ರಕರಣ ಮುಚ್ಚಿ ಹಾಕಲು ಸರ್ಕಾರ ಯತ್ನಿಸುತ್ತಿದ್ದು ಅನುಕೂಲ ಆಗುವ ಅಂಶಗಳನ್ನು ಮಾತ್ರ ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತಿದೆ. ಇದು ಹೆಚ್ಚು ಕಾಲ ನಡೆಯುವುದಿಲ್ಲ. ನಾವು 100 ಪರ್ಸೆಂಟ್ ದಾಖಲೆ ಸಂಗ್ರಹಿಸುತ್ತಿದ್ದೇವೆ. ಸೂಕ್ತ ಸಮಯ ಬಂದಾಗ ಅದನ್ನು ಬಿಡುಗಡೆ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಅಲ್ಲದೆ, ಈ ಹಗರಣದ ಬಗ್ಗೆ ನಾವೇ ಹೋಗಿ ಯಾವುದೇ ದಾಖಲೆ ಹುಡುಕುತ್ತಿಲ್ಲ. ಸರಕಾರದ ಮಂತ್ರಿಗಳು, ಅಧಿಕಾರಿಗಳೇ ಒದಗಿಸುತ್ತಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ.