ಮಂಗಳೂರು, ನ.15: ಮೂರು ದಿನದ ಅಂತರದಲ್ಲಿ ಎರಡನೇ ಬಾರಿ ಮಂಗಳೂರು ನಗರದಲ್ಲಿ ಖಾಸಗಿ ಬಸ್ಸಿಗೆ ಕಲ್ಲು ಎಸೆದು ಗಾಜನ್ನು ಹಾನಿಗೊಳಿಸಿದ ಘಟನೆ ನಡೆದಿದೆ . ಸೋಮವಾರ ( ನ .15 ರಂದು ) ಮಧ್ಯಾಹ್ನ ಮಣಿಪಾಲ-ಉಡುಪಿಯಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಎಕ್ಸ್‌ಪ್ರೆಸ್ ಬಸ್ಸಿಗೆ ಕಿಡಿಗೇಡಿಗಳು ಕಲ್ಲೆಸೆದಿದ್ದಾರೆ
ಉಡುಪಿಯಿಂದ ಮಂಗಳೂರಿಗೆ ಬರುತ್ತಿದ್ದ ಎಕೆಎಂಎಸ್ ಎಕ್ಸ್‌ಪ್ರೆಸ್ ಬಸ್ ಕೋಡಿಕಲ್ ಕ್ರಾಸ್ ತಲುಪಿದಾಗ ದ್ವಿಚಕ್ರ ವಾಹನದಲ್ಲಿ ಬಂದ ಕಿಡಿಗೇಡಿಗಳು ಬಸ್ಸಿನ ಗಾಜಿಗೆ ಕಲ್ಲೆಸೆದು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಕಲ್ಲೆಸೆತದಿಂದ ಬಸ್ಸಿನ ಎರಡು ಕಡೆ ಗಾಜಿಗೆ ಹಾನಿಯಾಗಿದೆ.
ಟೈಮಿಂಗ್ ವಿಚಾರವಾಗಿ ಇನ್ನೊಂದು ಬಸ್ಸಿನ ನಿರ್ವಾಹಕ ಕಲ್ಲು ತೂರಾಟ ನಡೆಸಿರುವುದಾಗಿ ಎಕ್ಸ್‌ಪ್ರೆಸ್ ಬಸ್ ನ ನಿರ್ವಾಹಕ ದೂರು ನೀಡಿರುವುದಾಗಿ ತಿಳಿದು ಬಂದಿದೆ.

ಮೂರು ದಿನದ ಅಂತರದಲ್ಲಿ ಎರಡನೇ ಘಟನೆ :
ನ 13 ರಂದು ನಗರದ ಹೊರವಲಯದ ಬಂಗ್ರ ಕೂಳೂರು ಸಮೀಪದ ಕರಾವಳಿ ಕಾಲೇಜು ಬಳಿ ಕಾಟಿಪಳ್ಳ ಕೈಕಂಬ-ಮಂಗಳಾದೇವಿ ಮಧ್ಯೆ ಚಲಿಸುವ ರೂಟ್ ನಂಬ್ರ 15ಎ (ಎಸ್‌ಎಂ ಟ್ರಾವೆಲ್ಸ್) ಬಸ್ಸಿಗೆ ಕಲ್ಲೆ ಎಸೆಯಲಾಗಿತ್ತು.
ಈ ಎರಡೂ ಘಟನೆಯಲ್ಲೂ ದ್ವಿಚಕ್ರ ವಾಹನದಲ್ಲಿ ಬಂದವರೇ ಕಲ್ಲೆಸೆದು ಪರಾರರಿಯಾಗಿದ್ದರು ಮತ್ತು ಎರಡು ಸಂದರ್ಭವೂ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನದ ನಂಬರ್ ಪ್ಲೇಟ್ ಮಾಸಿ ಅದನ್ನು ಗುರುತು ಪತ್ತೆ ಹಚ್ಚುವುದು ಪ್ರತ್ಯಕ್ಷದರ್ಶಿಗಳಿಗೆ ಕಷ್ಟವಾಗಿತ್ತು.