ಮಂಗಳೂರು : ನ 15: ಗೊಂದಲ ಸೃಷ್ಟಿಯಾಗಿ, ಮಂಗಳೂರಿನಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದ್ದ ಮಗು ಅದಲು –ಬದಲು ಪ್ರಕರಣ ತಾರ್ಕಿಕ ಅಂತ್ಯ ಕಾಣುವ ಮೊದಲೇ ದುರಂತವೊಂದು ಸಂಭವಿಸಿದೆ. ಮಗುವಿನ ಡಿಎನ್ಎ ವರದಿ ಬರುವ ಮುಂಚೆಯೇ ಆ ಮಗು ಅಸ್ವಸ್ಥೆಯಿಂದ ಸಾವನ್ನಪ್ಪಿದೆ. ಜನಿಸಿದ ಕೇವಲ ಒಂದೂವರೆ ತಿಂಗಳಿನಲ್ಲಿಯೇ ಶಿಶುವಿನ ಬದುಕು ಕಮರಿ ಹೋಗಿದೆ.
ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬ್ರಹ್ಮಾವರದ ಮುಸ್ತಫಾ ಅವರ ಪತ್ನಿ ಅಮ್ರಿನಾ ಎಂಬುವರು ಸೆಪ್ಟಂಬರ್ 28ರಂದು ಮಗುವಿಗೆ ಜನ್ಮ ನೀಡಿದ್ದರು. ಈ ಮಗು ಅದಲು ಬದಲಾಗಿದೆ ಎಂದು ಮಹಿಳೆ ಹಾಗೂ ಆಕೆಯ ಪತಿ ಆರೋಪಿಸಿದ್ದರು. ಮಾತ್ರವಲ್ಲದೇ ಜಿಲ್ಲಾಡಳಿತ ಹಾಗೂ ಠಾಣೆಗೆ ಈ ಬಗ್ಗೆ ಲಿಖಿತ ದೂರು ನೀಡಿದ್ದರು .
ಅದಾದ ಬಳಿಕ ಮಗುವಿನ ಡಿಎನ್ ಎ ಪರೀಕ್ಷೆ ನಡೆಸಲು ನ್ಯಾಯಾಲಯದ ಅನುಮತಿ ಪಡೆದು ಮಗುವಿನ ಡಿಎನ್‌ಎ ಮಾದರಿಯನ್ನು ಪರೀಕ್ಷೆಗಾಗಿ ಹೈದರಾಬಾದ್ಗೆ ಕಳುಹಿಸಿಕೊಡಲಾಗಿತ್ತು. ಆದರೆ, ಡಿಎನ್ಎ ಪರೀಕ್ಷೆಯ ವರದಿ ಬರುವ ಮುನ್ನವೇ ಮಗು ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದೆ.
ಏನಿದು ಪ್ರಕರಣ :
ದೂರುದಾರ ಮಹಿಳೆಯೂ ಸೆ. 28 ರಂದು ಲೇಡಿಗೋಶನ್ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದು, ಆ ಸಂದರ್ಭ ವೈದ್ಯರು ಹೆಣ್ಣು ಮಗು ಎಂದು ತಿಳಿಸಿದ್ದರು ಎನ್ನಲಾಗಿದೆ. ಜನಿಸುವಾಗಲೇ ಮಗುವಿಗೆ ಉಸಿರಾಟ ತೊಂದರೆ ಕಾಣಿಸಿದ್ದು ,ಅದನ್ನು ಆಸ್ಪತ್ರೆಯಲ್ಲಿ ತೀವ್ರ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತಿತ್ತು.
15 ದಿನಗಳ ಬಳಿಕವೂ ಮಗುವಿಗೆ ಚಿಕಿತ್ಸೆ ಮುಂದುವರಿಸಿದ ಕಾರಣ ಪೋಷಕರು ಒತ್ತಾಯ ಮಾಡಿ ಮಗುವನ್ನು ತೆಗೆದುಕೊಂಡು ಉಡುಪಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ದಾಖಲಾತಿಯ ಸಂದರ್ಭ ಪರಿಶೀಲಿಸಿದಾಗ ಅದು ಗಂಡು ಮಗು ಎಂದು ತಿಳಿದು ಬಂದಿದೆ ನೀಡಲಾಗಿತ್ತು.

ಹೀಗಾಗಿ ಕುಂದಾಪುರದ ಮಹಿಳೆ ಮತ್ತು ಆಕೆಯ ಪತಿ ಈ ಬಗ್ಗೆ ಲೇಡಿಗೋಶನ್ ಆಸ್ಪತ್ರೆಯ ವೈದ್ಯರ ಗಮನಕ್ಕೆ ತಂದಿದ್ದೂ ಮಗು ಅದಲು ಬದಲಾಗಿದೆ ಎಂದು ಆರೋಪಿಸಿದ್ದರು. ಆದರೆ ವೈದ್ಯರು ಈ ವಾದವನ್ನು ಒಪ್ಪದೆ ನಿಮಗೆ ಗಂಡು ಮಗುವೇ ಜನಿಸಿದೆ. ದಾಖಲೆಯಲ್ಲಿ ಹೆಣ್ಣು ಎಂದು ತಪ್ಪಾಗಿ ನಮೂದಿಸಲಾಗಿದೆ ಎಂದು ತಿಳಿಸಿದ್ದರು
ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಪೋಷಕರು ಹೆಣ್ಣು ಮಗುವನ್ನೇ ನೀಡಲು ಆಗ್ರಹಿಸಿದ್ದರು. ಅಲ್ಲದೇ, ಈ ಬಗ್ಗೆ ಮಂಗಳೂರಿನ ಬಂದರ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಗುವಿನ ಪೋಷಕರ ದೂರಿನ ಹಿನ್ನೆಲೆಯಲ್ಲಿ ನ್ಯಾಯಾಲಯದ ಅನುಮತಿ ಪಡೆದು ಮಗುವಿನ ಡಿ ಎನ್ ಏ ಪರೀಕ್ಷೆ ನಡಸಲು ಸ್ಯಾಂಪಲ್ ಸಂಗ್ರಹಿಸಿ ಲ್ಯಾಬ್ ಗೆ ಕಳುಹಿಸಲಾಗಿತ್ತು.
ಮಗುವಿನ ಪೋಷಕರು ಡಿ ಎನ್ ಏ ವರದಿಯ ನಿರೀಕ್ಷೆಯಲ್ಲಿರುವಾಗಲೇ ಗಂಡು ಮಗು ಉಸಿರಾಟದ ತೊಂದರೆಯಿಂದೆ ಅಸುನೀಗಿದೆ. ಇನ್ನು ಮಗುವಿನ ಡಿಎನ್ ಎ ವರದಿ ಬಂದ ಬಳಿಕ ಆ ವರದಿಯನ್ನಾಧರಿಸಿ ಠಾಣೆಯಲ್ಲಿ ದಾಖಲಾದ ಪ್ರಕರಣದ ತನಿಖೆ ಮುಂದುವರಿಯುವ ಸಾಧ್ಯತೆ ಇದೆ