ಬೆಂಗಳೂರು: ಖ್ಯಾತ ಸಂಗೀತ ನಿರ್ದೇಶಕ, ಸಿನಿಮಾ ಸಾಹಿತಿ ನಾದ ಬ್ರಹ್ಮ ಹಂಸಲೇಖ ಅವರು ಪೇಜಾವರ ಶ್ರೀಗಳ ದಲಿತ ಮನೆಗಳ ಭೇಟಿ ಹಾಗೂ ಅಸ್ಪೃಶ್ಯತೆ ಕುರಿತಾಗಿ ಭಾಷಣವೊಂದರಲ್ಲಿ ಆಡಿದ ಮಾತುಗಳು ಭಾರೀ ವಿವಾದಕ್ಕೆ ಕಾರಣವಾಗಿದೆ.
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ, ತೀವ್ರ ಟೀಕೆಗೂ ಗುರಿಯಾಗಿದೆ. ಈಗಿನ ಪೇಜಾವರ ಶ್ರೀಗಳಾದ ವಿಶ್ವಪ್ರಸನ್ನ ಶ್ರೀಗಳು ತಮ್ಮ ಗುರುಗಳ ಬಗ್ಗೆ ಹಂಸಲೇಖ ಆಡಿದ ಮಾತಿಗೆ ಅಸಮಾಧನ ವ್ಯಕ್ತಪಡಿಸಿದ್ದರು.
ಹೇಳಿಕೆ ವಿವಾದದ ಸ್ಚರೂಪ ಪಡೆಯುತ್ತಲೇ ಡಾ.ಹಂಸಲೇಖ ಅವರು ಕ್ಷಮೆಯಾಚಿಸಿದ್ದಾರೆ. ಫೇಸ್ಬುಕ್ ವಿಡಿಯೋ ಮೂಲಕ ಹಂಸಲೇಖ ಅವರು ಕ್ಷಮೆಯಾಚನೆ ಮಾಡಿ ವಿವಾದ ಶಮನಕ್ಕೆ ಮುಂದಾಗಿದ್ದಾರೆ. ಇಡೀ ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ
ಹಂಸಲೇಖ ವಿವಾದಾತ್ಮಕ ಹೇಳಿಕೆಯೇನು?
ಮೈಸೂರಿನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಹಂಸಲೇಖ ಅವರು, “ಪೇಜಾವರ ಸ್ವಾಮಿಗಳು ದಲಿತರ ಮನೆಗೆ ವಾಸ್ತವ್ಯಕ್ಕೆ ಹೋಗಿದ್ದಾರೆ ಅಂತ ಸ್ಟೇಟ್ಮೆಂಟ್ ಬಂದಿದೆ. ಪೇಜಾವರ ಸ್ವಾಮಿಗಳು ದಲಿತರ ಮನೆಗೆ ಹೋಗಿ ಅಲ್ಲಿ ಕುಳಿತು ಕೊಳ್ಳಬಹುದಷ್ಟೇ, ಅವರು ಕೋಳಿ ಕೊಟ್ಟರೆ ತಿನ್ನೋಕೆ ಆಗುತ್ತದೆಯೇ? ಕೋಳಿ ಬೇಡ, ಕುರಿ ರಕ್ತದ ಫ್ರೈ ಮಾಡಿಕೊಟ್ಟರೆ ತಿಂತಾರಾ? ಲಿವರ್ ಫ್ರೈ ತಿಂತಾರಾ, ಆಗತ್ತಾ? ಅಂದರೆ, ದಲಿತರ ಮನೆಗೆ ಬಲಿತರು ಹೋಗೋದು ಏನ್ ದೊಡ್ಡ ವಿಷ್ಯಾ ಅಂತ ನಂಗ್ ಅನ್ನಿಸ್ತು ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಅಂತ ಶುರು ಮಾಡಿದ್ರು. ಈಗ ಎಲ್ಲರೂ ಗ್ರಾಮ ವಾಸ್ತವ್ಯ ಶುರು ಮಾಡಿದ್ದಾರೆ” ಎಂದು ಹೇಳಿದ್ದರು.

ವಿಶ್ವಪ್ರಸನ್ನ ಶ್ರೀಗಳು ಹೇಳಿದ್ದೇನು ?
ಗುರುಗಳು ಎಲ್ಲರ ಹೃದಯದಲ್ಲಿ ಕೃಷ್ಣನನ್ನು ಕಂಡವರು. ಆದ್ದರಿಂದ ಅವರು ದಲಿತರ ಕೇರಿಗೂ ಹೋಗುತ್ತಿದ್ದರು. ಸಮಾಜದ ಎಲ್ಲರ ಉದ್ದಾರವನ್ನು ವಿಶ್ವೇಶ್ವರ ತೀರ್ಥರು ಬಯಸಿದ್ದರು. ನಮ್ಮ ಉದ್ದೇಶ ಪ್ರಾಮಾಣಿಕವಾಗಿದ್ದರೆ ಸಾಕು. ಯಾರೋ ಏನೋ ಅಂದ ಮಾತ್ರಕ್ಕೆ ನಮ್ಮ ಕೆಲಸ ನಿಲ್ಲುವುದಿಲ್ಲ”
ಇನ್ನು ಶ್ರೀಕೃಷ್ಣನಿಗೆ ಅಗ್ರ ಪೂಜೆ ನೀಡುವಾಗ ಶಿಶುಪಾಲ ವಿರೋಧಿಸಿದ್ದ. ಆ ಕೃಷ್ಣನೇ ಬೇಕಾದ ಪ್ರತೀಕಾರ ಮಾಡುತ್ತಾನೆ. ಶಿಶುಪಾಲನಿಗೆ ಕೃಷ್ಣನೇ ತಕ್ಕಶಾಸ್ತಿ ಮಾಡಿದ್ದ.ಯಾರ ಹೊಗಳಿಕೆಗಾಗಿ ನಾವು ಈ ಕೆಲಸ ಮಾಡಿದ್ದಲ್ಲ. ಐಕ್ಯ ಸಂದೇಶ ನೀಡುವುದಕ್ಕಾಗಿ ನಮ್ಮ ಕಾರ್ಯಕ್ರಮಗಳು ನಡೆಯುತ್ತವೆ”
“ಆಹಾರ ನಿಯಮದಲ್ಲಿ ಎಲ್ಲರಿಗು ಸ್ವಾತಂತ್ರ್ಯವಿದೆ. ಒಬ್ಬರ ಆಹಾರ ನಿಯಮವನ್ನು ಮತ್ತೊಬ್ಬರ ಮೇಲೆ ಹೇರೋದು ಅದು ಯಾರು ಯಾರ ಮೇಲೆ ಮಾಡಬಾರದು. ಒಬ್ಬರಂತೆ ಇನ್ನೊಬ್ಬರು ಅಂತಹದ್ದೇ ಆಹಾರ ತಿಂದರೆ ಉದ್ಧಾರ ಆಗುತ್ತೆ ಅನ್ನೋದು ತಪ್ಪು .
ಹಂಸಲೇಖ ರವರು ಗಣ್ಯ ವ್ಯಕ್ತಿ. ಅವರು ಈ ರೀತಿ ಮಾತನಾಡಬಾರದೀತು .ಇದು ಅವರ ಸಣ್ಣತನವನ್ನು ಜಗತ್ತಿನ ಮುಂದೆ ತೋರಿಸಿದೆ . ಇಂತಹದ್ದು ನಡಿಬಾರದಿತ್ತು” ಎಂದು ವಿಶ್ವಪ್ರಸನ್ನ ಶ್ರೀಗಳು ಹೇಳಿದ್ದಾರೆ.
ಹಂಸಲೇಖ ಕ್ಷಮಯಾಚನೆಯಲ್ಲಿ ಹೇಳಿದ್ದೇನು?
, “ಮೊದಲಿಗೆ ಕ್ಷಮೆ ಇರಲಿ. ಎರಡನೆಯದಾಗಿಯೂ ಕ್ಷಮೆ ಇರಲಿ. ನನಗೆ ಗೊತ್ತಿದೆ ಎಲ್ಲಾ ಮಾತುಗಳು ವೇದಿಕೆಗೆ ಅಲ್ಲ. ಅದು ತಪ್ಪು. ಅಲ್ಲಿ ಒಂದು ಪ್ರಶಸ್ತಿ ಪುರಸ್ಕಾರ ಸಭೆ ಅದು. ಅಲ್ಲಿ ನುಡಿದರೆ ಮುತ್ತಿನ ಹಾರದಂತೆ ಇರಬೇಕು ಅನ್ನೋ ರೀತಿಯಲ್ಲಿ ಇರಬೇಕಿತ್ತು. ನಾನು ಹಾಗೆಯೇ ಅಲಂಕರಿಸಬೇಕಿತ್ತು”.
“ತಪ್ಪು. ಅಸ್ಪೃಶ್ಯತೆ, ಇದು ನಮ್ಮ ದೇಶಕ್ಕೆ ಅಂಟಿದ ಶಾಪ. ಇದು ನನ್ನ ಮಾತಲ್ಲ, ಜಿ.ಕೃಷ್ಣಮೂರ್ತಿಗಳ ಸ್ಟೇಟ್ಮೆಂಟ್. ನಾನು ಒಬ್ಬ ಸಂಗೀತಗಾರ. ನಮಗ್ಯಾಕೆ ಟ್ರೋಲು, ಕಂಟ್ರೋಲ್ ಆಗಿರುವುದು ನಮ್ಮ ಕೆಲಸ.”
“ನನಗೆ ಯಾರಿಗೂ ನೋವು ಕೊಡಲು ಇಷ್ಟವಿಲ್ಲ. ನನ್ನ ಸಂಗೀತದಂತೆ ನನ್ನ ಮಾತು, ಬದುಕು ಕೂಡ ಎಲ್ಲರಿಗೂ ಸುಖ ಕೊಡಬೇಕು. ಆದರೆ, ಎಲ್ಲಾ ಅನಿಷ್ಠಗಳನ್ನು ತೊಡೆದು ಹಾಕುವ ದಿಸೆಯಲ್ಲಿ ನನ್ನ ಪಾತ್ರವೂ ಯಾವುದೇ ಮೂಲಕ ಇದ್ದರೆ ಅದನ್ನು ನಾನು ಮಾಡಿಯೇ ಮಾಡುತ್ತೇನೆ” ಎಂದು ಹಂಸಲೇಖ ಹೇಳಿದ್ದಾರೆ.