ನ :14 : ಕಳೆದ 15 ದಿನಗಳ ಅಂತರದಲ್ಲಿ ಟೊಮೇಟೊಗೆ ಬೆಲೆ ಗಗನಕ್ಕೆರಿದೆ. ಈ ತಿಂಗಳ ಆರಂಭದಲ್ಲಿದ್ದ ಬೆಲೆಯ ಮೂರರಿಂದ ಮೂರುವರೆ ಪಟ್ಟು ಬೆಲೆಯೆರಿಕೆಯಾಗಿದ್ದು ಬಳಕೆದಾರ ಕಂಗಲಾಗಿದ್ದಾನೆ . ನವೆಂಬರ್ ತಿಂಗಳ ಪ್ರಾರಂಭದಲ್ಲಿ ಪ್ರತಿ ಕೆಜಿ ಟೊಮೇಟೊಗೆ 15ರಿಂದ 20ರಷ್ಟಿತ್ತು. ಕಳೆದ ಒಂದು ವಾರದಲ್ಲಿ ಈ ದರ 60-70ಕ್ಕೆ ಹೆಚ್ಚಳವಾಗಿದೆ.
ಈ ಪಾಟಿ ಬೆಲೆಯೆರಿಕೆಯಿಂದ ರೈತನಿಗಾದರೂ ಸಂತೋಷವಾಗಿದೆಯೇ ಎಂದರೆ ಅದು ಕೂಡ ಇಲ್ಲ . ರಾಜ್ಯದಲ್ಲಿ ಟೊಮೇಟೊ ಬೆಳೆಯುವ ಪ್ರದೇಶಗಳಲ್ಲಿ ಬೀಳುತ್ತಿರುವ ಅಕಾಲಿಕ ಮಳೆ , ವಾತಾವರಣದಲ್ಲಿನ ತಾಪಮಾನದಲ್ಲಿ ಉಂಟಾಗಿರುವ ವೈಪರೀತ್ಯ ಹಾಗೂ ಬೆಳೆಗೆ ಕಾಡುತ್ತಿರುವ ರೋಗಗಳಿಂದ ಅಪಾರ ಪ್ರಮಾಣದ ಬೆಳೆ ನಷ್ಟವಾಗಿರುವುದೇ ಈ ರೀತಿ ಬೆಲೆಯೆರಿಕೆಗೆ ಕಾರಣವಾಗಿದೆ
ರಾಜ್ಯದಲ್ಲಿ ಅತಿ ಹೆಚ್ಚು ಟೊಮೇಟೊ ಬೆಳೆಯುವ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಜತೆಗೆ, ವಾತಾವರಣದಲ್ಲಿನ ತಾಪಮಾನ ಕಡಿಮೆಯಾಗಿದೆ. ಇದರಿಂದ ಟೊಮೇಟೊ ಬೆಳೆಗೆ ಹೊಡೆತ ಬಿದ್ದಿದೆ.

ಕೆಲ ತೋಟಗಳಲ್ಲಿ ನೀರು ನಿಂತಿದ್ದು, ಹೆಚ್ಚಿನ ಪ್ರಮಾಣದ ಬೆಳೆ ನಾಶವಾಗಿದೆ. ಅಲ್ಲದೆ ಮಹಾರಾಷ್ಟ್ರದಿಂದಲೂ ಟೊಮೇಟೊ ಬೆಂಗಳೂರಿಗೆ ಸರಬರಾಜಿನ ಪ್ರಮಾಣ ಕಡಿಮೆಯಿದೆ. ಇದರಿಂದಾಗಿ ಒಂದು ಚೀಲ ಟೊಮೇಟೊದ ಬೆಲೆ 900ರಿಂದ 1000 ರೂ.ವರೆಗೂ ಏರಿಕೆ ಕಾಣುತ್ತಿದೆ.
ಕೆಲವೆಡೆ ಟೊಮೇಟೊ ಬೆಳೆಗೆ ಅಂಗಮಾರಿ ರೋಗ ಕಾಣಿಸಿಕೊಂಡಿದೆ. ಕೆಲವು ಕಡೆ ಟೊಮೇಟೊ ಬೆಳೆ ಸೊಂಪಾಗಿ ಬೆಳೆದು ಕೊಯ್ಲು ಆರಂಭವಾಗಿದೆ. ಅಂಗ ಮಾರಿ ರೋಗಬಾಧೆ ಗಿಡದ ಎಲೆಗಳು ಕಂದು ಮತ್ತು ಕಪ್ಪು ಬಣ್ಣಕ್ಕೆ ತಿರುಗಿ ಒಣಗುತ್ತಿವೆ.ರಾತ್ರೋರಾತ್ರಿ ಬೆಳೆ ನಾಶವಾಗುತ್ತಿದೆ. ಕಾಯಿಗಳು ಬಲಿತು ಹಣ್ಣಾಗುವುದಕ್ಕೂ ಮುನ್ನವೇ ಗಿಡದಿಂದ ಉದುರುತ್ತಿವೆ. ಜತೆಗೆ ಮಳೆ ಹೆಚ್ಚಿ ಹೊಲಗಳಲ್ಲಿ ಕೊಳೆತು ಬೆಳೆಯ ಪ್ರಮಾಣ ಕುಸಿತ ಕಂಡಿದೆ.
ಕಾರ್ತಿಕ ಮಾಸದ ಸಮಯದಲ್ಲಿ ಟೊಮೇಟೊ ಸೇರಿ ಇತರೆ ತರಕಾರಿಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿತ್ತು. ಆದರೆ ಕಳೆದೆರಡು ಮೂರು ದಿನಗಳಿಂದ ವ್ಯಾಪಕ ಮಳೆಯ ಪರಿಣಾಮವಾಗಿ ಟೊಮೇಟೊ ಫಸಲು ಇಳಿಕೆ ಕಾಣುವ ಜತೆಗೆ ಗುಣಮಟ್ಟದಲ್ಲೂ ಕುಸಿತ ಕಂಡಿದೆ. ಇದರಿಂದ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಟೊಮೇಟೊಗೆ ಹುಡುಕಾಡುವಂತಾಗಿದೆ.
ಟೊಮೇಟೊ ಬೆಲೆ ಏರಿಕೆ ಜತೆಗೆ ಬಹುತೇಕ ಎಲ್ಲಾ ತರಕಾರಿಗಳು ದುಬಾರಿಯಾಗಿವೆ. ಬೀನ್ಸ್ ಬೆಲೆ 60 ದಾಟಿದೆ. ಬದನೆಯಕಾಯಿ 40 ರೂ. ಇದೆ. ಈರುಳ್ಳಿ ದರವೂ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. 30 ರೂ.ವರೆಗೂ ಏರಿಕೆ ಕಂಡಿದೆ. ಮಳೆ ಇನ್ನಷ್ಟು ದಿನ ಮುಂದುವರೆದರೆ ತರಕಾರಿಗಳು ಮತ್ತಷ್ಟು ಕೈಸುಡಲಿದೆ.
ಕೊರೊನಾ ಹಾಗೂ ಲಾಕ್ ಡೌನ್ ನಿಂದಾಗಿ ಮೊದಲೇ ಅರ್ಥಿಕ ಸಂಕಷ್ಟದಲ್ಲಿರುವ ಈ ಗ್ರಾಹಕನಿಗೆ ಇದೀಗ ತರಕಾರಿಯ ವಿಪರೀತ ಬೆಲೆಯೆರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ