ತೀರ್ಥಹಳ್ಳಿ: ಬೈಕ್ ಅಪಘಾತವಾಗಿ ಕಾಡಿನ ಮಧ್ಯೆ ಬಿದ್ದಿದ್ದ ಇಬ್ಬರು ಗಾಯಾಳುಗಳನ್ನು ಗೃಹ ಸಚಿವ ಅರಗ ಜ್ಞಾನೇಂದ್ರರವರು ಉಪಚರಿಸಿ, ತಮ್ಮ ಎಸ್ಕಾರ್ಟ್ ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸುವ ಮೂಲಕ ಮಾನವೀಯತೆ ಮೆರೆದಿದ್ದು ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗೃಹ ಸಚಿವ ಅರಗ ಜ್ಞಾನೇಂದ್ರರವರು ತಮ್ಮ ಎರಡು ಎಸ್ಕಾರ್ಟ್ ವಾಹನದ ಜತೆಗೆ ತೀರ್ಥಹಳ್ಳಿ ಯಿಂದ ಶಿವಮೊಗ್ಗ ನಗರಕ್ಕೆ ಬರುತ್ತಿರುವಾಗ ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ಕಾಡಿನಲ್ಲಿ ಹಾದು ಹೋಗುವ ರಸ್ತೆ ಮಾರ್ಗ ಮಧ್ಯೆ ಇಬ್ಬರು ಬಿದ್ದು ಹೊರಳಾಡುತಿದ್ದರು.
ಇದನ್ನು ಗಮನಿಸಿದ ಸಚಿವರು ಕಾರು ನಿಲ್ಲಿಸಲು ತನ್ನ ಚಾಲಕನಿಗೆ ಸೂಚಿಸಿ ಕಾರಿನಿಂದ ಇಳಿದಿದ್ದಾರೆ. ಈ ಸಮಯ ಆ ಇಬ್ಬರು ಬೈಕ್ ಅಪಘಾತವಾಗಿ ಗಂಭೀರವಾಗಿ ಗಾಯಗೊಂಡಿರುವುದು ಸಚಿವರ ಗಮನಕ್ಕೆ ಬಂದಿದೆ. ತಕ್ಷಣವೇ ಅವರಿಗೆ ನೀರು ನೀಡಿ ಒಂದಷ್ಟು ಪ್ರಾಥಮಿಕ ನೆರವು ನೀಡಿ ಬಳಿಕ ತಮ್ಮ ಎಸ್ಕಾರ್ಟ್ ವಾಹನದಲ್ಲಿ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳಿಸಿಕೊಟ್ಟಿದ್ದಾರೆ.

ಸಚಿವರ ಮೂಲಕ ಗಾಯಾಳುಗಳಿಗೆ ಕೂಡಲೇ ಚಿಕಿತ್ಸೆ ಲಭಿಸಿದ್ದರಿಂದ ಸದ್ಯ ಅವರಿಬ್ಬರು ಚೇತರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ .ಸಚಿವರಾಗಿ ಕೆಲಸದ ಒತ್ತಡದಲ್ಲಿದ್ದರೂ ಅದನ್ನು ಲೆಕ್ಕಿಸದೇ ಸಾಮಾನ್ಯ ನಾಗರೀಕನಂತೆ ಗಾಯಾಳುಗಳಿಗೆ ನೆರವಾದ ಅವರ ಮಾನವೀಯತೆ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಶ್ಲ್ಯಾಘನೆ ವ್ಯಕ್ತವಾಗಿದೆ.
ಅರಗ ಜ್ಞಾನೇಂದ್ರರವರು ಶಾಸಕರಾಗಿದ್ದ ಅವಧಿಯಲ್ಲೂ ಇದೇ ರೀತಿ ಹಲವು ಬಾರಿ ರಸ್ತೆ ಅಪಘಾತಕ್ಕೆ ಒಳಗಾಗಿ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆಯನ್ನು ಪ್ರದರ್ಶಿಸಿದ್ದಾರೆ. ಹಣಗೆರೆಕಟ್ಟೆ, ಬಳಗಟ್ಟೆಯಲ್ಲೂ ಈ ಹಿಂದೆ ಅನೇಕರನ್ನು ತಮ್ಮ ವಾಹನದಲ್ಲೇ ಆಸ್ಪತ್ರೆಗೆ ಕಳುಹಿಸಿ ಮಾದರಿಯಾಗಿದ್ದರು.