ಮಂಗಳೂರು : 13 : ಆನೆ, ಚಿರತೆ, ಹಂದಿ, ಜಿಂಕೆ, ಕಡವೆ ಮತ್ತಿತರ ಕಾಡುಪ್ರಾಣಿಗಳು ನಾಡಿಗೆ ಲಗ್ಗೆಯಿಡುವುದು ಸಾಮಾನ್ಯ. ಆದರೆ ಇದೆ ಮೊದಲ ಬಾರಿಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾಡು ಪ್ರಾಣಿಯೊಂದು ಲಗ್ಗೆ ಇಟ್ಟಿದೆ. ಶುಕ್ರವಾರ ರಾತ್ರಿ ವೇಳೆ ರನ್‌ವೇ ಮೇಲೆ 3-4 ಚಿರತೆಗಳು ಕಂಡು ಬಂದಿದೆ. ಇದೀಗ ಇದು ವಿಮಾನ ನಿಲ್ದಾಣ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಪೀಕಲಾಟ ತಂದಿಕ್ಕಿದೆ.
ಬಜ್ಪೆಯ ಕೆಂಜಾರಿನಲ್ಲಿ ಗುಡ್ಡದ ಮೇಲಿರುವ ವಿಮಾನ ನಿಲ್ದಾಣದ ಸುತ್ತಮುತ್ತ ಕಾಡುಗಳಲ್ಲಿರುವ ಚಿರತೆಗಳ ಓಡಾಟ ಸಾಮಾನ್ಯವಾಗಿತ್ತು. ಆದರೆ ಆರೇಳು ತಿಂಗಳುಗಳಿಂದ ರಾತ್ರಿ ಹೊತ್ತು ವಿಮಾನ ನಿಲ್ದಾಣ ಪ್ರವೇಶಿಸುತ್ತಿವೆ. ಆರಂಭದಲ್ಲಿ ಒಂದು ಚಿರತೆ ರನ್‌ವೇ ಮೇಲೆ, ರನ್‌ವೇ ಸುತ್ತ ಕಾಣಿಸಿಕೊಂಡಿತ್ತು. ಆಹಾರ ಅರಸಿ ಆಕಸ್ಮಿಕವಾಗಿ ಬಂದಿರಬಹುದು ಎಂದು ಆಗ ಅದನ್ನು ಅಧಿಕಾರಿಗಳು ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, 2-3 ತಿಂಗಳುಗಳಿಂದ ಚಿರತೆಗಳ ಸಂಖ್ಯೆ ಮೂರ್ನಾಲ್ಕಕ್ಕೆ ಏರಿಕೆಯಾಗಿದೆ. ವಿಮಾನ ಲ್ಯಾಂಡಿಂಗ್ ಅಥವಾ ಟೇಕ್‌ಆಫ್ ಸಂದರ್ಭ ರನ್‌ವೇ ಆಸುಪಾಸು ಪ್ರಾಣಿಗಳ ಓಡಾಟ ತೀರಾ ಅಪಾಯಕಾರಿಯಾದ ಹಿನ್ನೆಲೆಯಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
ಚಿರತೆಗಳಿಂದ ಭಯಗೊಂಡಿರುವ ಮಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು, ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ಅಧಿಕಾರಿಗಳು ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯೂ ಚುರುಕಾಗಿದ್ದು, ಚಿರತೆ ಪತ್ತೆ ಕಾರ್ಯಾಚರಣೆ ಆರಂಭಿಸಿದೆ. ಚಿರತೆ ಸೆರೆ ಹಿಡಿಯಲು ವಿಮಾನ ನಿಲ್ದಾಣದ ಒಳಗೆ 3 ಬೋನುಗಳನ್ನು ಇಡಲಾಗಿದೆ. ಸುತ್ತಲಿನ ಅರಣ್ಯ ಪ್ರದೇಶದಲ್ಲೂ 2 ಬೋನು ಇಡಲಾಗಿದೆ. ಒಟ್ಟು 5 ಬೋನುಗಳನ್ನು ಅಳವಡಿಸಲಾಗಿದ್ದು, ಇದುವರೆಗೆ ಚಿರತೆ ಸೆರೆಯಾಗಿಲ್ಲ.

.