ಸುಬ್ರಹ್ಮಣ್ಯ, ನ.13: ಸಮಾಜಮುಖಿ ಕಾರ್ಯಗಳಿಂದ ಈಗಾಗಲೇ ರಾಜ್ಯದ ಮೂಲೆ ಮೂಲೆಗಳಲ್ಲಿ ಮನೆಮಾತಾಗಿರುವ ಯುವ ತೇಜಸ್ಸು ಟ್ರಸ್ಟ್ ಇದೀಗ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆಗೆ ನಿರ್ಧರಿಸಿದೆ.
ಕುಕ್ಕೆ ಸುಬ್ರಹ್ಮಣ್ಯದ ಸುತ್ತಮುತ್ತಲಿನ ನಾಲ್ಕೈದು ಗ್ರಾಮಗಳಿಗೆ ಈವರೆಗೂ ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ ಸೇವೆಗೆ ಸುಳ್ಯ ಅಥವಾ ಪಂಜವನ್ನು ಆಶ್ರಯಿಸಬೇಕಾಗಿದೆ. ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಒಂದು ಮಹತ್ವಾಕಾಂಕ್ಷೀ ಯೋಜನೆಯನ್ನು ಯುವ ತೇಜಸ್ಸು ಹಮ್ಮಿಕೊಂಡಿದೆ.
ಕುಕ್ಕೆ ಸುಬ್ರಹ್ಮಣ್ಯದಲ್ಲೇ ಒಂದು ಆಂಬ್ಯುಲೆನ್ಸ್ ಅನ್ನು ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದು, ನವೆಂಬರ್ ತಿಂಗಳ 11ನೇ ತಾರೀಕು ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಇದೇ ಸಂದರ್ಭ ಶ್ರೀಮತಿ ವಿಮಲಾ ರಂಗಯ್ಯ ಹಾಗೂ ರಂಗಯ್ಯ ಶೆಟ್ಟಿಗಾರ್ ಎಂಬ ಕುಕ್ಕೆಸುಬ್ರಹ್ಮಣ್ಯದ ದಾನಿಗಳು ₹.20,000 ಧನಸಹಾಯವನ್ನು ಸೇವಾಕಾರ್ಯದ ಮೊದಲ ವ್ಯಕ್ತಿಯಾಗಿ ನೀಡಿರುತ್ತಾರೆ. ಅಲ್ಲದೆ ಒಂದೇ ದಿನದಲ್ಲಿ ಸುಮಾರು 2 ಲಕ್ಷದಷ್ಟು ಮೊತ್ತ ಸಂಗ್ರಹವಾಗಿದೆ. ದಾನಿಗಳಿಂದ ಇನ್ನಷ್ಟು ಧನ ಸಹಾಯವನ್ನು ಯುವ ತೇಜಸ್ಸು ಟ್ರಸ್ಟ್ ಅಪೇಕ್ಷಿದ್ದು ದಾನಿಗಳು ಸಹಕರಿಸುವ ಭರವಸೆಯಿದೆ ಎಂದು ಟ್ರಸ್ಟ್ ತಿಳಿಸಿದೆ.
ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸುವ ಭಕ್ತಾದಿಗಳಿಗೆ ಹಾಗೂ ಯಾತ್ರಾತಿಕರಿಗೆ ಹಲವಾರು ಬಾರಿ ತೊಂದರೆಗಳಾದ ಸಂದರ್ಭ ತಕ್ಷಣಕ್ಕೆ ಅಂಬ್ಯುಲೆನ್ಸ್ ಸಿಗದೆ ಕಷ್ಟಕ್ಕೀಡಾದ ಉದಾಹರಣೆ ನಮ್ಮ ಕಣ್ಣೆದುರು ಇರುವುದರಿಂದ ಆ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಈ ಒಂದು ಯೋಚನೆ ಹಾಗೂ ಯೋಜನೆಯನ್ನು ಯುವ ತೇಜಸ್ಸು ಟ್ರಸ್ಟ್ ನ ಸುಬ್ರಹ್ಮಣ್ಯ ಬಳಗವು ಕೈಗೊಂಡಿದ್ದು ಈವರೆಗೂ ಟ್ರಸ್ಟ್ ನ ಪ್ರತಿ ಯೋಜನೆಗೂ ಸಹಕಾರ ನೀಡಿದ ದಾನಿಗಳು ಈ ಒಂದು ಮಹತ್ವಾಕಾಂಕ್ಷಿ ಯೋಜನೆಗೂ ತಮ್ಮ ಅಮೂಲ್ಯ ಸೇವೆಯನ್ನು ನೀಡಿ ಈ ಒಂದು ಯೋಜನೆಯನ್ನು ಯಶಸ್ವಿಯಾಗಿಸಬೇಕೆಂದು
ಯುವ ತೇಜಸ್ಸು ಟ್ರಸ್ಟ್®️ ದಾನಿಗಳನ್ನು ವಿನಂತಿಸಿದೆ.