ಸಾಗರ: ರಸ್ತೆ ಅಪಘಾತವೊಂದರಲ್ಲಿ ಬಾಲಕನೊಬ್ಬ ಗಾಯಾಳುವಾದ ಪ್ರಕರಣದಲ್ಲಿ ಹೇಳಿಕೆ ಪಡೆದ ಪೊಲೀಸರು ದೂರು ದಾಖಲಿಸದ ಹಿನ್ನೆಲೆಯಲ್ಲಿ ಸುಮಾರು 9 ವರ್ಷಗಳ ನಂತರ ಗಾಯಾಳು ಬಾಲಕನ ತಂದೆ ನ್ಯಾಯಾಲಯದ ಸಹಾಯದಿಂದ ಆರೋಪಿಗಳ ವಿರುದ್ಧ ವೈಯಕ್ತಿಕವಾಗಿ ದೂರು ದಾಖಲಿಸಿದ ಪ್ರಕರಣ ಸಾಗರದಲ್ಲಿ ನಡೆದಿದೆ.
ತಾಲೂಕಿನ ಆನಂದಪುರದ ಮುಖ್ಯ ರಸ್ತೆಯಲ್ಲಿ 2012ರ ಮೇ 22 ರಂದು ತನ್ನ ಅಜ್ಜ ಚೌಡಪ್ಪ ಅವರೊಂದಿಗೆ ನಾಲ್ಕು ವರ್ಷದ ಬಾಲಕ ದರ್ಶನ್ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಕಾರೊಂದು ಡಿಕ್ಕಿ ಹೊಡೆದಿತ್ತು. ಅಪಘಾತದ ಪರಿಣಾಮದಿಂದಾಗಿ ದರ್ಶನ್‌ಗೆ ಗಂಭೀರ ಗಾಯವಾಗಿತ್ತು. ಆನಂದಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ನಂತರ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರ ಸಲಹೆ ಮೇರೆಗೆ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಿವಮೊಗ್ಗದಲ್ಲಿ ದರ್ಶನ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಭೇಟಿ ನೀಡಿ, ಹೇಳಿಕೆ ಸಹ ಪಡೆದುಕೊಂಡಿದ್ದರು.
ಈ ಎಲ್ಲ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಬಾಲಕನ ತಂದೆ ಮಂಜುನಾಥ ಭಾವಿಸಿದ್ದರು. ಈ ಕುರಿತು ನ್ಯಾಯಾಲಯದಿಂದ ಯಾವುದೇ ನೋಟೀಸ್ ಬಾರದಿರುವುದರಿಂದ ಅವರು ನ್ಯಾಯಾಲಯ, ಪೊಲೀಸ್ ಠಾಣೆಗಳಲ್ಲಿ ವಿಚಾರಿಸಿದ್ದಾರೆ. ಆದರೆ ಈ ಸಂಬಂಧದ ಪ್ರಕರಣ ದಾಖಲು ಕುರಿತು ಯಾವುದೇ ಮಾಹಿತಿ, ಸಂಪರ್ಕ ಇದುವರೆಗೂ ಆಗದಿರುವ ಹಿನ್ನೆಲೆಯಲ್ಲಿ ಮಂಜುನಾಥ ಅವರು ನ್ಯಾಯಾಲಯದ ಪಿಸಿಆರ್ ವ್ಯವಸ್ಥೆ ಮೂಲಕ ಗ್ರಾಮಾಂತರ ಠಾಣೆಯಲ್ಲಿ ಕಾರು ಚಾಲಕನ ವಿರುದ್ಧ ದೂರು ದಾಖಲಿಸಿದ್ದಾರೆ.