ಬೆಂಗಳೂರು: ಅಗಲಿದ ನಟ ಪುನೀತ್ ರಾಜ್ಕುಮಾರ್ ಅವರ ಕಣ್ಣಿನ ಕಾರ್ನಿಯಾವನ್ನು ಈಗಾಗಲೇ ನಾಲ್ವರಿಗೆ ಅಳವಡಿಸಲಾಗಿದೆ. ಇದೀಗ ಅವರ ಕಣ್ಣಿನ ಕಾಂಡಕೋಶದಿಂದ ಮತ್ತಷ್ಟು ಜನರಿಗೆ ದೃಷ್ಟಿ ಭಾಗ್ಯ ದೊರೆಯವ ಸಾಧ್ಯತೆಗಳಿವೆ. ಈವರೆಗೂ ನೇತ್ರದಾನ ಮಾಡಿದ ದಾನಿಯ ಎರಡು ಕಣ್ಣುಗಳಿಂದ ಇಬ್ಬರಿಗೆ ದೃಷ್ಟಿ ನೀಡಬಹುದು ಎಂಬುದಷ್ಟೇ ತಿಳಿದಿತ್ತು. ಆದರೆ ಆಧುನಿಕ ತಂತ್ರಜ್ಞಾನ ಬಳಸಿ ಒಬ್ಬ ದಾನಿಯಿಂದ ಪಡೆದ ಕಣ್ಣುಗಳಿಂದ ಹಲವು ಜನರಿಗೆ ದೃಷ್ಟಿ ಕರುಣಿಸಬಹುದಾಗಿದೆ. ಈ ಕಾರ್ಯಕ್ಕೆ ‘ಪವರ್ ಸ್ಟಾರ್’ ಪುನೀತ್ ಪ್ರೇರಣೆಯಾಗಿದ್ದಾರೆ.
ಕಾಂಡಕೋಶ ವೃದ್ಧಿ: ಪುನೀತ್ ಅವರ ಕಣ್ಣುಗಳನ್ನು ದಾನ ಪಡೆದ ನಾರಾಯಣ ನೇತ್ರಾಲಯವು ನುರಿತ ತಜ್ಞರ ತಂಡದ ನೆರವಿನೊಂದಿಗೆ ಪ್ರತಿ ಕಾರ್ನಿಯಾವನ್ನು ಎರಡು ಭಾಗಗಳಾಗಿ ಪ್ರತ್ಯೇಕಿಸಿ ನಾಲ್ವರಿಗೆ ಕಸಿ ಮಾಡುವಲ್ಲಿ ಯಶಸ್ವಿಯಾಗಿದೆ. ಇದೀಗ ಅವರ ಕಾರ್ನಿಯಾ ಜತೆಗೆ ಪಡೆದಿದ್ದ ಕಾಂಡಕೋಶವನ್ನು ಪ್ರಯೋಗಾಲಯದಲ್ಲಿ ವೃದ್ಧಿಪಡಿಸಲಾಗುತ್ತಿದ್ದು, ಅದರಿಂದ ಕಣ್ಣಿನ ಹಾನಿಗೊಳಗಾದ ಇನ್ನಷ್ಟು ಮಂದಿಯ ದೃಷ್ಟಿ ಉಳಿಸಬಹುದಾಗಿದೆ ಎನ್ನುತ್ತಾರೆ ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ. ಭುಜಂಗ ಶೆಟ್ಟಿ.
ಯಾರಿಗೆ ಕಸಿ ಮಾಡಬಹುದು: ಈಗಾಗಲೇ ಕಣ್ಣಿನ ಕಾರ್ನಿಯಾ ಬಳಸಿ ದೃಷ್ಟಿ ಕಳೆದುಕೊಂಡಿರುವವರಿಗೆ ದೃಷ್ಟಿ ನೀಡಲಾಗುತ್ತಿದೆ. ಇದಷ್ಟೇ ಅಲ್ಲದೆ, ಕಾರ್ನಿಯಾ ಸುತ್ತ ಇರುವ ಕಾಂಡಕೋಶ ಬಳಸಿ ಇತರೆ ನೇತ್ರ ಸಮಸ್ಯೆ ನಿವಾರಿಸಬಹುದಾಗಿದೆ. ಅಂದರೆ ಪಟಾಕಿ ಸೇರಿದಂತೆ ಇತರೆ ಬೆಂಕಿ ಅವಘಡಗಳಿಂದ ಹಾಗೂ ಸುಣ್ಣ ಅಥವಾ ಇತರೆ ರಾಸಾಯನಿಕ ಪದಾರ್ಥಗಳು ಸಿಡಿದು ಕಣ್ಣಿನ ಹಾನಿಗೆ ಒಳಗಾದವರಿಗೆ ಈ ಕಸಿ ಮಾಡುವ ಮೂಲಕ ದೃಷ್ಟಿ ನಾಶ ಆಗುವುದನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದರು.
ಕಾರ್ನಿಯಾ ಜತೆಗೆ ದಾನಿಗಳಿಂದ ಪಡೆದ ಕಾಂಡಕೋಶ ವನ್ನು ಅಲ್ಲಿ ವೃದ್ಧಿಸಿ ಅಗತ್ಯ ಇರುವವರಿಗೆ ಕಸಿ ಮಾಡಲಾಗು ತ್ತಿದೆ. ಈವರೆಗೂ ಒಬ್ಬರಿಂದ ಇಬ್ಬರು ಹೆಚ್ಚೆಂದರೆ ಮೂವರಿಗೆ ಮಾತ್ರವೇ ದೃಷ್ಟಿ ನೀಡಲಾಗಿದೆ. ಆದರೆ ಒಬ್ಬರೇ ದಾನಿಯ ನೇತ್ರಗಳಿಂದ ಹತ್ತಾರು ಮಂದಿಗೆ ಉಪಯೋಗ ಆಗುತ್ತಿರು ವುದು ಇದೇ ಮೊದಲು. ಕಣ್ಣಿನ ಕಪ್ಪು ಗುಡ್ಡೆ (ಕಾರ್ನಿಯಾ) ಹಾಗೂ ಹೊರಭಾಗದ ಬಿಳಿಯ ಗುಡ್ಡೆ (ಸ್ಲ್ಕೆರಾ) ನಡುವಿನ ಅಂಚಿನಲ್ಲಿ ಕಾಂಡಕೋಶ ಇರುತ್ತದೆ. ಇದನ್ನು ಪ್ರಯೋಗಾಲಯ ದಲ್ಲಿ ವೃದ್ಧಿಪಡಿಸಿ ಅಗತ್ಯವಿರುವವರಿಗೆ ಚಿಕಿತ್ಸೆ ನೀಡಲಾಗುತ್ತದೆ ಎಂದು ಡಾ. ಭುಜಂಗಶೆಟ್ಟಿ ತಿಳಿಸಿದ್ದಾರೆ.
ಯಾರಿಗೆ ಈ ಕಸಿ ಮಾಡಬಹುದು: ಬೆಂಕಿ ಕಿಡಿ, ರಾಸಾಯನಿಕ ವಸ್ತು ಕಣ್ಣಿಗೆ ಸಿಡಿದರೆ, ಕಣ್ಣಿನ ಬಿಳಿಯ ಗುಡ್ಡೆ ಹಾಳಾಗಿ, ಕಣ್ಣಿನಲ್ಲಿ ತೇವಾಂಶ ಇಂಗುತ್ತದೆ. ಇದರಿಂದ ದೃಷ್ಟಿ ನಾಶವಾಗುತ್ತದೆ. ಅಂತಹವರಿಗೆ ಕಾಂಡಕೋಶ ಕಸಿ ಮಾಡಿದಲ್ಲಿ ಕಣ್ಣಿನ ತೇವಾಂಶ ಉಳಿಸಿ, ಅಂಧತ್ವ ತಡೆಯಬಹುದು ಎಂದು ಭುಜಂಗಶೆಟ್ಟಿ ಹೇಳಿದ್ದಾರೆ.
ವಾರದಲ್ಲಿ ಮೃತ 30 ಮಂದಿಯ ನೇತ್ರ ಸಂಗ್ರಹ: ನಟ ಪುನೀತ್ ರಾಜ್ಕುಮಾರ್ ನೇತ್ರದಾನದಿಂದ ನಾಲ್ವರಿಗೆ ದೃಷ್ಟಿ ದೊರೆತಿದ್ದರ ಪರಿಣಾಮ ಜನರು ಸ್ವಯಂಪ್ರೇರಿತರಾಗಿ ನೇತ್ರದಾನಕ್ಕೆ ಹೆಸರು ನೋಂದಾಯಿಸುತ್ತಿದ್ದಾರೆ. ಈ ಬಗ್ಗೆ ಮೂಡಿರುವ ಜಾಗೃತಿ ಅಪೂರ್ವವಾದುದು. ಕಳೆದ ಒಂದು ವಾರದಲ್ಲಿ 1,500ಕ್ಕೂ ಹೆಚ್ಚು ಮಂದಿ ನಾರಾಯಣ ನೇತ್ರಾಲಯದಲ್ಲಿ ಹೆಸರು ನೋಂದಾಯಿಸಿದ್ದಾರೆ. ಮಾತ್ರವಲ್ಲ, ಈ ಒಂದು ವಾರದಲ್ಲಿ ನಾನಾ ಕಾರಣಗಳಿಂದ ಸಾವನ್ನಪ್ಪಿದ ಸುಮಾರು 30 ಮಂದಿಯ ಕುಟುಂಬದ ಸದಸ್ಯರು ಆಸ್ಪತ್ರೆಗೆ ಕರೆ ಮಾಡಿ ನೇತ್ರದಾನ ಮಾಡಿದ್ದಾರೆ. ಇದರಿಂದ ನೂರಾರು ಮಂದಿಗೆ ದೃಷ್ಟಿ ದೊರೆತಂತಾಗಿದೆ ಎಂದು ಡಾ. ಭುಜಂಗಶೆಟ್ಟಿ ಹೇಳಿದ್ದಾರೆ.