ಉಡುಪಿ : ಕಾಂಗ್ರೇಸ್ ಮುಖಂಡ ಹಾಗೂ ಮಾಜಿ ಶಾಸಕ ಪ್ರಮೋದ್ ಮದ್ವರಾಜ್ ಸಾರ್ವಜನಿಕ ಸಭೆಯೊಂದರಲ್ಲಿ ತನ್ನ ಎದುರಾಳಿ ಪಕ್ಷದ ನಾಯಕ ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಂಡಾಡುವ ಮೂಲಕ ಎಲ್ಲರನ್ನೂ ಅಚ್ಚರಿಯಯಲ್ಲಿ ಕೆಡವಿದ್ದಾರೆ.
ಕೃಷ್ಣೈಕ್ಯರಾಗಿರುವ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಗಳಿಗೆ ನಿರ್ಯಾಣೋತ್ತರವಾಗಿ ‘ಪದ್ಮವಿಭೂಷಣ ಪ್ರಶಸ್ತಿ’ ದೊರೆತಿದ್ದು ಅದರ ಸ್ವಾಗತ ಸಮಾರಂಭದಲ್ಲಿ ಪ್ರಮೋದ್ ಮದ್ವರಾಜ್ ರವರು ಪ್ರಧಾನಿಯನ್ನು ಹೊಗಳಿದ್ದಾರೆ. ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರಕಾರ ಅರ್ಹರನ್ನು ಹುಡುಕಿ ಪ್ರಶಸ್ತಿ ನೀಡುತ್ತಿದೆ ಎನ್ನುವುದು ಅವರ ಪ್ರಧಾನಿ ಗುಣಗಾನಕ್ಕೆ ಕಾರಣವಾಗಿದೆ.
“ಗುಣಕ್ಕೆ ಮತ್ಸರ ಇಲ್ಲ . ನಾನು ವಿರೋಧ ಪಕ್ಷದಲ್ಲಿದ್ದರೂ ಆಡಳಿತ ಪಕ್ಷ ಉತ್ತಮ ಕಾರ್ಯಗಳನ್ನು ಮಾಡಿದಾಗ ಶ್ಲಾಘಿಸಬೇಕಿರುವುದು ಕರ್ತವ್ಯ ಎಂದ ಅವರು ಈ ಹಿಂದೆ ಅರ್ಜಿ ಹಾಕಿದವರಿಗಷ್ಟೆ ಪ್ರಶಸ್ತಿಗಳು ಸಿಗುತ್ತಿತ್ತು. ಆದರೆ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಪ್ರಶಸ್ತಿಗಳು ಅರ್ಹರನ್ನು ಹುಡುಕಿಕೊಂಡು ಬರುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು. ಎದುರಾಳಿ ಪಕ್ಷದ ನಾಯಕನ ಕಾರ್ಯ ವೈಖರಿಗೆ ಬಹಿರಂಗವಾಗಿ ಮೆಚ್ಚುಗೆ ಸೂಚಿಸಿದ ಅವರ ಗುಣಗ್ರಾಹಿತ್ವಕ್ಕೆ ಚಪ್ಪಾಳೆ ತಟ್ಟುವ ಮೂಲಕ ಅಭಿನಂದಿಸಿದರು.

‘ಪದ್ಮವಿಭೂಷಣ’ ಪ್ರಶಸ್ತಿಯನ್ನು ಗುರುಗಳ ಪರವಾಗಿ ಸ್ವೀಕರಿಸಿ ದೆಹಲಿಯಿಂದ ಉಡುಪಿಗೆ ಆಗಮಿಸಿದ ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಗೆ ಪುರ ಪ್ರವೇಶದ ಸಂದರ್ಭ ಉಡುಪಿಯಲ್ಲಿ ಗುರುವಾರ ಭಕ್ತರು, ಅಭಿಮಾನಿಗಳು ಅದ್ದೂರಿ ಸ್ವಾಗತ ಕೋರಿದ್ದರು. ಬಳಿಕ ಹಿರಿಯ ಶ್ರೀಗಳ ಕುರಿತು ಹಾಗೂ ಪ್ರಶಸ್ತಿ ಸ್ವಾಗತ ಸಮಾರಂಭದ ಏರ್ಪಡಿಸಲಾಗಿತ್ತು.