ಮಂಗಳೂರು: ಈ ಖದೀಮರು ಮೂಲತಃ ಟಿಬೆಟ್ನವರು, ಇವರು ಬಳಸುತ್ತಿದ್ದುದು ಚೀನಾದ ನಿಷೇಧಿತ ಆ್ಯಪ್ಗಳನ್ನು, ಆದರೆ ಇವರ ವಂಚನಾ ಜಾಲವಿದ್ದಿದ್ದರು ಮಾತ್ರ ಭಾರತದಲ್ಲಿ.. ಹೀಗೆ ಬಹಳಷ್ಟು ಮಂದಿಗೆ ಮೋಸ ಮಾಡಿರುವ ಇಬ್ಬರು ಟಿಬೆಟಿಯನ್ನರು ಕೊನೆಗೂ ಸಿಕ್ಕಿಬಿದ್ದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಟಿಬೆಟಿಯನ್ ಕ್ಯಾಂಪ್ ನಿವಾಸಿಗಳಾದ ಲೋಬಸಂಗ್ ಸಂಗ್ಯೆ (24) ಹಾಗೂ ದಪಕ ಪುಂದೇ (44) ಬಂಧಿತರು. ಪ್ರಕರಣದಲ್ಲಿ ಇನ್ನು ಮೂವರು ಭಾಗಿಯಾಗಿರುವ ಬಗ್ಗೆ ಮಾಹಿತಿ ಲಭಿಸಿದ್ದು ಅವರ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮಂಗಳೂರಿನ 7 ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ 10 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ಏನಿದು ದೂರು ?
ನಗರದ ಅತ್ತಾವರ ವೈದ್ಯನಾಥ ನಗರದ ಸಿ.ಡಿ ಅಲೆಕ್ಸಾಂಡರ್ ಪ್ರಕರಣದ ದೂರುದಾರರು. ಇವರು ಇತ್ತೀಚೆಗೆ ಬ್ಯಾಂಕ್ ಗೆ ಸರೆಂಡರ್ ಮಾಡಿದ್ದ ಎಸ್ ಬಿ ಐ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ನಿಂದ 1.12 ಲಕ್ಷ ರೂಪಾಯಿಗಳು ಹಂತ ಹಂತವಾಗಿ ಬೇರೆ ಖಾತೆಗಳಿಗೆ ವರ್ಗಾವಣೆಗೊಂಡಿತ್ತು.
ಅಲೆಕ್ಸಾಂಡರ್ ಅವರು ತಾನು ಮೂರು ವರ್ಷಗಳಿಂದ ಉಪಯೋಗಿಸುತ್ತಿದ್ದ ಕ್ರೆಡಿಟ್ ಕಾರ್ಡ್‌ನ ವಾರ್ಷಿಕ ಶುಲ್ಕ ಹೆಚ್ಚಳವಾಗಿದ್ದರಿದ 2021ರ ಮಾ.23ರಂದು ಬ್ಯಾಂಕ್‌ಗೆ ಸರೆಂಡರ್ ಮಾಡಿದ್ದರು. ಮಾ.27ರಂದು ಇವರ ಖಾತೆಯಿಂದ 1.12 ಲಕ್ಷ ರೂ. ವರ್ಗಾವಣೆಯಾಗಿರುವುದು ಸ್ಟೇಟ್‌ಮೆಂಟ್‌ನಿಂದ ತಿಳಿದು ಬಂದಿತ್ತು. ಈ ಹಿನ್ನಲೆಯಲ್ಲಿ ಅವರು ಮಂಗಳೂರಿನ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ತನಿಖೆಯಲ್ಲಿ ಬಯಲಾದ ಸ್ಫೋಟಕ ಮಾಹಿತಿ :
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಂಗಳೂರು ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡಿದ್ದಾರೆ. ಈ ವೇಳೆ ಅಲೆಕ್ಸಾಂಡರ್ ಅವರ ಕ್ರೆಡಿಟ್ ಕಾರ್ಡ್ ಖಾತೆಯಿಂದ 1,12,000 ರೂ. ಹಣ ಮೊದಲು ಮೊಬಿಕ್ವಿಕ್ ವಾಲೆಟ್ ಆ್ಯಪ್ ಮೂಲಕ ಉತ್ತರ ಪ್ರದೇಶ – ಮತ್ತು ಮಹಾರಾಷ್ಟ್ರದ ಫಿನ್‌ಕೇರ್ ಸ್ಟಾಲ್ ಫೈನಾನ್ಸ್ ಬ್ಯಾಂಕ್‌ನಲ್ಲಿದ್ದ ಎರಡು ಖಾತೆಗಳಿಗೆ ವರ್ಗಾವಣೆಯಾಗಿದೆ ಎಂದು ತಿಳಿದು ಬಂದಿದೆ.
ಬಳಿಕ ಅದು ಉತ್ತರ ಕನ್ನಡ ತಟ್ಟಿ ಹಳ್ಳಿಯಲ್ಲಿರುವ ಕೆನರಾ ಡಿಸಿಸಿ ಬ್ಯಾಂಕ್ ನ ಖಾತೆದಾರನಾದ ಲೋಬ್ ಸ್ಯಾಂಗ್ ಸಂಖ್ಯೆ ಖಾತೆಗೆ ವರ್ಗಾವಣೆಯಾಗಿದೆ. ಆರೋಪಿ ದಕ್ಷಾ ಪುಂಜೆ ನಿಷೇಧಿತ ಆ್ಯಪ್‌ಗಳಾದ ವಿ ಚ್ಯಾಟ್ ಮತ್ತು ರೆಡ್ ಪ್ಯಾಕ್ ಮೂಲಕ ಹಾಗೂ ಹವಾಲಾ ಮಾದರಿಯಲ್ಲಿ ಹಣವನ್ನು ಟಿಬೆಟ್ ನಿಂದ ಮುಂಡಗೋಡಿಗೆ ಸ್ಥಳೀಯ ಮನಿ ಎಕ್ಸ್‌ಚೇಂಜ್ ಏಜಂಟರ ಮುಖಾಂತರ ವರ್ಗಾವಣೆ ಮಾಡುತ್ತಿರುವುದು ಕೂಡಾ ಬೆಳಕಿಗೆ ಬಂದಿದೆ.

ನಿಷೇಧಿತ ಆಪ್ ಬಳಕೆ…!
ಕೃತ್ಯಕ್ಕೆ ಆರೋಪಿಗಳು ಚೀನಾದ ನಿಷೇಧಿತ ಆ್ಯಪ್ ಬಳಸುತಿದ್ದದ್ದು ಪತ್ತೆಯಾಗಿದೆ. ಮೊಬಿವಿಕ್, ವಿಚಾಟ್, ರೆಡ್ಪ್ಯಾಕ್ ಮುಂತಾದ ನಿಷೇದಿತ ಆ್ಯಪ್ ನ್ನು ಆರೋಪಿಗಳು ಬಳಸುತ್ತಿದ್ದದನ್ನು ಪೊಲೀಸರು ತನಿಖೆ ವೇಳೆ ಕಂಡುಕೊಂಡಿದ್ದಾರೆ. ಕ್ರೆಡಿಟ್ ಕಾರ್ಡ್ ರದ್ದು ಮಾಡಿಸಲು ಮನವಿ ಮಾಡಿದವರ ಮಾಹಿತಿಯನ್ನು ಸಂಪಾದಿಸುತಿದ್ದ ದುಷ್ಕರ್ಮಿಗಳು ಅವರಿಗೆ ಕರೆ ಮಾಡಿ , ಕ್ಯಾನ್ಸಲೇಷನ್ಗೆ ಒಟಿಪಿ ಬರುತ್ತದೆ ಎಂದು ಹೇಳಿ ಒಟಿಪಿ ಪಡೆದು ಮೋಸ ಮಾಡುತ್ತಿದ್ದರು ಎನ್ನಲಾಗಿದೆ.
ಹೀಗೆ ಭಾರತೀಯ ಕರೆನ್ಸಿಯಿಂದ ಟಿಬೆಟಿಯನ್ ಕರೆನಿಗೆ ಹಾಗೂ ಟಿಬೆಟಿಯನ್ ಕರೆನ್ಸಿಯಿಂದ ಭಾರತೀಯ ಕರೆಗೆ ಹಣ ವರ್ಗಾವಣೆ ಆಗಿರುವುದರಿಂದ ಈ ಪ್ರಕರಣದ ಬಗ್ಗೆ ಆಳವಾದ ತನಿಖೆ ನಡೆಸ ಬೇಕಾಗಿದೆ. ಈ ಬಗ್ಗೆ ರಾಜ್ಯ ಗುಪ್ತಚರ ಇಲಾಖೆಗೂ ಮಾಹಿತಿ ನೀಡಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತರು ತಿಳಿಸಿದರು.
ಬ್ಯಾಂಕ್ ಸಿಬಂದಿಗಳ ಕೈವಾಡ ?
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಇಂತಹ ಇನ್ನಷ್ಟು ವಂಚನೆ ಪ್ರಕರಣಗಳು ನಡೆದಿರುವ ಸಾಧ್ಯತೆಯ ಕುರಿತಂತೆಯೂ ತನಿಖೆ ನಡೆಯುತ್ತಿದೆ. ದೂರುದಾರರು ತಮ್ಮ ಕ್ರೆಡಿಟ್ ಕಾರ್ಡ್ ಬ್ಯಾಂಕ್‌ಗೆ ಸರೆಂಡರ್ ಮಾಡಿದ್ದ ವೇಳೆ ಈ ಪ್ರಕರಣ ನಡೆದಿರುವುದರಿಂದ ಬ್ಯಾಂಕ್‌ನ ಪಾಲುದಾರಿಕೆಯ ಕುರಿತಂತೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಎನ್. ಶಶಿಕುಮಾರ್ ವಿವರಿಸಿದರು.
ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ಫಿನ್‌ಕೇರ್ ಸ್ಟಾಲ್ ಫೈನಾನ್ಸ್ ಬ್ಯಾಂಕ್‌ನಲ್ಲಿದ್ದ ಎರಡು ಖಾತೆಗಳಿಗೆ ಹಣ ವರ್ಗಾವಣೆಯಾದ ಬಗ್ಗೆ ಇಬ್ಬರು ಆರೋಪಿಗಳನ್ನು ಹಾಗೂ ಮಧ್ಯವರ್ತಿಯಾಗಿ ಸಹಕರಿಸಿದೆನ್ನಲಾದ ಇನ್ನೋರ್ವ ಸೇರಿದಂತೆ ಇನ್ನೂ ಮೂವರು ಆರೋಪಿಗಳ ಬಂಧನ ಆಗಬೇಕಾಗಿದೆ ಎಂದು ಅವರು ಹೇಳಿದರು