ಪುತ್ತೂರು : ನ 11: ಇತ್ತೀಚೆಗೆ ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಬಂಧಿತರಾಗಿದ್ದ ಆರೋಪಿಯೊಬ್ಬರು ಜೈಲಿನಿಂದ ಬಿಡುಗಡೆ ಹೊಂದಿದ ಕೆಲ ದಿನಗಳ ಬಳಿಕ ನಿಧನ ಹೊಂದಿದ್ದಾರೆ. ಬಡಗನ್ನೂರು ಗ್ರಾಮದ ಪಟ್ಟೆ ನಿವಾಸಿ ಆದಂ ಕುಂಞ (52 ) ನ. 11 ರಂದು ಪುತ್ತೂರು ಖಾಸಗಿ ಆಸ್ಫತ್ರೆಯಲ್ಲಿ ಮೃತಪಟ್ಟಿದ್ದಾರೆ.
ಆದಂ ಕುಂಞ ಯವರು ಬಡಗನ್ನೂರಿನಲ್ಲಿ ಬೀಡಿ ಬ್ರ್ಯಾಂಚ್ ಕೆಲಸ ಮಾಡುತ್ತಿದ್ದು , ಅಲ್ಲಿಗೆ ಬಂದ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಬಗ್ಗೆ ಅವರ ವಿರುದ್ದ ಅ.24 ರಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೋಕ್ಸೋದಡಿ ಅವರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಬಳಿಕ ಪೊಲೀಸರು ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಅಲ್ಲಿ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. 12 ದಿನ ಜೈಲಿನಲ್ಲಿ ಕಳೆದ ಅವರು ಬಳಿಕ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದರು.

ಜೈಲಿನಿಂದ ಬಂದ ಬಳಿಕ ಅವರು ಅನ್ಯಮನಸ್ಕರಾಗಿದ್ದರು. ಪ್ರಕರಣ ದಾಖಲಾದ ಕೊರಗಿನಲ್ಲಿ ಅನ್ನ ಆಹಾರ ತ್ಯಜಿಸಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.
ಆದಂ ಕುಂಞ ಕುಟುಂಬಸ್ಥರ ಪ್ರಕಾರ “ಆದಂ ಕುಂಞ ಯವರು ತಮ್ಮ ಮೇಲೆ ದಾಖಲಾದ ಪ್ರಕರಣದಿಂದ ಅವರು ಅತೀವವಾಗಿ ನೊಂದುಕೊಂಡಿದ್ದರು .ನಾನು ತಪ್ಪು ಮಾಡದಿದ್ದರೂ ತನ್ನ ಮೇಲೆ ದೂರು ದಾಖಲಾಯಿತು. ಇದರಿಂದ ತನ್ನ ಮಾನ ಮಾರ್ಯಾದೆ ಹರಾಜಾಯಿತು ಎಂದು ತೀವ್ರವಾಗಿ ಬೇಸರಿಸಿಕೊಂಡಿದ್ದರು . ಇದೇ ಕೊರಗಿನಲ್ಲಿ ಆಹಾರ , ನಿದ್ದೆಯನ್ನು ತ್ಯಜಿಸಿ ಮಂಕಾಗಿ ಕೂತು ಕೊಳ್ಳುತಿದ್ದರು.ಈ ಅಘಾತದಿಂದ ಚೇತರಿಸಿಕೊಳ್ಳದ ಅವರು ಅಸ್ವಸ್ಥಗೊಂಡು ನಿಧನ ಹೊಂದಿದ್ದಾರೆ “
ಆದಂ ಕುಂಞ ಯವರು ಮುಂಡೊಳ ಮಸೀದಿಯ ಜಮಾಅತ್ ಆಡಳಿತ ಕಮಿಟಿಯ ಸದಸ್ಯರಾಗಿದ್ದರು. ಮೃತರು ಪತ್ನಿ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.