650ಕ್ಕೂ ಹೆಚ್ಚು ಬಗೆಯ ಭತ್ತದ ತಳಿಗಳನ್ನು ಸಂರಕ್ಷಿಸುತ್ತಿರುವ ಕಾಸರಗೋಡು ಜಿಲ್ಲೆಯ ಬೆಳ್ಳೂರು ಗ್ರಾ.ಪಂ. ಕಿನ್ನಿಂಗಾರಿನ ಸತ್ಯನಾರಾಯಣ ಬೆಳೇರಿಯವರಿಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರವರು ‘ಪ್ಲೇಂಟ್ ಜಿನೊಮ್ ಸೇವಿಯರ್ ಫಾರ್ಮರ್’ ರಾಷ್ಟ್ರೀಯ ಪುರಸ್ಕಾರವನ್ನು ನ .11 ರಂದು ನವ ದೆಹಲಿಯಲ್ಲಿ ಪ್ರಧಾನ ಮಾಡಿದರು.
ಕೇಂದ್ರ ಕೃಷಿ ಸಚಿವಾಲಯದ ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರವು ಸಸ್ಯ ತಳಿ ಸಂರಕ್ಷಣೆಗಾಗಿ ಈ ಪ್ರಶಸ್ತಿಯನ್ನು ನೀಡುತ್ತಾದೆ. ಪ್ರಶಸ್ತಿಯೂ 1 ಲಕ್ಷ ನಗದು ಹಾಗೂ ಪ್ರಮಾಣಪತ್ರ, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ಸುಮಾರು 200 ಅಪೂರ್ವ ತಳಿ ಸಹಿತ ವೈವಿಧ್ಯಮಯ ಬಣ್ಣ, ಗಾತ್ರ, ಔಷಧೀಯ ಗುಣ ವಿಶೇಷತೆಯ ಸುಮಾರು 650 ದೇಸಿ-ವಿದೇಶೀ ಭತ್ತದ ತಳಿಗಳನ್ನು ಸಂಗ್ರಹಿಸಿ ಕೃತಕ ಗದ್ದೆಯಲ್ಲಿ ಬಿತ್ತನೆ ಮಾಡಿ ಬೆಳೆಸಿ ಸಂರಕ್ಷಿಸುವ ಕಾರ್ಯವನ್ನು ಕಳೆದ ಹನ್ನೆರಡು ವರ್ಷಗಳಿಂದ ಸತ್ಯನಾರಾಯಣ ಬೆಳೇರಿಯವರು ಮಾಡುತಿದ್ದು, ಅವರ ಈ ಕಾರ್ಯವನ್ನು ಗುರುತಿಸಿ ಪ್ರಾಧಿಕಾರವೂ ಪ್ರಶಸ್ತಿ ನೀಡಿದೆ.
ಸತ್ಯನಾರಾಯಣ ಅವರ ಹೆಸರನ್ನು ಸಿಒಎ ಪಡನ್ನಕ್ಕಾಡ್ ಕೃಷಿ ವಿಶ್ವ ವಿದ್ಯಾನಿಲಯ ಮತ್ತು ಕೇರಳ ಕೃಷಿ ವಿದ್ಯಾನಿಲಯದ ಐಪಿಆರ್ ಸೆಲ್ ಪ್ರಶಸ್ತಿಗೆ ಶಿಫಾರಸು ಮಾಡಿತ್ತು. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಾಜ್ಯ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಬೆಳೇರಿಯ ದಿ.ಕುಂಞಿ ರಾಮನ್ ಮಣಿಯಾಣಿ ಮತ್ತು ಜಾನಕಿಯ ದಂಪತಿ ಪುತ್ರ ಸತ್ಯನಾರಾಯಣ ಅವರು ಸಾಹಿತ್ಯ, ಬರಹ, ವ್ಯಂಗ್ಯ ಚಿತ್ರ, ಜೇನು ಸಾಕಣೆ ಮತ್ತು ಗಿಡಗಳ ಕಸಿಕಟ್ಟುವಿಕೆಯಲ್ಲೂ ನಿಪುಣರಾಗಿದ್ದಾರೆ.ಭತ್ತದ ತಳಿ ಸಂರಕ್ಷಣೆಯ ಸರಣಿ ವೆಬಿನಾರ್ ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೂ ಭಾಗವಹಿಸಿದ್ದಾರೆ.
ಮಂಗಳೂರು ಆಕಾಶವಾಣಿ ಕೃಷಿರಂಗ ವಿಭಾಗದ ಸರಣಿ ಕಾರ್ಯಕ್ರಮದಲ್ಲಿ ಬಹುಮಾನ ಪಡೆದಿದ್ದಾರೆ.ಪತ್ನಿ ಜಯಶ್ರೀ, ಪುತ್ರಿಯರು ನವ್ಯಶ್ರೀ, ಗ್ರೀಷ್ಮ, ಪುತ್ರ ಅಭಿನವ್. ದಶಕಗಳಿಂದ ಅವರು ಮಾಡುತ್ತಿರುವ ಭತ್ತದ ತಳಿ ಸಂರಕ್ಷಣೆ ಕಾರ್ಯವೂ ಆರ್ಥಿಕ ಲಾಭ ತರದಿದ್ದರೂ ಮುಂದಿನ ಪೀಳಿಗೆಗೆ ತಳಿಯನ್ನು ವರ್ಗಾಯಿಸುವ ಮಹತ್ಕಾರ್ಯವನ್ನು ಅವರು ಮಾಡುತಿದ್ದಾರೆ.