ಮಂಗಳೂರು: ಅಡಕೆ ಹಾನಿಕಾರಕ ಎಂಬ ಆಡಳಿತ ಪಕ್ಷದ ಜಾರ್ಖಂಡ್ ಸಂಸದ ನಿಶಿಕಾಂತ ದುಬೆ ಅವರ ಹೇಳಿಕೆ ಜನರನ್ನು ತಪ್ಪು ದಾರಿಗೆಳೆಯುವ ಪ್ರಯತ್ನ. ಅವರ ಈ ವೈಜ್ಞಾನಿಕ ಪುರಾವೆ ಇಲ್ಲದ ಹೇಳಿಕೆ ಅಡಕೆ ಬೆಳೆಗಾರರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಚ್.ಎಂ.ಕೃಷ್ಣ ಕುಮಾರ್ ತಿಳಿಸಿದ್ದಾರೆ.
ಅಡಕೆ ಎಲ್ಲ ಧಾರ್ವಿುಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಗಳಲ್ಲಿ ಮಹತ್ವದ ಸ್ಥಾನ ಪಡೆದಿದೆ. ಭಾರತ ವಿಶ್ವದಲ್ಲೇ ಅತಿ ಹೆಚ್ಚು ಅಡಕೆ ಬೆಳೆಯುವ ದೇಶ. ಕ್ಯಾಂಪ್ಕೊ ಅಡಕೆ ಬೆಳೆಗಾರರ ಹಿತ ಕಾಪಾಡುವ ಖಚಿತ ನಿಲುವು ಹೊಂದಿದೆ. ಅಡಕೆಯ ಆರೋಗ್ಯ ಪ್ರಯೋಜನಗಳ ಕುರಿತು ಸಂಪೂರ್ಣ ವೈಜ್ಞಾನಿಕ ಸಂಶೋಧನೆಗೆ ಸಂಬಂಧಪಟ್ಟ ಇಲಾಖೆಗೆ ಪ್ರಧಾನ ಮಂತ್ರಿ ಸೂಚನೆ ನೀಡಬೇಕು ಎಂದು ಕ್ಯಾಂಪ್ಕೊ ಸಂಸ್ಥೆ ವಿನಂತಿಸಿದೆ.
ಅಡಕೆ ಕ್ಯಾನ್ಸರ್ಕಾರಕ ಅಲ್ಲ ಎಂಬುದು ಸಾಬೀತಾಗಿದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ಸಮರ್ಥ ಸಂಶೋಧನಾ ಸಂಸ್ಥೆಗಳು ನಡೆಸಿದ ಸಂಶೋಧನೆಗಳು ಸಕಾರಾತ್ಮಕ ಫಲಿತಾಂಶಗಳನ್ನು ಸಾಬೀತುಪಡಿಸಿವೆ. 1974ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಅಡಕೆ ಕ್ಯಾನ್ಸರನ್ನು ಗುಣಪಡಿಸುತ್ತದೆ ಎಂದು ವರದಿ ನೀಡಿದ್ದರು. ಚೀನಾದಲ್ಲಿ ಅಡಕೆ ಬಳಸಿ 30ಕ್ಕೂ ಹೆಚ್ಚು ಔಷಧಗಳನ್ನು ತಯಾರಿಸಲಾಗಿದೆ. ಆಹಾರ ಕಲಬೆರಕೆ ತಡೆ ಕಾಯ್ದೆಯಲ್ಲಿ ಅಡಕೆ ಆಹಾರ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಅಡಕೆ ಮನುಷ್ಯರಿಗೆ ಮತ್ತು ಜಾನುವಾರುಗಳಿಗೆ ಬೇಕಾದ ಔಷಧೀಯ ಗುಣಗಳನ್ನು ಹೊಂದಿರುವ ಪದಾರ್ಥ ಎಂದು ಕ್ಯಾಂಪ್ಕೊ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ