ಬೆಳ್ತಂಗಡಿ: ಸ್ವಾತಂತ್ರ್ಯ ಹೋರಾಟಗಾರರೂ, ಗಾಂಧಿ ತತ್ವದ ಪರಿಪಾಲಕರೂ ಆದ ಪಡಂಗಡಿ ಭೋಜರಾಜ ಹೆಗ್ಡೆಯವರು ತಮ್ಮ 99ನೇ ವಯಸ್ಸಿನಲ್ಲಿ ಬೆಳ್ತಂಗಡಿಯ ಪಡಂಗಡಿ ನಿವಾಸದಲ್ಲಿ ನಿಧನರಾಗಿದ್ದಾರೆ. ಮೃತರು ಪುತ್ರ ವಿನಯಪ್ರಸಾದ್ ಪುತ್ರಿ ವೀಣಾ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸೆರೆಮನೆ ಸೇರಿದ್ದ ಹೆಗ್ಡೆಯವರು, ತುರ್ತು ಪರಿಸ್ಥಿತಿಯ ವಿರುದ್ಧವೂ ಹೋರಾಡಿ ಸೆರೆ ವಾಸ ಅನುಭವಿಸಿದ್ದರು. ಸರಕಾರದಿಂದ ಅವರಿಗೆ ಭೂಮಿ ಮಂಜೂರಾಗಿದ್ದಾಗ ತನ್ನ ದೇಶಕ್ಕಾಗಿ ತಾನು ಮಾಡಿದ ಕೆಲಸಕ್ಕೆ ಕೂಲಿ ತೆಗೆದುಕೊಳ್ಳುವುದಿಲ್ಲವೆಂದು ನಿರಾಕರಿಸಿದ್ದರು.
ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಮಂಗಳೂರಿಗೆ ಬಂದಿದ್ದಾಗ ಅವರ ಯೋಗಕ್ಷೇಮವನ್ನು ನಿರ್ವಹಿಸಿದವರೂ ಹೆಗ್ಡೆಯವರೇ ಆಗಿದ್ದರು.ಜೀವನ ಪೂರ್ತಿ ತತ್ವ ನಿಷ್ಠರಾಗಿ ಬಾಳಿದ್ದ ಹೆಗ್ಡೆಯವರು ತನ್ನ ಕೊನೆಯ ದಿನಗಳಲ್ಲಿ ಅಲ್ಪ ಕಾಲ ಅಸೌಖ್ಯದಿಂದಿದ್ದರು.
ದಕ್ಷಿಣ ಕನ್ನಡದಲ್ಲಿ ಪ್ರಾರಂಭವಾದ ಗಾಂಧಿ ವಿಚಾರ ವೇದಿಕೆ ಇವರನ್ನು ಮಾರ್ಗದರ್ಶಿ ಎಂಬಂತೆ ಗೌರವಿಸಿತು. ಗಾಂಧಿ ವಿಚಾರ ವೇದಿಕೆಯ ಮಾತೃ ಸಮಿತಿಯು ಸಕಲ ಗೌರವಾದರಗಳೊಂದಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿತು.