ವಿಟ್ಲ: ಕೋರೆಗೆ ಅಕ್ರಮವಾಗಿ ಪ್ರವೇಶ ಮಾಡಿದ ತಂಡ ಕೋರೆ ನೋಡಿಕೊಳ್ಳುತ್ತಿರುವ ವ್ಯಕ್ತಿಗೆ ಕತ್ತಿ ತೋರಿಸಿ ಒಂದು ಲಕ್ಷ ರೂ. ಗೆ ಬೇಡಿಕೆ ಇಟ್ಟ ಘಟನೆ ಕರೋಪಾಡಿ ಗ್ರಾಮದ ಎಡಂಬಳ ಎಂಬಲ್ಲಿ ನ .8ರಂದು ನಡೆದಿದೆ.
ಕರೋಪಾಡಿ ಗ್ರಾಮದ ಎಡಂಬಳ ನಿವಾಸಿ ಯು ಕೆ ಅಬ್ದುಲ್ ಖಾದರ್ ನೀಡಿದ ದೂರಿನಂತೆ ಅಹಮ್ಮದ್ ನಿಝಾರ್ ಮತ್ತು ಶರಿಫ್ ಅವರು ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯು ಕೆ ಅಬ್ದುಲ್ ಖಾದರ್ ಅವರ ಮಾವ ಎ ಎಂ ಇಸ್ಮಾಯಿಲ್ ರವರ ಅವರ ಮಾಲಕತ್ವದ ಒಂದು ಕಲ್ಲಿನ ಕೋರೆ ಇದ್ದು, ಈ ಕೋರೆಯ ಉಸ್ತುವಾರಿಯನ್ನು ಯು ಕೆ ಅಬ್ದುಲ್ ಖಾದರ್ ಅವರು ಸುಮಾರು 5 ವರ್ಷದಿಂದ ನೋಡಿಕೊಳ್ಳುತ್ತಿದ್ದಾರೆ.
ಯು ಕೆ ಅಬ್ದುಲ್ ಖಾದರ್ ಸಂಜೆ 4 ಗಂಟೆ ಸುಮಾರಿಗೆ ಕೋರೆಯ ರೂಮ್‌ನಲ್ಲಿ ಇದ್ದ ವೇಳೆ ಪಿಕಾಪ್ ವೊಂದರಲ್ಲಿ ಬಂದ ಅಹಮ್ಮದ್ ನಿಝಾರ್ ಮತ್ತು ಶರಿಫ್ ಎಂಬಿಬ್ಬರು ಪರಿಚಿತರು ಬಂದಿದ್ದಾರೆ. ಅವರು ಯು ಕೆ ಅಬ್ದುಲ್ ಖಾದರ್ ಇರುವ ಜಾಗಕ್ಕೆ ಏಕಾಏಕಿಯಾಗಿ ಅಕ್ರಮ ಪ್ರವೇಶ ಮಾಡಿ ಕತ್ತಿಯನ್ನು ಹಿಡಿದುಕೊಂಡು ಬಂದು ನಮಗೆ ನೀನು ಒಂದು ಲಕ್ಷ ಹಣ ನೀಡಬೇಕು ಇಲ್ಲವಾದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹಣ ನೀಡಲು ಖಾದರ್ ಆಕ್ಷೇಪ ವ್ಯಕ್ತಪಡಿಸಿದ್ದು ಆಗ ಆರೋಪಿಗಳು ಕೈಯಲ್ಲಿ ಹಿಡಿದುಕೊಂಡು ಬಂದಿದ್ದ ಕತ್ತಿಯನ್ನು ತೋರಿಸಿ ನೀನು ನಮಗೆ ಹಣ ನೀಡದಿದ್ದರೆ ನಿನ್ನನ್ನು ಇದೆ ಕತ್ತಿಯಿಂದ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಆ ಸಮಯ ಖಾದರ್ ಕಿರುಚಾಡಿದ್ದು, ಬೊಬ್ಬೆ ಕೇಳೀ ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುತ್ತಿದ್ದ ಕೀರ್ತಿ ಭಟ್ ಎಂಬವರು ಖಾದರ್ ರಕ್ಷಣೆಗೆ ಧಾವಿಸಿ ಬಂದಿದ್ದಾರೆ.
ಈ ವೇಳೆ ಕೀರ್ತಿಭಟ್‌ರವರ ಕುತ್ತಿಗೆಯ ಬಳಿ ಕತ್ತಿಯನ್ನಿಟ್ಟು ಆರೋಪಿಗಳು ನಮಗೆ ಹಣ ನೀಡದೆ ಕೋರೆಯನ್ನು ನಡೆಸಿದರೆ ನಿನ್ನನ್ನು ಕೂಡಾ ಕೊಲ್ಲದೆ ಬಿಡುವುದಿಲ್ಲವಾಗಿ ಬೆದರಿಕೆ ಹಾಕಿದ್ದಾರೆ. ಆ ಸಮಯಕ್ಕೆ ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುತ್ತಿದ್ದ ಪವಾಝ್ ಹಾಗೂ ಇತರರು ಬರುತ್ತಿರುವುದನ್ನು ಗಮನಿಸಿದ ಆರೋಪಿಗಳೂ ಪಿಕಪ್ ವಾಹನ ಬಿಟ್ಟು ಓಡಿ ಪರಾರಿಯಾಗಿದ್ದಾರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.