ನೆಲ್ಯಾಡಿ :ನ 7: ಮೂರು ವರ್ಷಗಳಿಂದ ಕುಡಿಯುವ ನೀರಿಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಈ ಒಂದು ಊರಿನ ಜನರು ಪಡುತ್ತಿರುವ ತೊಂದರೆ ಹೇಳತೀರದು. ಇಲ್ಲಿಯ ಜನತೆ ನೀರು ಬೇಕಾದರೇ ಒಂದೋ ಸಂಬಂಧಪಟ್ಟ ಅಧಿಕಾರಿಗಳ ಜತೆ ಗಲಾಟೆ ಮಾಡಬೇಕು ಅಥಾವ ದೈನೇಸಿಯಾಗಿ ಬೇಡಬೇಕು . ಆಗ ಆ ಅಧಿಕಾರಿ ದಯೆ ತೋರಿದರೆ ಒಂದೆರಡು ದಿನ ನೀರು ಬರುತ್ತದ. ಮತ್ತೆ ತಿಂಗಳಾನುಗಟ್ಟಲೆ ನೀರು ಸರಬರಜು ನಿಂತು ಹೋಗುತ್ತದೆ.
ಹೌದು ಇಂತಾಹದೊಂದು ಚಿತ್ರಣ ನಮಗೆ ಕಾಣ ಸಿಗುವುದು ಕಡಬ ತಾಲೂಕಿನ ನೆಲ್ಯಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆರ್ನಡ್ಕ ಎಂಬಲ್ಲಿ. ಇಲ್ಲಿ ಪಂಚಾಯತ್ ನ ಕುಡಿಯುವ ನೀರಿನ ಸಮಸ್ಯೆ ಆರಂಭವಾಗಿ ಮೂರು ವರ್ಷಗಳೇ ಸಂದಿವೆ. ಈ ಸಮಸ್ಯೆಯನ್ನು ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಸ್ಥಳೀಯರು ಗ್ರಾಮ ಪಂಚಾಯತ್, ಪುತ್ತೂರು ಉಪ ಆಯುಕ್ತರು,ಪುತ್ತೂರು ಇ.ಓ ಸೇರಿದಂತೆ ಬಹುತೇಕ ಎಲ್ಲಾ ಅಧಿಕಾರಿಗಳ ಗಮನಕ್ಕೂ ತಂದಿದ್ದಾರೆ.ಪದೇ ಪದೇ ತರುತ್ತಲೂ ಇದ್ದಾರೆ. ಆದರೂ ಕುಡಿಯುವ ನೀರಿನ ಸಮಸ್ಯೆಗೆ ಮಾತ್ರ ಇನ್ನೂ ಮುಕ್ತಿ ಸಿಕ್ಕಿಲ್ಲ.
ನೀರು ಸರಬರಜುಗೊಳ್ಳದಿರುವುದಕ್ಕೆ, ನೀರು ಪೂರೈಕೆಯಾಗುವ ಕೊಳವೆ ಬಾವಿಯಲ್ಲಿ ನೀರಿಲ್ಲ ಅಥವಾ ನೀರು ಸರಬರಾಜು ಮಾಡುವ ಪೈಪ್‌ಲೈನ್ ಇಲ್ಲ ,ವಿದ್ಯುತ್ ಸಮಸ್ಯೆ ಇದೆ ಎಂಬುದು ಕಾರಣವಲ್ಲ. ಇಲ್ಲಿಯ ಕುಡಿಯುವ ನೀರಿನ ಪೂರೈಕೆಯ ಸಮಸ್ಯೆಗೆ ಪಂಚಾಯತ್ ಸಿಬಂದಿಗಳ ಅಸಡ್ಡೆಯೇ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಾರೆ. ಇದು ಬರಿಯ ಆರೋಪವಲ್ಲ ಇದು ವಾಸ್ತವ ಅನ್ನುವುದಕ್ಕೆ ಅಲ್ಲಿನ ಸ್ಥಳದ ಚಿತ್ರಣವೇ ಸಾಕ್ಷಿ.
20 ದಿನಗಳ ಹಿಂದೆ ಕಡೆಯ ಬಾರಿ ಇಲ್ಲಿನ ಪೈಪ್ ನಲ್ಲಿ ನೀರು ಬಂದಿದೆ. ಈ ಬಗ್ಗೆ ಪಂಚಾಯತ್ ಗಮನಕ್ಕೆ ತಂದೂ ಇಷ್ಟೇ ದಿನಗಳಾಗಿವೆ. ಅದರೂ ನೀರು ಬಂದಿಲ್ಲ.
ಹದಗೆಟ್ಟ ರಸ್ತೆ :
ಕೆರ್ನಡ್ಕ ಪರಿಸರದಲ್ಲಿ ಕೇವಲ ನೀರಿನ ಸಮಸ್ಯೆ ಮಾತ್ರವಲ್ಲ ಆ ಭಾಗದ ನಿವಾಸಿಗಳಿಗೆ ಸಂಚಾರ ಯೋಗ್ಯ ರಸ್ತೆಯೂ ಇಲ್ಲ. ಇಡೀ ರಸ್ತೆ ಹದಗೆಟ್ಟು ಕೆರ ಹಿಡಿದಿದೆ. ಇಲ್ಲಿ ಎರಡು ವರ್ಷಗಳ ಹಿಂದೆ ಸಣ್ಣ ಮೋರಿಯೊಂದು ಒಡೆದು ಹೋಗಿದ್ದು, ಈ ತನಕ ಅದನ್ನು ಸರಿಪಡಿಸುವ ಗೋಜಿಗೇ ಹೋಗಿಲ್ಲ. ಹಲವಾರು ಬಾರಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ಈ ವಿಷಯ ತಂದರೂ ಪ್ರಯೋಜನ ಮಾತ್ರ ಶೂನ್ಯ.
