ಮಂಗಳೂರು: ದೇಶದ ವಿವಿಧೆಡೆ ಮತ್ತು ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿದೆ. ಹೀಗಾಗಿ ಜನರು ಬೀಸುವ ದೊಣ್ಣೆಯಿಂದ ತಲೆ ತಪ್ಪಿಸಿಕೊಳ್ಳಲು ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಇಳಿಕೆ ಮಾಡಿದೆ. ಆ ಮೂಲಕ ಬಿಜೆಪಿಯ ಸೋಲು ಜನರ ಗೆಲುವಾಗಿದೆ ಎಂದು ಶಾಸಕ ಯುಟಿ ಖಾದರ್ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸ್ವಾತಂತ್ರ್ಯದ ನಂತರ ಅಭಿವೃದ್ಧಿಯ ಸವಾಲಿನ ಮಧ್ಯೆಯೂ 70 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಪೆಟ್ರೋಲ್ ಬೆಲೆ 70 ರೂ. ಮಾಡಿದ್ದರೆ, ಬಿಜೆಪಿ ಏಳು ವರ್ಷದಲ್ಲೇ 113 ರೂ. ಮಾಡಿ ಸಾಧನೆ ಮಾಡಿದೆ. ಕಾರ್ಪೊರೇಟ್ ಸಂಸ್ಥೆಗಳು, ಉತ್ಪಾದನಾ ವಲಯಕ್ಕೆ ತೆರಿಗೆ ಕಡಿತಗೊಳಿಸಿ, 1.5 ಲಕ್ಷ ಕೋಟಿ ರೂ. ನಷ್ಟ ಮಾಡಿ, ಅದನ್ನು ಜನರ ಮೇಲೆ ಹಾಕಿದೆ ಎಂದು ಆರೋಪಿಸಿದರು.
ಇಂಧನ ದರ ನಿಯಂತ್ರಣ ನಮ್ಮ ಕೈಯಲ್ಲಿಲ್ಲ ಎಂದು ಸ್ವತಃ ವಿತ್ತ ಸಚಿವರೇ ಹೇಳಿದ್ದರು. ಈಗ ಜನರ ಆಕ್ರೋಶಕ್ಕೆ ಹೆದರಿ ತೆರಿಗೆ ಕಡಿತ ಮಾಡಿ ದೊಡ್ಡ ಸಾಧನೆ ಎಂಬಂತೆ ಬಿಂಬಿಸುತ್ತಿದ್ದಾರೆ. ಏಷ್ಯಾದ ಭೂತಾನ್, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ಅಲ್ಲದೆ ಚೀನಾಗಳಲ್ಲಿ ನಮಗಿಂತ ಕಡಿಮೆ ದರಕ್ಕೆ ಪೆಟ್ರೋಲ್, ಡೀಸೆಲ್ ಸಿಗುತ್ತಿದೆ. ನಮ್ಮಲ್ಲೂ ದರ ಇಳಿಕೆಯಾಗಲು ಬಿಜೆಪಿ ಸೋಲಬೇಕು ಎಂಬುದು ಜನಾಭಿಪ್ರಾಯ ಎಂದರು.