ಪುತ್ತೂರು, ನ.7: ಉಪ್ಪಿನಂಗಡಿ ಬಳಿಯ ಇಳಂತಿಲ ಗ್ರಾಮದ ಗುಡ್ಡದಲ್ಲಿ ಹ್ಯಾಂಡ್ ಗ್ರೆನೇಡ್ ಮಾದರಿಯ ಬಾಂಬ್ ಪತ್ತೆಯಾಗಿದೆ.
ಇಳಂತಿಲ ಗ್ರಾಮದ ನಿವಾಸಿ ನಿವೃತ್ತ ಯೋಧ ಜಯಕುಮಾರ್ ನ.6ರ ಸಂಜೆ ವೇಳೆಗೆ ಉಪ್ಪಿನಂಗಡಿಯಿಂದ ತನ್ನ ಮನೆಗೆ ನಡೆದುಕೊಂಡು ತೆರಳುತ್ತಿದ್ದಾಗ ಗುಡ್ಡದಲ್ಲಿ ಗ್ರೆನೇಡ್ ಮಾದರಿಯ ಸ್ಫೋಟಕ ವಸ್ತು ಕಂಡುಬಂದಿದೆ.
ಪ್ಲಾಸ್ಟಿಕ್ ಕವರಿನಲ್ಲಿ ಒಂದು ಗ್ರೆನೇಡ್ ಇದ್ದು ಇತರ ನಾಲ್ಕು ಗ್ರೆನೇಡ್ ಗಳು ಅದೇ ಪರಿಸರದಲ್ಲಿ ಹರಡಿಕೊಂಡ ರೀತಿ ಬಿದ್ದಿತ್ತು.
ಜಯಕುಮಾರ್ ಭಾರತೀಯ ಸೇನೆಯ ಭೂಸೇನಾ ರೆಜಿಮೆಂಟಿನಲ್ಲಿ ಎಸ್ ಸಿ ಓ ಆಗಿ ನಿವೃತ್ತಿ ಹೊಂದಿದ್ದು ಆ ವಸ್ತುಗಳನ್ನು ನೋಡಿ ಗ್ರೆನೇಡ್ ಎಂಬುದನ್ನು ಕಂಡುಕೊಂಡಿದ್ದಾರೆ. ಸ್ಪೋಟಕ ವಸ್ತುಗಳನ್ನು ಕಾಡು ಪ್ರಾಣಿಗಳು ಬೇರೆಡೆಗೆ ಕಚ್ಚಿಕೊಂಡು ಹೋಗಿ ಸಾರ್ವಜನಿಕರಿಗೆ ಅಪಾಯ ಆಗುವುದನ್ನು ಅರಿತ ಜಯಕುಮಾರ್, ಅವುಗಳನ್ನು ತನ್ನ ಮನೆಯ ಅಂಗಳದ ಮೂಲೆಯಲ್ಲಿಟ್ಟು ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಗ್ರೆನೇಡ್ ಸ್ಫೋಟಕಗಳನ್ನು ಯಾರೋ ದುಷ್ಕರ್ಮಿಗಳು ಜನರು ಸಂಚರಿಸುವ ದಾರಿಯ ಬದಿಯಲ್ಲಿ ಹಾಕಿದ್ದು ಈ ಕೃತ್ಯ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಯಕುಮಾರ್ ದೂರು ನೀಡಿದ್ದಾರೆ.
ಈ ಬಗ್ಗೆ ಎಸ್ಪಿ ಋಷಿಕುಮಾರ್ ಸೋನವಾಣೆ ಬಳಿ ಮಾಹಿತಿ ಕೇಳಿದಾಗ, ಅವು ಹ್ಯಾಂಡ್ ಗ್ರೆನೇಡ್ ಎಂಬುದಾಗಿ ಹೇಳಿದ್ದಾರೆ. ತುಕ್ಕು ಹಿಡಿದಿದ್ದು ಹಲವಾರು ವರ್ಷಗಳ ಹಿಂದಿನದ್ದಾಗಿರುವ ಸಾಧ್ಯತೆಯಿದೆ. ಯುದ್ಧ ಸಂದರ್ಭದಲ್ಲಿ ಇದನ್ನು ಬಳಸಲಾಗುತ್ತದೆ. ಕಾಶ್ಮೀರದಲ್ಲಿ ಉಗ್ರರು ಕೂಡ ಇದನ್ನು ಯೋಧರ ವಿರುದ್ಧ ಬಳಕೆ ಮಾಡುತ್ತಾರೆ. ಗ್ರೆನೇಡ್ ಉಪ್ಪಿನಂಗಡಿಗೆ ಹೇಗೆ ಬಂತೆಂಬುದನ್ನು ತನಿಖೆ ನಡೆಸುತ್ತೇವೆ ಎಂದಿದ್ದಾರೆ.