ಬೆಂಗಳೂರು: ಬಹುಕೋಟಿ ರೂಪಾಯಿಯ ಬಿಟ್ ಕಾಯಿನ್ ಹಗರಣ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ್ದು ಅಡಳಿತರೂಢ ಬಿಜೆಪಿಯ ಪ್ರಭಾವಿ ನಾಯಕರು ಹಾಗೂ ಪ್ರಭಾವಿ ನಾಯಕನ ಪುತ್ರನಿದ್ದಾನೆ ಎಂಬ ಆರೋಪವನ್ನು ವಿಪಕ್ಷ ಕಾಂಗ್ರೇಸ್ ಮಾಡಿದೆ. ಆದರೆ ಕಾಂಗ್ರೇಸ್ ಆರೋಪಿಸಿರುವ ಹಾಗೂ ರಾಜ್ಯ ಗೃಹ ಇಲಾಖೆಯ ಮೂಲಗಳನ್ನು ಉಲ್ಲೇಖಿಸಿ ಬಹಿರಂಗವಾಗಿರುವ ಮಾಹಿತಿಯ ಪ್ರಕಾರ ಈ ಬಿಟ್ ಕಾಯಿನ್ ಹಗರಣದಲ್ಲಿ ದ.ಕ ಜಿಲ್ಲೆಯ ಪ್ರಭಾವಿ ನಾಯಕ ಹಾಗೂ ರಾಜ್ಯ ರಾಜಕೀಯದಲ್ಲಿ ‘ನಿಯಂತ್ರಣ’ ಹೊಂದಿರುವ ವ್ಯಕ್ತಿಯೊಬ್ಬರ ಹೆಸರು ಕೇಳಿಬರುತ್ತಿದೆ.
ರಾಜ್ಯ ರಾಜಕೀಯ ಪಡಸಾಲೆಯಲ್ಲಿ ಇವರ ಹೆಸರು ಪದೇ ಪದೇ ಮುನ್ನಲೆಗೆ ಬರುತ್ತಿದ್ದು, ಇದೇ ಹಿನ್ನಲೆಯಲ್ಲಿ ಜಿಲ್ಲೆಯ ಈ ಪ್ರಭಾವಿ ನಾಯಕ ರಾಜ್ಯ ಮಟ್ಟದಲ್ಲಿ ಹೊಂದಿರುವ ಅಯಕಟ್ಟಿನ ಸ್ಥಾನಕ್ಕೆ ಕಂಟಕ ಎದುರಾಗಿದೆ. ಈ ಹಿಂದೆ ಸಂಘಟನೆಯಲ್ಲಿದ್ದೂ ಸಾಧ್ಯ ಬಿಜೆಪಿಯ ರಾಷ್ಟ್ರಮಟ್ಟದ ರಾಜಕಾರಣದಲ್ಲಿ ಬಿಗಿ ಹಿಡಿತ ಹೊಂದಿರುವ ವ್ಯಕ್ತಿಯೊಬ್ಬರ ಕೃಪಕಟಾಕ್ಷದಿಂದ ಈ ಪ್ರಭಾವಿ ನಾಯಕನಿಗೆ ಪಕ್ಷದ ರಾಜ್ಯ ಘಟಕದ ನಿರ್ಣಾಯಕ ಹುದ್ದೆ ದೊರಕಿತ್ತು.
ಬಿಟ್ ಕಾಯಿನ್ ಹಗರಣದ ಸೂತ್ರದಾರ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಬಗ್ಗೆ ವಿದೇಶದ ಹಾಗೂ ಕೇಂದ್ರ ತನಿಖಾ ತಂಡಗಳು ಮಾಹಿತಿ ಕಲೆಹಾಕುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಅದರಲ್ಲೂ ಅಮೆರಿಕದ ತನಿಖಾ ಸಂಸ್ಥೆ ಫೆಡರಲ್ ಬ್ಯೂರೂ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ತಂಡ ಬೆಂಗಳೂರಿಗೆ ಬಂದಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇದನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ನಿರಾಕರಣೆ ಮಾಡಿದ್ದಾರೆ. ಈ ದಂಧೆಯಲ್ಲಿ ಹ್ಯಾಕರ್ ಶ್ರೀಕಿ ಕೋಟ್ಯಂತರ ರೂಪಾಯಿ ಹಣ ಗಳಿಸಿದ್ದಾನೆ ಎಂಬ ಮಾಹಿತಿಗಳು ಲಭ್ಯವಾಗುತ್ತಿವೆ.
ಡ್ರಗ್ ಪ್ರಕರಣ ತನಿಖೆ ನಡೆಸುತಿದ್ದ ಸಿಸಿಬಿ ಪೊಲೀಸರು ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಯನ್ನು ಬಂಧಿಸಿದ್ದರು. ಈತನ ವಿಚಾರಣೆ ನಡೆಸುತಿದ್ದ ಪೊಲೀಸರ ಮುಂದೆ ಕೆಲವು ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದ. ವೆಬ್ಸೈಟ್ಗಳ ಹ್ಯಾಕ್ ಮಾಡುತಿದ್ದ ಮಾಹಿತಿಯನ್ನು ಹೊರಗೆಡವಿದ್ದ.
ವಿದೇಶಿ ಆ್ಯಪ್ ಸೇರಿದಂತೆ ಸರ್ಕಾರಿ ಆ್ಯಪ್ ಸಹ ಶ್ರೀಕಿ ಹ್ಯಾಕ್ ಮಾಡುತ್ತಿದ್ದ. ಈ ಕೇಸ್ ಸಂಬಂಧ ಸಿಸಿಬಿ, ಶ್ರೀಕಿ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿತ್ತು. ಬಳಿಕ ತನಿಖೆ ವೇಳೆ ಮತ್ತಷ್ಟು ಮಾಹಿತಿ ಬಯಲಾಗಿತ್ತು. ಈತ ಅಂತಾರಾಷ್ಟ್ರೀಯ ವೆಬ್ಸೈಟ್, ಪೋಕರ್ ಗೇಮ್ ಹಾಗೂ ಕ್ರಿಪ್ಟೋ ಕರೆನ್ಸಿಗಳಾದ ಬಿಟ್ ಕಾಯಿನ್, ವೈಎಫ್ಐ, ಇಥೆರಿಯಂ ಖಾತೆಗಳನ್ನು ಹ್ಯಾಕ್ ಮಾಡಿದ್ದ ಎಂದು ತಪ್ಪೊಪ್ಪಿಕೊಂಡಿದ್ದ. ಅಲ್ಲದೆ ಶ್ರೀಕಿ ಬಳಿ ಇದ್ದ ಸುಮಾರು 9 ಕೋಟಿ ರೂಪಾಯಿ ಮೌಲ್ಯದ 31 ಬಿಟ್ ಕಾಯಿನ್ ಜಪ್ತಿ ಮಾಡಲಾಗಿತ್ತು.
ಈ ಶ್ರೀಕಿ ಹಲವು ರಾಜಕಾರಣಿಗಳನ್ನು ಹಣದ ಆಮೀಷವೊಡ್ಡಿ ಇದಕ್ಕಾಗಿ ಬಳಸಿಕೊಂಡಿದ್ದು, ಅವರುಗಳ ಪೈಕಿ ಓರ್ವ ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾವಿ ರಾಜಕಾರಣಿ ಎನ್ನುವುದು ರಾಜಕೀಯದಲ್ಲಿ ಹೊಸ ಸುದ್ದಿ.
ಈ ಪ್ರಭಾವಿ ರಾಜಕೀಯ ವಿರೋಧಿ ಬಣ ಈ ವಿಚಾರವನ್ನು ಹೈ ಕಮಾಂಡ್ ಗೆ ಮುಟ್ಟಿಸಿದೆ. ಸ್ವತಃ ಪ್ರಧಾನಿಯವರ ಗಮನಕ್ಕೂ ತರಲಾಗಿದೆ ಎಂದು ಹೇಳಲಾಗುತ್ತಿದೆ. ಇದೇ ಹಿನ್ನಲೆಯಲ್ಲಿ ಜಿಲ್ಲೆಯ ಆ ಪ್ರಭಾವಿ ರಾಜಕಾರಣಿಯ ಪದಚ್ಯುತಿ ಸನ್ನಿಹಿತವಾಗಿದೆ ಎಂದು ಹೇಳಲಾಗುತ್ತಿದೆ.
ಜಿಲ್ಲೆಯ ಶಾಸಕರ ಕೆಲಸ : ಆಪ್ತ ವಲಯ
ಹೆಸರು ಕೇಳಿ ಬಂದಿರುವ ಪ್ರಭಾವಿ ಮುಖಂಡರ ಆಪ್ತ ವಲಯದ ಮಾಹಿತಿಯಂತೆ ಈ ನಾಯಕನ ಸಿಲುಕಿಸಿ ಹಾಕಲು ಅವರದೇ ಪಕ್ಷದ ದಕ್ಷಿಣ ಕನ್ನಡದ ಇಬ್ಬರು ಶಾಸಕರು ವಿರೋಧ ಪಕ್ಷಕ್ಕೆ ಮಾಹಿತಿ ನೀಡಿದ್ದಾರೆ ಎನ್ನುತ್ತಾರೆ. ಇಬ್ಬರು ಶಾಸಕರು ಸಂಸತ್ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದು, ರಾಜ್ಯದಲ್ಲಿ ಬಿಜೆಪಿಯ ಮತ್ತೊಂದು ಬಣದೊಂದಿಗೆ ಗುರುತಿಸಿಕೊಂಡದವರಾಗಿದ್ದಾರೆ ಎಂದು ಆಪ್ತ ವಲಯದಲ್ಲಿ ಚರ್ಚೆ ಆಗುತ್ತಿದೆ.