ಮಂಗಳೂರು: ನ 6 : ಕೆಲ ದಿನಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಕರಾವಳಿ ಭಾಗದಲ್ಲಿ ಮನೆ ಮಾತಾಗಿರುವ ಪ್ರಖ್ಯಾತ ಐಸ್‌ಕ್ರೀಂ ಬ್ರ್ಯಾಂಡ್ ‘ಐಡಿಯಲ್ ಐಸ್ ಕ್ರೀಂ’ ಸ್ಥಾಪಕರಾದ ಎಸ್. ಪ್ರಭಾಕರ ಕಾಮತ್ (79) ಶನಿವಾರ ಬೆಳಗ್ಗೆ ಇಹಲೋಕ ತ್ಯಜಿಸಿದರು. ಅವರು ಪತ್ನಿ, ಪುತ್ರ ಐಡಿಯಲ್ ಐಸ್ ಕ್ರೀಂ ಮುಖ್ಯಸ್ಥ ಮುಕುಂದ ಕಾಮತ್ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಅ.28 ರಂದುಗುರುವಾರ ರಾತ್ರಿ 8.45ರ ಸುಮಾರಿಗೆ ಪ್ರಭಾಕರ ಕಾಮತ್ ಅವರು ಬಿಜೈ ಕಾಪಿಕಾಡ್‌ನ 1ನೇ ಅಡ್ಡರಸ್ತೆಯಲ್ಲಿ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕೆಎಸ್‌ಆರ್‌ಟಿಸಿ ಕಡೆಯಿಂದ ಬಿಜೈ ಕಾಪಿಕಾಡ್ ಕಡೆಗೆ ಅತಿ ವೇಗದಿಂದ ಬಂದ ಸ್ಕೂಟರ್ ಢಿಕ್ಕಿ ಹೊಡೆದಿತ್ತು. ಪರಿಣಾಮವಾಗಿ ಕಾಮತ್ ಅವರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಮುಂಜಾನೆ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.
1975ರಲ್ಲಿ ಐಡಿಯಲ್ ಐಸ್ ಕ್ರೀಂ ಪಾರ್ಲರನ್ನು ಎಸ್. ಪ್ರಭಾಕರ ಕಾಮತ್ ಆರಂಭಿಸಿದ್ದರು. ಸ್ವತ: ಐಸ್ ಕ್ರೀಂ ತಯಾರಿ ಕಲಿತಿದ್ದ ಅವರು 14 ಪ್ಲೇವರ್ ಗಳೊಂದಿಗೆ ಐಡಿಯಲ್ ಪಾರ್ಲರ್ ತೆರೆದಿದ್ದರು . ಆಗ ಅಷ್ಟು ವೆರೈಟಿಯ ಐಸ್ ಕ್ರೀಂಗಳು ಅಲ್ಲಿ ಮಾತ್ರ ಲಭ್ಯವಿದ್ದವು.

ಸ್ವಂತ ಪ್ರಯೋಗ ಹಾಗೂ ಹಲವು ಆವಿಷ್ಕಾರಗಳಿಂದಾಗಿ ಐಡಿಯಲ್ ಐಸ್‌ಕ್ರೀಂ ಕೆಲವೇ ವರ್ಷಗಳಲ್ಲಿ ಮನೆ ಮಾತಾಯಿತು. ಪ್ರಭಾಕರ ಕಾಮತ್ ಅವರನ್ನು ಪ್ರೀತಿಯಿಂದ ಜನರು ‘ಪಬ್ಬಾ ಮಾಮ್’ ಎಂದೂ ಕರೆಯುತ್ತಿದ್ದು. ಅದೇ ಹೆಸರಿನಲ್ಲಿ (ಪಬ್ಬಾಸ್) ಮಂಗಳೂರಿನಲ್ಲಿ ಐಸ್ ಕ್ರೀಂ ಪಾರ್ಲರ್ ಕೂಡಾ ಇದೆ