ಪುತ್ತೂರು: ಭಾಷೆ ಉಳಿದಾಗ ಸಂಸ್ಕೃತಿಯ ಉಳಿವು ಸಾಧ್ಯವಾಗಿದ್ದು, ಭಾಷೆ ಅಳಿದಲ್ಲಿ ಅಲ್ಲಿನ ಸಂಸ್ಕೃತಿ ಉಳಿಯಲು ಸಾಧ್ಯವಿಲ್ಲ. ತುಳುನಾಡಿನಲ್ಲಿ ಹಲವು ಭಾಷೆಗಳ ಸಮ್ಮಿಲನವಿದ್ದು, ಭಾಷಾ ಸಾಮರಸ್ಯವೇ ಇಲ್ಲಿನ ಜನರ ಒಗ್ಗಟ್ಟಿನ ಸಂಕೇತ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಒಡಿಯೂರು ಶ್ರೀ ಷಷ್ಟಬ್ದ್ಯ ಸಂಭ್ರಮ ಸಮಿತಿ ಪುತ್ತೂರು, ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಇವುಗಳ ಸಹಯೋಗದಲ್ಲಿ ಸೋಮವಾರ ಪುತ್ತೂರಿನ ಬಂಟರ ಭವನದಲ್ಲಿ ನಡೆದ `ತುಳುವೆರೆ ಕೂಡ್ಕಟ್ಟ್-ತುಳು ನಾಡ ಐಸಿರ-೨೦೨೧’ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿದರು.
ಕನ್ನಡ ಮತ್ತು ತುಳು ಭಾಷೆಯು ಪರಸ್ಪರ ಜೊತೆಯಾಗಿದ್ದು, ಇಲ್ಲಿನ ಮಾತ್ರ್ ಭಾಷೆಯ ಹೆಮ್ಮೆ ಮಹತ್ವದ್ದಾಗಿದೆ. ಭಾಷಾ ಆವಿಷ್ಕಾರ ಅಲ್ಲಲ್ಲಿ ನಡೆಯುತ್ತಿರುವುದು ಸಹಜವಾಗಿದೆ. ಸಂಘಟಿತ ಪ್ರಯತ್ನಗಳಿಂದ ಭಾಷೆಯನ್ನು ಉಳಿಸಿ ಬೆಳೆಸಲು ಸಾಧ್ಯವಿದೆ. ತುಳು ಭಾಷೆಯು ತನ್ನದೇ ಆಗಿರುವ ಲಿಪಿಯನ್ನು ಹೊಂದಿದ್ದು, ತುಳು ಲಿಪಿಯು ವಿಕಸನಗೊಂಡು ಮಲಯಾಳಂ ಲಿಪಿಯಾಗಿದೆ. ತುಳುವರ ಇಚ್ಚಾಶಕ್ತಿಯ ಕೊರತೆಯಿಂದಾಗಿ ಇನ್ನೂ ತುಳು ಭಾಷೆ ೮ನೇ ಪರಿಚ್ಚೇದಕ್ಕೆ ಸೇರ್ಪಡೆಯಾಗಿಲ್ಲ. ನಮ್ಮಲ್ಲಿ ಇಚ್ಚಾಶಕ್ತಿಯೊಂದಿಗೆ ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿ ಒಟ್ಟಾದಲ್ಲಿ ಅತಿಶೀಘ್ರದಲ್ಲಿ ತುಳು ಭಾಷೆಯು ೮ನೇ ಪರಿಚ್ಚೇದಕ್ಕೆ ಸೇರಲು ಸಾಧ್ಯ ಎಂದು ಹೇಳಿದರು.



ವೇದಿಕೆಯಲ್ಲಿ ಒಡಿಯೂರು ಸ್ವಾಮೀಜಿ ಅವರಿಗೆ ಗುರುವಂದನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಚಿಕ್ಕಪ್ಪ ನಾಯಕ್ ಅರಿಯಡ್ಕ, ಜಯವರ್ಮ ಜೈನ್ ನೂಜಿಬಾಳ್ತಿಲ, ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು, ರಾಜೇಂದ್ರ ಕೋಡಿಂಬಾಡಿ, ಯಡ್ತೂರು ರಾಜೀವ ಶೆಟ್ಟಿ, ಚಂದ್ರಹಾಸ ರೈ ಮಾಡಾವು, ಡಾ. ರಘು ಬೆಳ್ಳಿಪ್ಪಾಡಿ, ಇಸ್ಮಾಯಿಲ್ ಕೆಲಿಂಜ ಮತ್ತು ನೇಮು ಪರವ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.




