ಪುತ್ತೂರು: ಇಲ್ಲಿನ ಬಡಗನ್ನೂರಿನ 17 ರ ಹರೆಯದ ದಲಿತ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿಯ ಜಾಮೀನು ಅರ್ಜಿಯನ್ನು ಪುತ್ತೂರಿನ 5ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ .2 ರಂದು ತಿರಸ್ಕರಿಸಿದೆ.
ಪುತ್ತೂರು ತಾಲೂಕು ಪಡವನ್ನೂರು ಗ್ರಾಮದ ನಿವಾಸಿ ಕುದ್ಕಾಡಿ ನಾರಾಯಣ ರೈ (73) ಜಾಮೀನು ತಿರಸ್ಕೃತಗೊಂಡ ಆರೋಪಿ. ನಾಟಕೀಯ ಬೆಳವಣಿಗೆಯೊಂದರಲ್ಲಿ ಇವರು ನ .27 ರಂದು ಮಧ್ಯಾಹ್ನ ತನ್ನ ವಕೀಲರ ಜತೆ ಪುತ್ತೂರಿನ ನ್ಯಾಯಾಲಯಕ್ಕೆ ಆಗಮಿಸಿ ನ್ಯಾಯಪೀಠದ ಮುಂದೆ ಶರಣಾರಾಗಿದ್ದರು. ಅಂದು ಅವರು ಸಲ್ಲಿಸಿದ ಮಧ್ಯಾಂತರ ಜಾಮೀನು ಅರ್ಜಿ ವಜಾಗೊಳಿಸಿದ ನ್ಯಾಯಾಲಯವು ಆರೋಪಿಯನ್ನು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಕೊಟ್ಟಿತ್ತು.
ಈ ಹಿನ್ನಲೆಯಲ್ಲಿ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು ಇದರ ವಿಚಾರಣೆ ನಡೆಸಿದ ಪುತ್ತೂರಿನ 5ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವೂ ಈ ಅರ್ಜಿಯನ್ನು ನ. 2 ರಂದು ತಿರಸ್ಕರಿಸಿದೆ. ಹೀಗಾಗಿ ಅವರ ಬಂಧನ ಇನ್ನಷ್ಟು ಕಾಲ ಮುಂದುವರಿಯಲಿದೆ.

ಏನಿದು ಪ್ರಕರಣ ?
ಸಂತ್ರಸ್ತ ಬಾಲಕಿಯೂ ಸೆ .5 ರಂದು ಮಗುವಿಗೆ ಜನ್ಮ ನೀಡಿದ್ದು ಈ ಬಗ್ಗೆ ಪೊಕ್ಸೋ ಕಾಯ್ದೆಯಡಿ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಇಬ್ಬರನ್ನು ವಿಚಾರಣೆ ನಡೆಸಿದ ಪೊಲೀಸರು ಒರ್ವನನ್ನು ಬಂಧಿಸಿ ಇನ್ನೊಬ್ಬನನ್ನು ಬಿಟ್ಟು ಕಳುಹಿಸಿದ್ದರು ಎನ್ನಲಾಗಿದೆ. ಆದರೇ ಇವರಿಬ್ಬರು ನಿಜವಾದ ಆರೋಪಿಗಳಲ್ಲ. ತಾನು ಕೆಲಸಕ್ಕೆ ಹೋಗುತ್ತಿದ್ದ ತೋಟದ ಮನೆ ಯಜಮಾನ ನಾರಾಯಣ ರೈ ಕುದ್ಕಾಡಿ ಈ ಕೃತ್ಯ ಎಸಗಿರುವುದಾಗಿ ಬಾಲಕಿಯೂ ನ್ಯಾಯಾಲಯದಲ್ಲಿ 164ರಡಿ ಹೇಳಿಕೆ ನೀಡಿದ್ದರು. ಅಲ್ಲದೇ ಈ ವಿಚಾರವನ್ನು ಬಹಿರಂಗಪಡಿಸದಂತೆ ಜೀವ ಬೆದರಿಕೆ ಕೂಡ ಒಡ್ಡಿದ್ದರು ಎಂದು ಆರೋಪಿಸಿದ್ದರು.
ಅದಾದ ಬಳಿಕ ತಲೆಮರೆಸಿಕೊಂಡಿದ್ದ ನಾರಾಯಣ ರೈಯವರು ತಮ್ಮ ವಕೀಲರ ಮೂಲಕ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಏತನ್ಮಧ್ಯೆ ಅವರ ಬಂಧನಕ್ಕೆ ಒತ್ತಾಯಿಸಿ ದಲಿತ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದವು. ವಿಪಕ್ಷ ಕಾಂಗ್ರೇಸ್ ಕೂಡ ಅವರ ಬಂಧನಕ್ಕೆ ಅಗ್ರಹಿಸಿತ್ತು. ಅಲ್ಲದೇ, ಅವರನ್ನು ರಾಜಕೀಯ ಪ್ರಭಾವ ಬಳಸಿ ಬಂಧನದಿಂದ ರಕ್ಷಿಸಲಾಗುತ್ತಿದೆ ಎಂದು ಆರೋಪಿಸಿತ್ತು. ಎರಡು ವಾರಗಳ ಹಿಂದೆ ಅವರು ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯೂ ವಜಾಗೊಂಡಿತ್ತು.