ನ 3 : ಕಳೆದ 3 ವರ್ಷದಿಂದ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳ ಮೇಲೆ ಆಟೋ ರಿಕ್ಷಾ ಚಾಲಕನೊಬ್ಬ ನಿರಂತರ ಅತ್ಯಾಚಾರ ಎಸಗಿದ. ಆಕೆಯ ನಗ್ನ ಪೋಟೊ ಆಕ್ರಮವಾಗಿ ಇರಿಸಿಕೊಂಡು, ಪದೇ ಪದೇ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ನ. 2 ರಂದು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ
ಬೆಳ್ತಂಗಡಿ ಹೊಸಮಜಲು ನಿವಾಸಿ, ನೆಲ್ಯಾಡಿಯಲ್ಲಿ ರಿಕ್ಷಾ ಚಾಲಕನಾಗಿರುವ ನೌಫಲ್ ಆರೋಪಿ. ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ನೇಲ್ಯಡ್ಕ ನಿವಾಸಿ ದೂರು ನೀಡಿದ ಸಂತ್ರಸ್ತ ಬಾಲಕಿ. 2018ರ ಫೆಬ್ರವರಿ ತಿಂಗಳಿನಲ್ಲಿ ಮೊದಲ ಬಾರಿ ಆಕೆಯ ಮೇಲೆ ಅತ್ಯಾಚಾರ ನಡೆದಿದ್ದು ಆಗ ಸಂತ್ರಸ್ತೆಯೂ ನೆಲ್ಯಾಡಿಯ ಖಾಸಗಿ ವಿದ್ಯಾಸಂಸ್ಥೆಯೊಂದರ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದಳು. ಅದಕ್ಕೂ ಮುಂಚೆ, ಆರೋಪಿ ನೌಫಲ್ ವಿದ್ಯಾರ್ಥಿನಿಯನ್ನು ಪರಿಚಯ ಮಾಡಿಕೊಂಡು ಆಕೆಯ ಮೊಬೈಲ್ ನಂಬರ್ ಪಡೆದುಕೊಂಡಿದ್ದ. ಬಳಿಕ ಪದೇ ಪದೇ ಆಕೆಗೆ ಕರೆ ಮಾಡಿ ಆತ್ಮೀಯವಾಗಿ ಮಾತನಾಡುತ್ತಿದ್ದ ಎಂದು ಆರೋಪಿಸಲಾಗಿದೆ.
2018ರ ಫೆ. 15 ರಂದು ಸಂತ್ರಸ್ತೆಯೂ ತನ್ನ ಮನೆಯಲ್ಲಿ ಒಬ್ಬಳೇ ಇದ್ದ ವೇಳೆ ಹೊಂಚು ಹಾಕಿ ಬಂದು ಆರೋಪಿಯೂ ಆಕೆಯನ್ನು ಬಲವಂತವಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಅಲ್ಲದೆ, ಇದೇ ವೇಳೆ ಆಕೆಯ ನಗ್ನ ಪೋಟೊಗಳನ್ನು ತನ್ನ ಮೊಬೈಲ್ ನಲ್ಲಿ ಚಿತ್ರಿಕರಿಸಿರುವ ಆರೋಪಿಯೂ ಕೃತ್ಯವನ್ನು ಬಹಿರಂಗ ಪಡಿಸಿದರೆ, ಬೆತ್ತಲೆ ಫೊಟೋಗಳನ್ನು ಸ್ನೇಹಿತರಿಗೆ ಕಳುಹಿಸಿ ಮಾರ್ಯಾದೆ ತೆಗೆಯುವುದಾಗಿ ಬೆದರಿಸಿದ್ದಾನೆ. ಅದಾದ ಬಳಿಕವೂ ಸಂತ್ರಸ್ತೆಯೂ ಮನೆಯಲ್ಲಿ ಒಬ್ಬಳೇ ಇದ್ದ ವೇಳೆ ಹಳೇ ನಗ್ನ ಪೊಟೋ ತೋರಿಸಿ ಬೆದರಿಕೆ ಒಡ್ಡಿ ಅತ್ಯಾಚಾರ ಎಸಗಿದ್ದಾನೆ ಎಂದು ಬಾಲಕಿಯೂ ಆರೋಪಿಸಿದ್ದಾಳೆ.
2020 ರಲ್ಲಿ ಸಂತ್ರಸ್ತೆಯೂ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಮಂಗಳೂರಿನ ಕಾಲೇಜೊಂದಕ್ಕೆ ತೆರಳಿದ್ದು ಅಲ್ಲಿ ಸಂಬಂಧಿಕರ ಮನೆಯಲ್ಲಿ ವಾಸ್ತವ್ಯ ಹೂಡಿದ್ದಳು. ಆಗಲೂ, ಆಕೆಗೆ ಕರೆ ಮಾಡಿ ಒಬ್ಬಳೇ ಸಿಗುವಂತೆ ಒತ್ತಾಯಿಸಿದ್ದು ಇದಕ್ಕೆ ನಿರಾಕರಿಸಿದಾಗ ಬೆತ್ತಲೆ ಚಿತ್ರಗಳನ್ನು ಬಹಿರಂಗಗೊಳಿಸುವುದಾಗಿ ಬ್ಲ್ಯಾಕ್ ಮೇಲ್ ಮಾಡುತಿದ್ದ. 2021 ರ ಫೆ 20 ರಂದು ಮಂಗಳೂರಿಗೆ ಕಾರಿನಲ್ಲಿ ಆಗಮಿಸಿದ ಆರೋಪಿಯೂ, ಮಾಲ್‌ಗೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ಸುರತ್ಕಲ್‌ನ ವಸತಿಗೃಹವೊಂದಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ.
ನಿನ್ನೆ ( ನ.2ರಂದು) ಬೆಳಿಗ್ಗೆ ನೌಫಲ್ ಮತ್ತೆ ಕರೆ ಮಾಡಿ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಿದ್ದು ಇದರಿಂದ ಬೇಸತ್ತು ಬಾಲಕಿ ಈ ವಿಚಾರವನ್ನು ತಂದೆ ತಾಯಿಗೆ ತಿಳಿಸಿದ್ದಾಳೆ. ಆ ಬಳಿಕ ಅದೇ ದಿನ ಸಂತ್ರಸ್ತೆಯೂ, ತನ್ನ ಒಪ್ಪಿಗೆಯಿಲ್ಲದೆ ಆರೋಪಿ ನೌಫಲ್ ಪದೇ ಪದೇ ಬೆದರಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾಳೆ.