ಹಾವೇರಿ: ಬಿಜೆಪಿಯ ಹಿರಿಯ ನಾಯಕ ಹಾನಗಲ್ ಶಾಸಕ ಸಿಎಂ ಉದಾಸಿ ಹಾಗೂ ಸಿಂದಗಿಯ ಜೆಡಿಎಸ್ ಶಾಸಕ ಮನಗೂಲಿ ಮಲ್ಲಪ್ಪ ಚನ್ನವೀರಪ್ಪ ನಿಧನ ನಂತರ ತೆರವಾದ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಭದ್ರಕೋಟೆ ಹಾನಗಲ್ ನ್ನು ಕಾಂಗ್ರೇಸ್ ಗೆದ್ದರೆ ಜೆಡಿಎಸ್ ಕ್ಷೇತ್ರವಾಗಿದ್ದ ಸಿಂದಗಿ ಬಿಜೆಪಿಯ ಪಾಲಾಗಿದೆ. ಎರಡೂ ಕ್ಷೇತ್ರಗಳಲ್ಲೂ ಜೆಡಿಎಸ್ ಹೀನಾಯವಾಗಿ ಸೋತಿದೆ.
ಹಾನಗಲ್ ಪಲಿತಾಂಶ : ರಾಜ್ಯದ ಉಪಚುನಾವಣೆಯಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಜಯ ಗಳಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತವರು ಜಿಲ್ಲೆಯ ಕ್ಷೇತ್ರವಾದ ಹಾನಗಲ್ ಬಿಜೆಪಿ ಮುಖಭಂಗ ಅನುಭವಿಸಿದೆ.
ಗೆಲುವು ಸಾಧಿಸುವ ಫೇವರೆಟ್ ಆಗಿದ್ದ ಬಿಜೆಪಿಗೆ ಹಾನಗಲ್ ಕ್ಷೇತ್ರದ ಮತದಾರರು ಶಾಕ್ ನೀಡಿದ್ದಾರೆ. ಕಡೆಯ ಕ್ಷಣದಲ್ಲಿ ಅಚ್ಚರಿಯೆಂಬಂತೆ ಟಿಕೆಟ್ ಪಡೆದಿದ್ದ ಶಿವರಾಜ್ ಸಜ್ಜನರ್ ಕಮಲ ಅರಳಿಸುವಲ್ಲಿ ವಿಫಲರಾಗಿದ್ದಾರೆ. ಸ್ವತಃ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಂಪುಟದ ಸಚಿವರು ಬಂದು ಪ್ರಚಾರ ಮಾಡಿದರೂ ಮತದಾರರು ಮಾನೆ ಕೈ ಹಿಡಿದಿದ್ದಾರೆ.

19 ಸುತ್ತಿನ ಮತ ಎಣಿಕೆಯ ಬಳಿಕ ಕಾಂಗ್ರೆಸ್ ನ ಶ್ರೀನಿವಾಸ ಮಾನೆ 87,113 ಮತಗಳನ್ನು ಪಡೆದರೆ, ಬಿಜೆಪಿಯ ಅಭ್ಯರ್ಥಿಶಿವರಾಜ ಸಜ್ಜನರ 79,515 ಮತಗಳನ್ನಷ್ಟೇ ಪಡೆದರು. ಜೆಡಿಎಸ್ ನ ನಿಯಾಜ್ ಶೇಖ್ ಪಾಲಿಗೆ ಕೇವಲ 921 ಮತಗಳಷ್ಟೇ ಲಭ್ಯವಾಯಿತು.
ಸಿಂದಗಿಯಂತೆ ಹಾನಗಲ್ ನಲ್ಲೂ ಜೆಡಿಎಸ್ ಠೇವಣಿ ಕಳೆದುಕೊಂಡಿತು.
ಸಿಂದಗಿ ಪಲಿತಾಂಶ: ಸಿಂದಗಿ ವಿಧಾನಸಭೆ ಉಪಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 31088 ಮತಗಳ ಭಾರೀ ಅಂತರದಿಂದ ಐತಿಹಾಸಿಕ ವಿಜಯ ಸಾಧಿಸಿದ್ದಾರೆ.
ಜೆಡಿಎಸ್ ಶಾಸಕರಾಗಿದ್ದ ಎಂ.ಸಿ.ಮನಗೂಳಿ ಅವರ ಪುತ್ರ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಹೀನಾಯ ಸೋಲು ಅನುಭವಿಸಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ಐದನೇ ಬಾರಿ ಕ್ಷೇತ್ರದಲ್ಲಿ ಸತತ ಸೋಲು ಅನುಭವಿಸಿದೆ.
ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಅವರ ಪಕ್ಷ ನಾಯಕರು ಕ್ಷೇತ್ರದಲ್ಲಿ ಹತ್ತಾರು ದಿನ ಠಿಕಾಣಿ ಹೂಡಿದ್ದರೂ ಜೆಡಿಎಸ್ ಪಕ್ಷ ಕ್ಷೇತ್ರವನ್ನು ಕಳೆದು ಕೊಂಡಿದೆ. ಜೊತೆಗೆ ಅಭ್ಯರ್ಥಿ ನಾಜಿಯಾ ಅಂಗಡಿ ಠೇವಣಿ ಕಳೆದುಕೊಂಡು ಮುಖಭಂಗ ಅನುಭವಿಸಿದೆ.
ಬಿಜೆಪಿಯ ರಮೇಶ ಭೂಸನೂರ 93380 ಮತಗಳನ್ನು ಪಡೆದರೆ, ಕಾಂಗ್ರೆಸ್ ನ ಅಶೋಕ ಮನಗೂಳಿ 62292 ಮತಗಳನ್ನು ಪಡೆದರು. ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿಗೆ ಅವರು ಕೇವಲ 4321 ಮತಗಳನ್ನಷ್ಟೇ ಪಡೆದರು.