ಕಪ್ಪು ಬಂಗಾರ ಎಂದೇ ಕರೆಯಲ್ಪಡುವ ವಾಣಿಜ್ಯ ಬೆಳೆ ಕರಿಮೆಣಸು ಬೆಳೆಗಾರರ ಮುಖದಲ್ಲಿ ಹಲವು ವರ್ಷಗಳ ಬಳಿಕ ಮತ್ತೆ ಕಿರುನಗೆ ಕಾಣಿಸಿದೆ. ಒಂದೇ ತಿಂಗಳಲ್ಲಿ ಕಾಳು ಮೆಣಸಿನ ಬೆಲೆಯಲ್ಲಿ ರೂ 100 ಜಂಪ್ ಆಗಿದೆ. ಬಹುತೇಕ 6-7 ವರ್ಷಗಳ ಬಳಿಕ ಈ ವಾರದ ಆರಂಭದಲ್ಲಿ ಅದರ ಧಾರಣೆ ರೂ. 500 ರೂಪಾಯಿ ತಲುಪಿದೆ. ಇದು ಬೆಳೆ ಹಾಗೂ ಬೆಲೆ ನಷ್ಟದಿಂದ ಕಂಗಾಲಾಗಿರುವ ಕೃಷಿಕರಿಗೆ ಸ್ವಲ್ಪಮಟ್ಟಿನ ನೆಮ್ಮದಿ ತರಿಸಿದೆ.
ಏಳೆಂಟು ವರ್ಷ ಹಿಂದೆ ಕರಿಮೆಣಸು ಧಾರಣೆ 750 ರೂ.ವರೆಗೂ ಏರಿಕೆ ಕಂಡು ಸಾರ್ವಕಾಲಿಕ ದಾಖಲೆ ಬರೆದಿತ್ತು. ಅಂದು ಐದಾರು ತಿಂಗಳ ಕಾಲ ಈ ಧಾರಣೆ ಇದ್ದುದರಿಂದ ಹೆಚ್ಚಿನ ರೈತರು ಈ ಬೆಳೆಗೆ ಅನುರಕ್ತರಾಗಿದ್ದರು. ಹಾಗಾಗಿ ಇದನ್ನು ಬೆಳೆಯುವ ಕೃಷಿಕನ ಸಂಖ್ಯೆ ಹಾಗೂ ಪ್ರದೇಶವೂ ಹಿಗ್ಗಿತ್ತು. ಅದಾದ ಬಳಿಕ ಆದರ ಧಾರಣೆ ಹಠಾತ್ ಕುಸಿದು 250 ರೂ.ಗೆ ಇಳಿದಿತ್ತು. ಇದು ಬೆಳೆಗಾರರನ್ನು ಕಂಗಾಲು ಮಾಡಿತ್ತು.
ಕಳೆದರೆಡು ವರ್ಷಗಳಿಂದ 380 ರೂ.ನಿಂದ 390 ರೂ. ಆಸುಪಾಸಿನಲ್ಲೇ ಸ್ಥಿರತೆ ಕಾಯ್ದುಕೊಂಡಿದ್ದ ಬೆಲೆ ಈ ಸೆಪ್ಟಂಬರ್ ತಿಂಗಳಿನಿಂದ ಏರುಗತಿಯನ್ನು ಪಡೆಯಿತು.ಕರಿಮೆಣಸು ಧಾರಣೆ ಕಳೆದೊಂದು ತಿಂಗಳಿನಿಂದ ದೊಡ್ಡ ಜಂಪ್ ಕಂಡಿದೆ. ಸೆಪ್ಟೆಂಬರ್ ಅಂತ್ಯದಲ್ಲಿ 400 ರೂ. ಗಡಿ ದಾಟಿದ ಧಾರಣೆ ಎರಡು ವಾರದ ಹಿಂದೆ ಖಾಸಗಿ ಮಾರುಕಟ್ಟೆಯಲ್ಲಿ 430ರಿಂದ 435 ರೂಗೆ ತಲುಪಿತ್ತು. ಕಳೆದ ಎರಡು ವಾರದಲ್ಲಿ ಮತ್ತೆ 65 ರೂ ಜಿಗಿತ ಕಂಡಿದೆ.
ಕರಿಮೆಣಸಿನ ಅತೀ ದೊಡ್ಡ ಉತ್ಪಾದಕ ದೇಶವಾದ ವಿಯೆಟ್ನಾಂ ಇತ್ಯಾದಿ ದೇಶಗಳಿಂದ ಭಾರತಕ್ಕೆ ಕರಿಮೆಣಸು ಕಳ್ಳಮಾರ್ಗದಲ್ಲಿ ಬರುತಿತ್ತು. ಅಲ್ಲಿ ಈಗಲೂ ಕಾಳು ಮೆಣಸು ಧಾರಣೆ ಭಾರತದ ರೂಪಾಯಿಯಲ್ಲಿ ರೂ.200 ರಿಂದ 220ರ ಅಸುಪಾಸಿನಲ್ಲಿಯೇ ಇದೆ. ಇದರ ಗುಣಮಟ್ಟ ಕಳಪೆಯಾಗಿದ್ದರೂ ದೇಸಿ ವ್ಯಾಪರಸ್ಥರು ಕಾರ್ಪೋರೇಟ್ ಕಂಪೆನಿಗಳು ಈ ಕರಿಮೆಣಸನ್ನೆ ಖರೀದಿಸುತಿದ್ದವು. ವಿಯೆಟ್ನಾಂನಿಂದ ಕರಿಮೆಣಸು ಅಮದಿಗೆ ಭಾರತದಲ್ಲಿ ಶುಂಕ ವಿಧಿಸಲಾಗುತ್ತಿದೆ. ಆದರೆ,ಆ ಕರಿಮೆಣಸನ್ನು ಶ್ರೀಲಂಕಾಕ್ಕೆ ತಂದು ಭಾರತ ಹಾಗೂ ಶ್ರೀಲಂಕಾದ ಅಮದು ನೀತಿಯನ್ನು ದುರ್ಬಳಕೆ ಮಾಡಿಕೊಂಡು ಭಾರತಕ್ಕೆ ತರಲಾಗುತಿತ್ತು.

ಇದೀಗ ಈ ಅಕ್ರಮ ಅಮದಿಗೆ ಕಡಿವಾಣ ಹಾಕಲಾಗಿದೆ. ಹಾಗಾಗಿಯೇ ಧಾರಣೆ ಅಧಿಕವಾಗಿದೆ ಎಂಬ ಮಾತುಗಳು ಮಾರುಕಟ್ಟೆ ವಲಯದಲ್ಲಿ ಕೇಳಿ ಬರುತ್ತಿದೆ. ಈ ಏರಿಕೆ ಇನ್ನೆಷ್ಟು ದಿನ ಇರಲಿದೆ ಎಂಬ ಅತಂಕವೂ ಕೃಷಿಕರನ್ನು ಕಾಡುತ್ತಿದೆ. ಹಾಗಾಗಿ ಆತನೂ ಬೆಲೆಯೆರಿಕೆಯನ್ನು ಸೂಕ್ಷ್ಮವಾಗಿ ಗಮನಿಸುತಿದ್ದಾನೆ. ದಿಡೀರ್ ಆಗಿ ತನ್ನ ಉತ್ಪನ್ನವನ್ನು ಮಾರುಕಟ್ಟೆಗೆ ತರುತ್ತಿಲ್ಲ . ಅಲ್ಲದೇ ಈ ಬಾರಿಯ ಅಕಾಲಿಕ ಮಳೆಯಿಂದ ಬೆಳೆ ನಷ್ಟವಾಗಿ ಉತ್ಪನ್ನದ ಕೊರತೆಯೂ ಇದೆ
ಸದ್ಯ ಮಾರುಕಟ್ಟೆಗೆ ಕೃಷಿಕರಿಂದ ಕರಿಮೆಣಸು ಅವಕವಾಗುತ್ತಿಲ್ಲವಾದುದರಿಂದ ಬೆಲೆಯೆರಿಕೆ ಇನ್ನೊಂದಷ್ಟು ಸಮಯ ಮುಂದುವರಿಯಲಿದೆ. ನವೆಂಬರ್ ಅಂತ್ಯಕ್ಕೆ ಧಾರಣೆ ರೂ 600 ಅನ್ನು ತಲುಪುವ ಸಾಧ್ಯತೆಯೂ ಅಲ್ಲಗೆಳೆಯುವಂತಿಲ್ಲ ಎಂದು ಮಾರುಕಟ್ಟೆ ತಜ್ನರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ