ಮನೆಯೊಂದರಿಂದ ಅಂದಾಜು ಹನ್ನೆರಡು ಲಕ್ಷ ರೂಪಾಯಿ ಮೌಲ್ಯ ದ 40 ಪವನ್ ಚಿನ್ನಾಭರಣ ಹಾಗೂ ಒಂದಷ್ಟು ನಗದು ಕಳವು ಗೈದ ಘಟನೆ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದಲ್ಲಿ ಅ .31 ರಂದು ನಡೆದಿದೆ.
ಇಂದಬೆಟ್ಟು ಗ್ರಾಮದ ಬಂಗಾಡಿ ದೇರಾಜೆ ಮನೆ ನಿವಾಸಿ ಕೃಷಿಕ ಹಾಗೂ ಅಡಿಕೆ ವ್ಯಾಪರಿ ಮಹಮ್ಮದ್ ಎಂಬವರ ಮನೆಯಲ್ಲಿ ಇಷ್ಟು ಅಗಾಧ ಪ್ರಮಾಣದ ಕಳ್ಳತನ ನಡೆದಿದೆ. ಮನೆ ಯಜಮಾನ ತೋಟಕ್ಕೆ ಹೋಗಿದ್ದಾಗ ಹಾಗೂ ಮನೆಯ ಇತರ ಸದಸ್ಯರು ಸಮಾರಂಭವೊಂದರಲ್ಲಿ ಭಾಗಿಯಾಗಲು ತೆರಳಿದ್ದ ವೇಳೆ ಹೊಂಚು ಹಾಕಿ ಕಳ್ಳರು ಕೃತ್ಯ ಎಸಗಿರುವುದಾಗಿ ಸಂಶಯಿಸಲಾಗಿದೆ.
ಮನೆ ಯಜಮಾನ ಮಹಮ್ಮದ್ ರವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಅದರಂತೆ ಪ್ರಕರಣ ದಾಖಲಾಗಿದೆ.
ಏನಿದೆ ದೂರಿನಲ್ಲಿ?
ಅ. 31 ರಂದು ಬೆಳಗ್ಗೆ ಮಹಮ್ಮದ್‌ರವರ ಪತ್ನಿ ತಮ್ಮ ಇಬ್ಬರು ಮಕ್ಕಳೊಂದಿಗೆ, ಅವರ ತಮ್ಮ ಸಪ್ವಾನ್ ಎಂವರ ಮದುವೆ ನಿಶ್ಚಿತಾರ್ಥಕ್ಕಾಗಿ ಬಂಟ್ವಾಳ ತಾಲೂಕಿನ ಉಳಿ ಗ್ರಾಮಕ್ಕೆ ತೆರಳಿದ್ದರು. ಬೆಳಿಗ್ಗೆಯಿಂದ ಮಹಮ್ಮದ್ ರವರು ಮನೆಯಲ್ಲೆ ಇದ್ದು ಸಂಜೆ ವೇಳೆ ಅಡಿಕೆ ತೋಟದಲ್ಲಿ ಹುಲ್ಲು ತೆಗೆಯಲು ಹೋಗಿದ್ದರು.
ಬಂಟ್ವಾಳದ ಉಳಿಗೆ ನಿಶ್ಚಿತಾರ್ಥಕ್ಕೆ ಹೋಗಿದ್ದ ಪತ್ನಿ ಮತ್ತು ಮಕ್ಕಳು ಸಂಜೆ ವಾಪಾಸ್ಸು ಬಂದಿದ್ದು ಈ ವೇಳೆ ಕೃತ್ಯ ಬೆಳಕಿಗೆ ಬಂದಿದೆ. ಸಂಜೆ ಮನೆಯೊಳಗೆ ಪ್ರವೇಶಿಸುತ್ತಲೇ ಮನೆಯೊಳಗಿನ ದೃಶ್ಯಗಳು ಸಂಶಯಾಸ್ಪದವಾಗಿ ಕಂಡ ಹಿನ್ನಲೆಯಲ್ಲಿ ಪತ್ನಿಯೂ ತೋಟದಲ್ಲಿದ್ದ ಪತಿ ಮಹಮ್ಮದ್‌ರನ್ನು ಕರೆದು ಮನೆಯಿಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮನೆಯ ಗೋದ್ರೇಜ್‌ನ ಬಾಗಿಲು ಸ್ವಲ್ಪ ತೆರೆದಿದ್ದು ಕಂಡು ಬಂದಿದೆ. ಹೀಗಾಗಿ ಅದನ್ನು ತೆರೆದು ನೋಡಿದಾಗ ಗಾಡ್ರೇಜ್‌ನ ಒಂದು ಲಾಕರ್‌ನಲ್ಲಿ ಇರಿಸಿದ್ದ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ನಗದು ಸಹಿತ ಚಿನ್ನಾಭರಣ ಕಳವು ಆಗಿರುವುದು ಪತ್ತೆಯಾಗಿದೆ.
ಗೋದ್ರೇಜ್‌ನಲ್ಲಿದ್ದ 5,200 ರೂ ನಗದು ಮತ್ತು 13 ಪವನ್‌ನ ಒಂದು ಕಾಯಿನ್ ನೆಕ್ಲೆಸ್, 1 ಪವನಿನ ಚೈನ್.1 ಪವನಿನ ಗುಂಡು ಇರುವ ಸಣ್ಣ ಚೈನ್, ಒಂದೂವರೆ ಪವನಿನ ಎರಡು ಮಕ್ಕಳ ಚೈನ್, 4 ಪವನಿನ ಕಾಯಿನ್ಸ್, 16 ಪವನಿನ 4 ಚಿನ್ನದ ಬಿಸ್ಕೆಟ್, ಸುಮಾರು ಒಂದೂವರೆ ಇಂಚು ಉದ್ದದ 2 ಪವನಿನ ಚಿನ್ನದ ಗಟ್ಟಿ, ವಾಚ್ ಆಕಾರದ ಚಿತ್ರವಿರುವ ಅರ್ಧ ಪವನಿನ ಬ್ರಾಸ್ ಲೈಟ್, ಅರ್ಧ ಪವನಿನ ತುಂಡಾದ ಬಳೆ ಮತ್ತು ಪೆಂಡೆಂಟ್, ಅರ್ಧ ಪವನಿನ ಮಗುವಿನ ಕಿವಿ ಓಲೆ ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕಳವಾದ ಚಿನ್ನಾಭರಣಗಳ ಒಟ್ಟು ಮೌಲ್ಯ ಸುಮಾರು ರೂ. 12,05,200 ಎಂದು ಅಂದಾಜಿಸಲಾಗಿದೆ. ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸ್ಥಳ ಪರಿಶೀಲನೆ ನಡೆಸಿದ್ದಾರೆ.