ಮಂಗಳೂರು ನ 1 : ಕರ್ನಾಟಕ ರಾಜ್ಯೋತ್ಸವ ಆಚರಣೆ ಯ ಸಂದರ್ಭ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ಸಂದರ್ಭ ರಾಷ್ಟ್ರ ಧ್ವಜ ತಲೆಕೆಳಗಾಗಿ ಹಾರಿದ ಘಟನೆ ನ.1 ರ ಸೋಮವಾರ ಮಂಗಳೂರಿನ ನೆಹರು ಮೈದಾನ ದಲ್ಲಿ ನಡೆದಿದೆ.
ಸಂಪ್ರದಾಯದಂತೆ, ನೆಹರು ಮೈದಾನದಲ್ಲಿ ದಕ ಜಿಲ್ಲಾ ವ್ಯಾಪ್ತಿಯ ಜಿಲ್ಲಾ ಮಟ್ಟದ ರಾಜ್ಯೋತ್ಸವವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶಿಷ್ಟಚಾರದಂತೆ ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ ರವರು ರಾಷ್ಟ್ರ ಧ್ವಜಾರೋಹಣ ಮಾಡುವ ಸಂದರ್ಭದಲ್ಲಿ ರಾಷ್ಟ್ರ ಧ್ವಜ ತಲೆಕೆಳಗಾಗಿ ಹಾರಿಸಲ್ಪಟ್ಟಿದೆ.
ಧ್ವಜ ಸ್ಥಂಬಕ್ಕೆ ಧ್ವಜ ಬಿಗಿಯುವ ಕಾರ್ಯ ಮಾಡುವ ಸಿಬಂದಿಯ ಎಡವಟ್ಟಿನಿಂದ ಈ ಅಚಾತುರ್ಯ ಜರುಗಿದೆ ಎನ್ನಲಾಗಿದೆ. ಅತಿಥಿ ಅಭ್ಯಾಗತರು ಹಾಗೂ ಸಭಿಕರು ಧ್ವಜವಂದನೆ ನಡೆಸಿದ ಕೆಲ ಹೊತ್ತುಗಳ ಬಳಿಕ ನಡೆದ ಅಚಾತುರ್ಯ ಬೆಳಕಿಗೆ ಬಂದಿದೆ.

ಕೂಡಲೇ ಸಂಬಂದಪಟ್ಟವರು ಅದನ್ನು ಸರಿಪಡಿಸಿದರು. ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಪೊಲೀಸ್ ಕಮಿಷನರ್ ಶಶಿಕುಮಾರ್, ಉಸ್ತುವಾರಿ ಸಚಿವ ಅಂಗಾರ, ಸಂಸದ ನಳಿನ್ ಕುಮಾರ್, ಶಾಸಕರಾದ ವೇದವ್ಯಾಸ ಕಾಮತ್, ಯು.ಟಿ.ಖಾದರ್ ಸೇರಿದಂತೆ ಉಪಸ್ಥಿತರಿದ್ದ ಹಿರಿ ಕಿರಿಯ ಅಧಿಕಾರಿ ವರ್ಗ ಹಾಗೂ ಜನಪ್ರತಿನಿಧಿಗಳು ಈ ಘಟನೆಯಿಂದ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ.

ಜಿಲ್ಲಾಮಟ್ಟದಲ್ಲಿ ಮೊದಲ ಬಾರಿ
ಈ ಹಿಂದೆ ಕೆಲ ಶಾಲೆ, ಸರಕಾರಿ ಕಛೇರಿಗಳಲ್ಲಿ ಈ ರೀತಿ ರಾಷ್ಟ್ರ ಧ್ವಜ ತಲೆಕೆಳಗಾಗಿ ಹಾರಿದ ಘಟನೆ ನಡೆದಿದೆ. ಆದರೆ, ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಮಂಗಳೂರಿನ ಮಟ್ಟಿಗೆ ಇದೇ ಮೊದಲ ಬಾರಿ ಈ ರೀತಿಯ ತಪ್ಪು ನಡೆದಿದೆ ಎಂದು ಹೇಳಲಾಗುತ್ತಿದೆ.;
.