ಮಂಗಳೂರು : ಅ 30 : ಖಾಸಗಿ ಆಸ್ಪತ್ರೆಯಲ್ಲಿರುವ ರಾಜ್ಯದ ಏಕೈಕ ಜನೌಷಧಿ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪುತ್ತೂರಿನ ಪ್ರಗತಿ ಹಾಸ್ಪಿಟಲ್ ಗೆ ಜನೌಷಧಿ ಮಿತ್ರ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯನ್ನು ಕೇಂದ್ರ ಸಚಿವರಾದ ಭಗವಂತ ಖೂಬಾರವರು ಪ್ರಗತಿ ಆಸ್ಪತ್ರೆಯ ಮುಖ್ಯ ವೈದ್ಯರಾದ ಹಾಗೂ ಪುತ್ತೂರು ಮೆಡಿಕಲ್ ಅಸೋಸಿಯೆಷನ್ ನ ಅಧ್ಯಕ್ಷರಾದ ಡಾ. ಶ್ರೀಪತಿ ರಾವ್ ಅವರಿಗೆ ಶುಕ್ರವಾರ ಮಂಗಳೂರಿನಲ್ಲಿ ವಿತರಿಸಿದರು.
ಪ್ರಗತಿ ಹಾಸ್ಪಿಟಲ್ ‘ನ ಜನೌಷಧಿ ಕೇಂದ್ರ ಪುತ್ತೂರಿನ ಪ್ರಥಮ ಜನೌಷಧಿ ಕೇಂದ್ರ ಎಂಬ ಖ್ಯಾತಿಗೆ ಪಾತ್ರವಾಗಿದೆ.
ಮಂಗಳೂರಿನ ರಮಣ ಪೈ ಸಭಾಂಗಣದಲ್ಲಿ ಫಾರ್ಮಾ ಸ್ಯುಟಿಕಲ್ಸ್ ಮತ್ತು ಮೆಡಿಕಲ್ ಡಿವೈಸಸ್ ಬ್ಯೂರೊ ಅಫ್ ಇಂಡಿಯಾ ( ಪಿಎಂಬಿಐ) ಆಯೋಜಿಸಿದ್ದ ಜನೌಷಧ ಮಿತ್ರ ಸಮ್ಮೇಳನ ಮತ್ತು ರಾಷ್ಟ್ರೀಯ ಏಕತಾ ಸಪ್ತಾಹ ಕಾರ್ಯಕ್ರಮದಲ್ಲಿ ಐವರು ಜನೌಷಧಿ ಮಿತ್ರರನ್ನು ಹಾಗೂ ಐವರು ಜನೌಷಧಿ ಪ್ರಬುದ್ದರನ್ನು ಸನ್ಮಾನಿಸಲಾಯಿತು.
ಜನೌಷಧಿ ಎಂಬ ಪ್ರಧಾನಿಯವರ ಮಹತ್ವಾಕಾಂಕ್ಷೆಯ ಯೋಜನೆಯಾದ ಪುತ್ತೂರಿನ ಜನಮಾನಸದಲ್ಲಿ ಬಿತ್ತಿದ, ಪುತ್ತೂರಿಗೆ ಈ ಅತ್ಯಮೂಲ್ಯ ವ್ಯವಸ್ಥೆಯನ್ನು ಪರಿಚಯಿಸಿದ ಸಾಧನೆಗಾಗಿ ಪ್ರಗತಿ ಹಾಸ್ಪಿಟಲ್ ಗೆ ಈ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಕೇಂದ್ರ ಸಚಿವರ ಜತೆ , ಕರ್ನಾಟಕ ಸರಕಾರದ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್ ಅಂಗಾರ,ಸಂಸದ ನಳಿನ್ ಕುಮಾರ್ ಕಟೀಲ್ , ಶಾಸಕ ವೇದವ್ಯಾಸ ಡಿ. ಕಾಮತ್ ಉಪಸ್ಥಿತರಿದ್ದರು.

ಅತ್ಯುತ್ತಮ ಯೋಜನೆ
ಜನೌಷಧ ಕೇಂದ್ರ ಅಪರೂಪದ ಪರಿಕಲ್ಪನೆ. ದುಬಾರಿ ಬೆಲೆ ತೆತ್ತು ನಿತ್ಯ ಸೇವಿಸುವ ಔಷಧಿಗಳನ್ನು ಖರೀದಿಸುತ್ತಿದ್ದವರಿಗೆ ಇದು ವರದಾನವಾಗಿ ಪರಿಣಾಮಿಸಿದೆ. ಸಣ್ಣ ಅದಾಯವಿರುವ ಕುಟುಂಬಗಳು ತಿಂಗಳಿಗೆ ಸಾವಿರಗಟ್ಟಳೆ ಖರ್ಚು ಮಾಡುತಿದ್ದರು . ಜನೌಷಧಿಯಿಂದಾಗಿ ಈ ಖರ್ಚು ಕೆಲವು ನೂರುಗಳಿಗೆ ಇಳಿದಿದೆ. ಅಲ್ಲದೇ ಪಕ್ಷ, ಧರ್ಮ , ಪಂಥದ ಹಂಗಿಲ್ಲದೆ ಎಲ್ಲರೂ ಇದರ ಸದ್ಬಳಕೆ ಮಾಡುತ್ತಿರುವುದು ಸಂತಸದ ವಿಷಯ ಎಂದು ನಿಖರ ನ್ಯೂಸಿಗೆ ಡಾ.ಶ್ರೀಪತಿ ರಾವ್ ತಿಳಿಸಿದರು.