ಬೆಂಗಳೂರು: ಅ 30: ಅಪರೂಪದ ವಿದ್ಯಮಾನವೊಂದರಲ್ಲಿ ತ್ರಿವಳಿ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗೆ ರಾಜ್ಯ ಹೈಕೋರ್ಟು 15 ದಿನಗಳ ಪೆರೋಲ್ ಮಂಜೂರು ಮಾಡಿದೆ. ಮಗಳ ಮದುವೆ ಸಮಾರಂಭದಲ್ಲಿ ಪಾಲ್ಗೊಳಲು ಅವಕಾಶ ಕಲ್ಪಿಸುವ ಹಿನ್ನಲೆಯಲ್ಲಿ ಪೆರೋಲ್ ಮಂಜೂರು ಮಾಡಬೇಕು ಎಂದು ವ್ಯಕ್ತಿಯ ಪತ್ನಿ ಹಾಗೂ ಮಗಳು ನ್ಯಾಯಾಲಯವನ್ನು ಕೋರಿದ್ದರು.
ಪತ್ನಿ ಹಾಗೂ ಮಗಳ ಕೋರಿಕೆಯನ್ನು ಮಾನ್ಯ ಮಾಡಿದ ಹೈಕೋರ್ಟು ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳುವುದಕ್ಕಾಗಿ 15 ದಿನಗಳ ಪೆರೋಲ್ ಮಂಜೂರು ಮಾಡಿದ್ದೂ ‘ಸಂತನಿಗೆ ಚರಿತ್ರೆ ಇರುತ್ತದೆ, ಅಂತೆಯೇ ಪಾಪಿಗೂ ಭವಿಷ್ಯವಿರುತ್ತದೆ’ ಎಂದು ಹೇಳಿದೆ.
ಅರ್ಜಿದಾರರ ಕೋರಿಕೆಯನ್ನು ವಿರೋಧಿಸಿದ್ದ ಹೆಚ್ಚುವರಿ ಸರ್ಕಾರಿ ವಕೀಲರು, ‘ಕೈದಿಯು ತ್ರಿವಳಿ ಕೊಲೆ ಪ್ರಕರಣದಲ್ಲಿ ಅಪರಾಧಿಯಾಗಿದ್ದಾನೆ. ಪೆರೋಲ್ ಹಕ್ಕು ಅಲ್ಲ’ ಎಂದು ವಾದಿಸಿದ್ದರು. ‘ಅಪರಾಧಿಯು ನಾಗರಿಕ ಸಮಾಜದ ಸಂಪರ್ಕದಲ್ಲಿರಬೇಕು. ಜೈಲಿನಿಂದ ಬಿಡುಗಡೆಯಾದಾಗ ಸಮಾಜಕ್ಕೆ ಆತ ಅಪರಿಚಿತನಂತೆ ಆಗಬಾರದು . ಇದರಿಂದ ಆತನಿಗೆ ಜೀವನ ಸಾಗಿಸಲು ಕಷ್ಟವಾಗಬಹುದು’ ಈ ಮಹತ್ವದ ಉದ್ದೇಶದಿಂದಲೇ ಪರೋಲ್ ನೀಡುತ್ತಿರುವುದಾಗಿ ಪೆರೋಲ್ ಮಂಜೂರು ಮಾಡಿರುವ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
‘ಮಗಳ ಮದುವೆಯಲ್ಲಿ ತಂದೆ ಹಾಜರಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಪ್ರತಿ ಸಂತನಿಗೂ ಒಂದು ಚರಿತ್ರೆ ಇದ್ದಂತೆ ಪ್ರತಿ ಪಾಪಿಗೂ ಭವಿಷ್ಯವಿರುತ್ತದೆ ಎಂಬುದನ್ನು ಮರೆಯಲಾಗದು’ ಎಂದು ನ್ಯಾಯಪೀಠ ತೀರ್ಪಿನಲ್ಲಿ ಉಲ್ಲೇಖಿಸಿದೆ.
ನವೆಂಬರ್ 1ರ ಮಧ್ಯಾಹ್ನ ಅಪರಾಧಿಯನ್ನು ಜೈಲಿನಿಂದ ಬಿಡುಗಡೆ ಮಾಡಿ, ಆತ ನ.15ಕ್ಕೆ ಹಿಂದಿರುಗುವಂತೆ ಕಾರಾಗೃಹದ ಅಧಿಕಾರಿಗಳು ಪೆರೋಲ್ ಮಂಜೂರು ಮಾಡಬೇಕು. ಹೊರಗಿರುವ ಅವಧಿಯಲ್ಲಿ ಯಾವುದೇ ರೀತಿಯ ಅಪರಾಧ ಕೃತ್ಯ ಎಸಗದಂತೆ ಮತ್ತು ಜೈಲಿಗೆ ಹಿಂದಿರುಗಿ ಬಾರದೇ ತಪ್ಪಿಸಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕು. ಸರಿಯಾದ ಷರತ್ತುಗಳನ್ನು ವಿಧಿಸಬೇಕು ನ್ಯಾಯಪೀಠ ಆದೇಶಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಗಂಗಾಳು ಗ್ರಾಮದ ವ್ಯಕ್ತಿಯೊಬ್ಬ ತ್ರಿವಳಿ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದು, 1999ರ ಮಾರ್ಚ್ 2ರಿಂದಲೂ ಜೈಲಿನಲ್ಲಿದ್ದಾನೆ. ಸದ್ಯ ಈತ ಬೆಳಗಾವಿ ಕೇಂದ್ರ ಕಾರಾಗೃಹದಲ್ಲಿ ಸಜಾ ಬಂದಿ. ನವೆಂಬರ್ 7 ಮತ್ತು 8ರಂದು ಕೊಳ್ಳೇಗಾಲದಲ್ಲಿ ನಡೆಯಲಿರುವ ಮಗಳ ಮದುವೆಯಲ್ಲಿ ಭಾಗವಹಿಸಲು ಪೆರೋಲ್ ಮಂಜೂರು ಮಾಡುವಂತೆ ಆತ ಸಲ್ಲಿಸಿದ್ದ ಮನವಿಯನ್ನು ಕಾರಾಗೃಹದ ಅಧಿಕಾರಿಗಳು ಮಾನ್ಯ ಮಾಡಿರಲಿಲ್ಲ. ಅದನ್ನು ಪ್ರಶ್ನಿಸಿ ಅಪರಾಧಿಯ ಪತ್ನಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.