ಪುತ್ತೂರು: ಎಂಟನೇ ತರಗತಿಯ ವಿದ್ಯಾರ್ಥಿಯೊಬ್ಬ ಲಾಕ್ ಡೌನ್ ಸಂದರ್ಭ ತಾನೂ ದುಡಿದು ಸಂಪಾದಿಸಿದ ಹಣವನ್ನು ಇತ್ತೀಚೆಗೆ ಕಾಶ್ಮೀರದಲ್ಲಿ ದೇಶಕ್ಕಾಗಿ ಪ್ರಾಣ ತೆತ್ತ ಹನ್ನೊಂದು ಮಂದಿ ದೇಶದ ಹೆಮ್ಮೆಯ ಸೈನಿಕರ ಕುಟುಂಬಕ್ಕೆ ಸಮರ್ಪಿಸುವ ಮೂಲಕ ಉತ್ಕಟ ದೇಶ ಪ್ರೇಮವನ್ನು ಮೆರೆದಿದ್ದಾನೆ.
ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ(ಸಿಬಿಎಸ್‍ಇ)ದ ಎಂಟನೆಯ ತರಗತಿ ವಿದ್ಯಾರ್ಥಿ ಶ್ರೀಕೃಷ್ಣ ಎಸ್ ನಟ್ಟೋಜ ತನ್ನ ಸ್ವಂತ ದುಡಿಮೆಯ ಹಣವನ್ನು ಸೈನಿಕ ಕುಟುಂಬಕ್ಕೆ ಸಮರ್ಪಿಸಿದ ವಿದ್ಯಾರ್ಥಿ.
ಕೊರೋನಾ ಕಾರಣದಿಂದ ಸರಿಸುಮಾರು ಒಂದೂವರೆ ವರ್ಷಗಳ ಕಾಲ ಆನ್‍ಲೈನ್ ತರಗತಿಗಳಾಗುವ ಸಂದರ್ಭದಲ್ಲಿ ಶ್ರೀಕೃಷ್ಣ ಆನ್‍ಲೈನ್ ತರಗತಿಯ ನಿರ್ವಾಹಕನಾಗಿ ಕಾರ್ಯನಿರ್ವಹಿಸಿದ್ದ. ಆ ಸಂದರ್ಭದಲ್ಲಿ ತಾನು ಪಡೆದ ಸಂಭಾವನೆಯನ್ನು ಖರ್ಚು ಮಾಡದೆ ಬ್ಯಾಂಕ್ ಖಾತೆಯಲ್ಲಿ ಜಮೆ ಮಾಡಿ ಒಟ್ಟು ಆರು ಸಾವಿರದಷ್ಟನ್ನು ಸಂಗ್ರಹಿಸಿದ್ದ. ಇದೀಗ ಅ ಮೊತ್ತದಲ್ಲಿ ಐದು ಸಾವಿರದಷ್ಟನ್ನು ಇದೀಗ ಸೈನಿಕರ ಕುಟುಂಬಕ್ಕೆ ನೀಡುವ ಮೂಲಕ ಎಂಟನೆಯ ತರಗತಿಯ ಈ ಪೋರ ಅನೇಕ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದ್ದಾನೆ
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆ ಹಿಂದಿನಿಂದಲೂ ತನ್ನ ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮ, ರಾಷ್ಟ್ರ ಭಕ್ತಿ. ರಾಷ್ಟ್ರೀಯ ವಿಚಾರಧಾರೆ ಬಿತ್ತುವುದರಲ್ಲಿ ಎತ್ತಿದ ಕೈ. ದೇಶ ಕಾಯುವ ಸೈನಿಕರ ಬಗ್ಗೆ ಈ ವಿದ್ಯಾಸಂಸ್ಥೆಗೆ ಎಲ್ಲಿಲ್ಲದ ಮಮಕಾರ. ಹೀಗಾಗಿ ಇಲ್ಲಿ ಮೃತ ಸೈನಿಕರ ಕುಟುಂಬಕ್ಕೆ ಆರ್ಥಿಕ ಸಹಾಯಹಸ್ತ ಚಾಚುವ ಅಭಿಯಾನ ನಿರಂತರವಾಗಿ ನಡೆಯುತ್ತಿರುತ್ತದೆ. ಈಗಾಗಾಲೇ ಹಲವಾರು ವಿದ್ಯಾರ್ಥಿಗಳು ತಮ್ಮದಾದ ಕೊಡುಗೆಗಳನ್ನು ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಸೈನಿಕ ಕುಟುಂಬಗಳಿಗೆ ಒದಗಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಎಂಟನೆಯ ತರಗತಿಯ ಶ್ರೀಕೃಷ್ಣ ದೊಡ್ಡ ಮೊತ್ತವನ್ನು ಒದಗಿಸಿಕೊಟ್ಟಿರುವುದು ಮತ್ತು ಅದು ತನ್ನ ಸ್ವಂತ ದುಡಿಮೆಯ ಹಣ ಎಂಬುದು ಗಮನಾರ್ಹ ವಿಚಾರ.

ಶ್ರೀಕೃಷ್ಣ ಎಸ್ ನಟ್ಟೋಜ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹಾಗೂ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ದಂಪತಿ ಪುತ್ರ.
‘ಕ್ಯಾಮರಾ ನಿರ್ವಹಣೆ, ತಾಂತ್ರಿಕ ಸಂಗತಿಗಳಲ್ಲಿ ನನಗೆ ಅತೀವ ಆಸಕ್ತಿಯಿದೆ. ಹಾಗಾಗಿ ಆನ್‍ಲೈನ್ ತರಗತಿಯ ಸಂದರ್ಭದಲ್ಲಿ ಕ್ಯಾಮರಾ ಹಾಗೂ ಅದಕ್ಕೆ ಸಂಬಂಧಿಸಿದ ತಾಂತ್ರಿಕ ವಿಚಾರಗಳಲ್ಲಿ ತೊಡಗಿಕೊಂಡು ತರಗತಿ ಸರಾಗವಾಗಿ ಮುಂದುವರಿಯುವಂತೆ ಸಹಕರಿಸಿದ್ದೇನೆ. ಅದಕ್ಕೆ ಸಂಬಂಧಿಸಿದಂತೆ ನನಗೆ ದೊರೆತ ಸಂಭಾವನೆಯನ್ನು ನಾನು ದೇಶಕ್ಕಾಗಿ ಸಮರ್ಪಿಸಬೇಕೆಂದು ಬಯಸಿದ್ದೇನೆ. ನನ್ನ ಸಂಪಾದನೆ ಸಾರ್ಥಕ ಕಾರ್ಯಕ್ಕೆ ವಿನಿಯೋಗವಾಗುತ್ತಿದೆ ಎಂಬ ಖುಷಿ ನನಗಿದೆ.ʼ ಶ್ರೀಕೃಷ್ಣ ಎಸ್ ನಟ್ಟೋಜ, ವಿದ್ಯಾರ್ಥಿ, ಅಂಬಿಕಾ ವಿದ್ಯಾಲಯ
–